ಭಾರತದ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಭಾರತದ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಪಾಕಿಸ್ತಾನದ "ಈಡನ್" ಅಜೇಯ ದಾಖಲೆ ಧೂಳಿಪಟ ಮಾಡಿದ ಭಾರತ

ಪಾಕಿಸ್ತಾನದ ವಿರುದ್ಧ ಈಡನ್ ಗಾರ್ಡನ್ ನಲ್ಲಿ ಗೆಲುವಿನ ಬರ ಎದುರಿಸುತ್ತಿದ್ದ ಭಾರತಕ್ಕೆ ಶನಿವಾರ ನಿಜಕ್ಕೂ ಗೆಲುವಿನ ಸುಗ್ಗಿ.

ಕೋಲ್ಕತಾ: ಪಾಕಿಸ್ತಾನದ ವಿರುದ್ಧ ಈಡನ್ ಗಾರ್ಡನ್ ನಲ್ಲಿ ಗೆಲುವಿನ ಬರ ಎದುರಿಸುತ್ತಿದ್ದ ಭಾರತಕ್ಕೆ ಶನಿವಾರ ನಿಜಕ್ಕೂ ಗೆಲುವಿನ ಸುಗ್ಗಿ.

ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಶನಿವಾರ ಪಾಕಿಸ್ತಾನದ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಮಳೆಯಿಂದಾಗಿ 18  ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಪಾಕಿಸ್ತಾನ ತಂಡವನ್ನು 118 ರನ್ ಗಳಿಗೆ ಕಟ್ಟಿ ಹಾಕಿತು. ಬಳಿಕ ತಂಡದ ಸ್ಫೋಟಕ ಬ್ಯಾಟ್ಸಮನ್  ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕ ಮತ್ತು ಯುವರಾಜ್ ಸಿಂಗ್ ಅವರ ಸಮಯೋಚಿತ ಆಟದ ನೆರವಿನಿಂದ 15.5 ಓವರ್ ಗಳಲ್ಲಿ ಜಯಭೇರಿ ಭಾರಿಸಿತು.

ಆ ಮೂಲಕ ಪಾಕಿಸ್ತಾನದ ಎದುರು ಈಡನ್ ಗಾರ್ಡನ್ ನಲ್ಲಿ ಸತತ 29 ವರ್ಷಗಳಿಂದ ಎದುರಿಸುತ್ತಿದ್ದ ಗೆಲುವಿನ ಬರವನ್ನು ಭಾರತ ನೀಗಿಸಿಕೊಂಡಿತು. ಭಾರತ ಮತ್ತು ಪಾಕಿಸ್ತಾನ ಈಡನ್  ಗಾರ್ಡನ್ ನಲ್ಲಿ ಮೊದಲ ಬಾರಿಗೆ 1987ರಲ್ಲಿ ಮುಖಾಮುಖಿಯಾಗಿದ್ದವು. ಅಂದಿನ ರೋಚಕ ಹೋರಾಟದಲ್ಲಿ ಪಾಕಿಸ್ತಾನದ ನಾಯಕ ಸಲೀಂ ಮಲ್ಲಿಕ್ ಅವರು ಭಾರತದಿಂದ ಗೆಲುವನ್ನು  ಕಸಿದುಕೊಂಡಿದ್ದರು. ಬಳಿಕ ಮತ್ತೆ 1989ರಲ್ಲಿ ಈಡನ್ ಗಾರ್ಡನ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗಿದ್ದವು. ಆಗ ಮತ್ತೆ ಭಾರತದ ಗೆಲುವಿಗೆ ಅಂದಿನ ನಾಯಕ ಇಮ್ರಾನ್ ಖಾನ್  ತಡೆಗೋಡೆಯಾಗಿ ನಿಂತರು.

ಇನ್ನು 2004ರಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸಮನ್ ಸಲ್ಮಾನ್ ಭಟ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಗೆಲುವನ್ನು ಕಸಿದುಕೊಂಡರು. ಇನ್ನು  2013ರಲ್ಲಿ ಭಾರತದ ಗೆಲುವಿಗೆ ಮಾರಕವಾಗಿದ್ದು, ಪಾಕಿಸ್ತಾನದ ಆರಂಭಿಕ ಆಟಗಾರ ನಾಸಿರ್ ಜಮಶೇಡ್. ಅಂದಿನ ಪಂದ್ಯದಲ್ಲಿ ಬರೋಬ್ಬರಿ 106 ರನ್ ಗಳಿಸುವ ಮೂಲಕ ಪಾಕಿಸ್ತಾನದ  ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಕೇವಲ 165 ರನ್ ಗಳಿಗೆ ಆಲ್ ಔಟ್ ಆಗಿತ್ತು. ಆ ಮೂಲಕ ಸತತ ನಾಲ್ಕು ಬಾರಿ ಈಡೆನ್ ಗಾರ್ಡನ್ ನಲ್ಲಿ ಪಾಕಿಸ್ತಾನದ  ವಿರುದ್ಧ ಸೋತು ಶರಣಾಗಿತ್ತು.

ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡ ಇತಿಹಾಸ ನಿರ್ಮಿಸಿದ್ದು, ಸತತ 29 ವರ್ಷಗಳ ಗೆಲುವಿನ ಬರವನ್ನು ನೀಗಿಸಿಕೊಂಡಿದೆ.

Related Stories

No stories found.

Advertisement

X
Kannada Prabha
www.kannadaprabha.com