

ನವದೆಹಲಿ: ಐಸಿಸಿ ಟಿ20 ಮಹಿಳಾ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ತಂಡ ಶುಭಾರಂಭ ಮಾಡಿದ್ದು, ದೆಹಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಮಣಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾದ ವನಿತೆಯರು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡ ಕೇವಲ 110 ರನ್ ಗಳನ್ನಷ್ಟೇ ಕಲೆಹಾಕಿದರು. ಶ್ರೀಲಂಕಾ ತಂಡ ಉತ್ತಮ ಆರಂಭ ಪಡೆಯಿತಾದರೂ, ಬಳಿಕ ಬಂದ ಆಟಗಾರ್ತಿಯರು ಅದನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಸಂಪೂರ್ಣ ವಿಫಲರಾದರು. ಆರಂಭಿಕರಾದ ಜಯಾಂಗಿಣಿ (17 ರನ್), ವೈಎ ಮೆಂಡಿಸ್ (30 ರನ್) ಮತ್ತು ಸುರಂಗಿಕಾ (37 ರನ್) ಅವರನ್ನು ಹೊರತು ಪಡಿಸಿದರೆ ಇನ್ನಾವುದೇ ಆಟಗಾರ್ತಿಯರು ಎರಡಂಕಿ ಕೂಡ ದಾಟಲಿಲ್ಲ. ಹೀಗಾಗಿ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಉತ್ತಮ ಸವಾಲಿನ ಮೊತ್ತವನ್ನು ಗುರಿಯಾಗಿ ನೀಡುವ ಅಕಾಶ ಹೊಂದಿತ್ತಾದರೂ, ಕೆಳ ಕ್ರಮಾಂಕದ ಆಟಗಾರ್ತಿಯ ವೈಫಲ್ಯದಿಂದಾಗಿ 110ರನ್ ಮಾತ್ರ ಗಳಿಸಲು ಶಕ್ತವಾಯಿತು.
ಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡದ ಕ್ಯಾಸ್ಪರೆಕ್ 2 ವಿಕೆಟ್ ಕಬಳಿಸಿದರೆ, ಟುಹುಹು, ಸಟ್ಟರ್ತ್ ವೈಟ್ ಮತ್ತು ಬ್ಯಾಟ್ಸ್ ಅವರು ತಲಾ 1 ವಿಕೆಟ್ ಗಳಿಸಿದರು. ಬಳಿಕ 111 ರನ್ ಗಳ ಮೊತ್ತವನ್ನು ಬೆನ್ನುಹತ್ತಿದ ಕಿವೀಸ್ ತಂಡ ಬ್ಯಾಟ್ಸ್ (37 ರನ್), ಪ್ರೀಸ್ಟ್ (28 ರನ್) ಮತ್ತು ಮೆಕ್ ಗ್ಲಾಶನ್ (21 ರನ್) ಅವರ ಸಂಘಟಿತ ಆಟದ ನೆರವಿನಿಂದ 3 ವಿಕೆಟ್ ಕಳೆದುಕೊಂಡು ಗುರಿಯನ್ನು ನಿರಾಯಾಸವಾಗಿ ಬೆನ್ನುಹತ್ತಿದರು. ಇನ್ನೂ 25 ಎಸೆತಗಳು ಬಾಕಿ ಇರುವಂತೆಯೇ ನ್ಯೂಜಿಲೆಂಡ್ ತಂಡ 111 ರನ್ ಪೇರಿಸಿ ಗುರಿಸಾಧಿಸಿತು. ಇನ್ನು ಶ್ರೀಲಂಕಾ ಪರ ರಣವೀರಾ ಮತ್ತು ಹಸ್ದ್ ಸಿರಿವರ್ಧನೆ ಅವರು ತಲಾ ವಿಕೆಟ್ ಪಡೆದರು.
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಿದೆ ಕಿವೀಸ್ ಆಟಗಾರ್ತಿ ಬ್ಯಾಟ್ಸ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.