ಭಾರತದ ಎದುರು ಪಾಕ್ ಸೋಲಿಗೆ ಪ್ರಮುಖ ಕಾರಣಗಳು

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಸೋತಿಲ್ಲ ಎಂಬ ಹಿರಿಮೆಯ ನಡುವೆಯೂ ಶನಿವಾರ ಪಾಕಿಸ್ತಾನ ಭಾರತ ತಂಡದ ಎದುರು ಹೀನಾಯವಾಗಿ ಸೋತಿದೆ.
ಪಾಕಿಸ್ತಾನದ ವಿರುದ್ಧ ಗೆದ್ದ ಟೀಂ ಇಂಡಿಯಾ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಪಾಕಿಸ್ತಾನದ ವಿರುದ್ಧ ಗೆದ್ದ ಟೀಂ ಇಂಡಿಯಾ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಕೋಲ್ಕತಾ: ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಸೋತಿಲ್ಲ ಎಂಬ ಹಿರಿಮೆಯ ನಡುವೆಯೂ ಶನಿವಾರ ಪಾಕಿಸ್ತಾನ ಭಾರತ ತಂಡದ ಎದುರು ಹೀನಾಯವಾಗಿ ಸೋತಿದೆ.

ಆ ಮೂಲಕ ವಿಶ್ವಕಪ್ ನಲ್ಲಿ ಪಾಕಿಸ್ತಾನ ಭಾರತ ತಂಡದ ವಿರುದ್ಧ ಗೆದ್ದಿಲ್ಲ ಎಂಬ ದಾಖಲೆ ಹಾಗೆಯೇ ಮುಂದುವರೆದಿದ್ದು, ಪಾಕಿಸ್ತಾನದ ಈ ಸೋಲಿಗೆ ಕ್ರಿಕೆಟ್ ತಜ್ಞರು ಹಲವು ಕಾರಣಗಳನ್ನು ನೀಡಿದ್ದಾರೆ. ಪಾಕಿಸ್ತಾನದ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದ ಆ ಪ್ರಮುಖ ಕಾರಣಗಳು ಇಂತಿವೆ.

ನಿರ್ಣಾಯಕವಾದ ಟಾಸ್

ಸಾಮಾನ್ಯವಾಗಿ ಟಿ20 ಟಾಸ್ ನಿರ್ಣಾಯಕ ಪಾತ್ರವಹಿಸುತ್ತದೆ. ನಿನ್ನೆ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿಯೂ ಕೂಡ ಇದು ಮುಂದುವರೆದಿತ್ತು. ಮಳೆಯಿಂದಾಗಿ 18 ಓವರ್ ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು ಮತ್ತು ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು. ಇದು ಪಾಕಿಸ್ತಾನದ ಸೋಲಿಗೆ ಮೊದಲ ಕಾರಣ.

ಭಾರತದ ಗೆಲುವಿನ ಅನಿವಾರ್ಯತೆ
ಇನ್ನು ನ್ಯೂಜಿಲೆಂಡ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಭಾರತ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. ಪಾಕಿಸ್ತಾನದ ಎದುರಿಗಿನ ತನ್ನ ದಾಖಲೆಯನ್ನು ಮುಂದುವರೆಸಬೇಕು ಅಥವಾ ಈಡನ್ ಗಾರ್ಡನ್ ನಲ್ಲಿ ಪಾಕಿಸ್ತಾನದ ಅಜೇಯ ದಾಖಲೆಯನ್ನು ಮುರಿಯಬೇಕು ಎನ್ನುವ ಯಾವುದೇ ಇರಾದೆ ಇಲ್ಲದೆ ಭಾರತ ಈ ಪಂದ್ಯವನ್ನು ಆಡಿತು. ಟೂರ್ನಿಯಲ್ಲಿ ಮುಂದುವರೆಯುವುದಕ್ಕಾಗಿ ಈ ಪಂದ್ಯ ಅತ್ಯಂತ ಮಹತ್ವ ಎಂದು ತಿಳಿದಿದ್ದ ಭಾರತೀಯ ಆಟಗಾರರ ಅದಕ್ಕೆ ತಕ್ಕಂತೆ ಎಲ್ಲ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಮೊದಲು ಬೌಲಿಂಗ್ ನಲ್ಲಿ ಪಾಕಿಸ್ತಾನವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಭಾರತ ತಂಡ ಬಳಿಕ ಆ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತು.

ವಿರಾಟ್ ಕೊಹ್ಲಿಯ ಅದ್ಭುತ ಫಾರ್ಮ್
ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದ ತಂಡದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅದೇ ಫಾರ್ಮ್ ಅನ್ನು ಟಿ20 ವಿಶ್ವಕಪ್ ನಲ್ಲಿಯೂ ಮುಂದುವರೆಸಿದ್ದಾರೆ. ಸಣ್ಣ ತಪ್ಪಿನಿಂದಾಗಿ ನ್ಯೂಜಿಲೆಂಡ್ ವಿರುದ್ಧ ಬೇಗನೇ ಔಟ್ ಆಗಿದ್ದ ಕೊಹ್ಲಿ ಈ ಪಂದ್ಯದಲ್ಲಿ ಆ ಯಡವಟ್ಟು ಮಾಡಿಕೊಳ್ಳಲಿಲ್ಲ. ಬದಲಿಗೆ ಪಾಕಿಸ್ತಾನಿ ಬೌಲರ್ ಗಳನ್ನು ಕ್ರಮೇಣ ದಂಡಿಸುತ್ತಾ ಸಾಗಿ, ಆಕರ್ಷಕ ಅರ್ಧಶತಕ ದಾಖಲಿಸಿದರು. ಇದರ ಪರಿಣಾಮ ಭಾರತ ಪಾಕಿಸ್ತಾನದ ವಿರುದ್ಧ ನಿರಾಯಾಸವಾಗಿ ಗೆಲುವು ಸಾಧಿಸಿತು.

ಭಾರತದ ಸಂಘಟಿತ ಬೌಲಿಂಗ್ ದಾಳಿ
ಮಳೆಯಿಂದಾಗಿ ತೊಯ್ದಿದ್ದ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಅಪಾಯಕಾರಿ ಎಂದು ತಿಳಿದಿದ್ದ ಧೋನಿ ಟಾಸ್ ಗೆದ್ದ ಕೂಡಲೇ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇನ್ನು ಭಾರತೀಯ ಬೌಲರ್ ಗಳು ಕೂಡ ಧೋನಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದರು. ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಗಲು ಪಂದ್ಯದ ಯಾವುದೇ ಹಂತದಲ್ಲಿಯೂ ಪಾಕಿಸ್ತಾನ ಬೃಹತ್ ಮೊತ್ತ ದಾಖಲಿಸದಂತೆ ಎಚ್ಚರಿಕೆ ವಹಿಸಿ ಬೌಲ್ ಮಾಡಿದರು. ಆಶೀಶ್ ನೆಹ್ರಾ, ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಬುಮ್ರಾಹ್ ಪಾಕಿಸ್ತಾನಿ ಬ್ಯಾಟ್ಸಮನ್ ಗಳನ್ನು ಕಂಗೆಡಿಸುವಂತೆ ಬೌಲ್ ಮಾಡಿದರು.

ಪಾಕ್ ಬ್ಯಾಟ್ಸಮನ್ ಗಳ ಕಂಗೆಡಿಸಿದ ಜಡ್ಡು, ಅಶ್ವಿನ್ ಜೋಡಿ
ಇನ್ನು ಪ್ರಮುಖವಾಗಿ ಭಾರತೀಯ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೋಡಿ ಪಾಕ್ ಬ್ಯಾಟ್ಸಮನ್ ಗಳು ಕಂಗೆಡುವಂತೆ ಬೌಲ್ ಮಾಡಿದರು. ಮೊದಲೇ ಮಳೆಯಿಂದಾಗಿ ನೆಂದಿದ್ದ ಪಿಚ್ ಹೆಚ್ಚು ತಿರುವು ಪಡೆಯುತ್ತದೆ ಎಂದು ತಿಳಿದ ಈ ಜೋಡಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕವಾಗಿ ಪಾಕಿಸ್ತಾನಿ ಬ್ಯಾಟ್ಸಮನ್ ಗಳನ್ನು ಕಾಡಿದರು. ಇನ್ನಿಂಗ್ಸ್ ಮಧ್ಯಮ 7 ಓವರ್ ಗಳಲ್ಲಿ ಈ ಜೋಡಿ 7 ಓವರ್ ಗಳಲ್ಲಿ ಕೇವಲ 37 ರನ್ ಮಾತ್ರ ನೀಡಿದ್ದು ಅವರ ಬೌಲಿಂಗ್ ಮೊನಚಿಗೆ ಹಿಡಿದ ಕನ್ನಡಿಯಾಗಿದೆ.

ಪಿಚ್ ಮರ್ಮ ಅರಿಯವಲ್ಲಿ ವಿಫಲವಾದ ಪಾಕ್
ಪ್ರಮುಖವಾಗಿ ಪಾಕಿಸ್ತಾನದ ಸೋಲಿಗೆ ಆ ತಂಡದ ಬ್ಯಾಟ್ಸಮನ್ ಗಳು ಕೂಡ ಕಾರಣ ಎನ್ನಬಹುದು. ಕೋಲ್ಕತಾದಲ್ಲಿ ಭಾರತದ ವಿರುದ್ಧ ಅಜೇಯ ತಂಡವಾಗಿದ್ದ ಪಾಕಿಸ್ತಾನಕ್ಕೆ ಆ ಪಿಚ್ ಮರ್ಮ ತಿಳಿದಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ಆಡಿದ ರೀತಿ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಭಾರತದ ಎದುರು ಪ್ರತೀ ಬಾರಿ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಿದ್ದ ಪಾಕಿಸ್ತಾನ ಬ್ಯಾಟ್ಸಮನ್ ಗಳು ನಿನ್ನೆ ಮಾತ್ರ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರು. ಇದು ಆ ತಂಡಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದ್ದ ಪಿಚ್ ನಲ್ಲಿ ಪಾಕಿಸ್ತಾನ ಬ್ಯಾಟ್ಸಮನ್ ಗಳು ರನ್ ಗಳಿಸಲು ಪರದಾಡುತ್ತಿದ್ದರು.

ಧೋನಿ ಚಾಣಾಕ್ಷತನ
ಇಡೀ ಪಂದ್ಯದ ಗೆಲುವಿನ ಕ್ರೆಡಿಟ್ ಹೇಗೆ ವಿರಾಟ್ ಕೊಹ್ಲಿಗೆ ಸಲ್ಲಬೇಕೋ ಹಾಗೆಯೇ ಆ ಕ್ರೆಡಿಟ್ ಅರ್ಧಪಾಲು ನಾಯಕ ಧೋನಿಗೂ ಸಲ್ಲಬೇಕು. ಏಕೆಂದರೆ ಮಳೆಯಿಂದಾಗಿ 18 ಓವರ್ ಗಳಿಗೆ ಸಮೀತವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ ಮುಲಾಜಿಲ್ಲದೇ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮಳೆಯಿಂದಾಗೆ ತೇವಾಂಶದಿಂದ ಕೂಡಿದ್ದ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡುವುದ ಅಪಾಯಕಾರಿ ಎಂದು ಧೋನಿಗೆ ತಿಳಿದಿತ್ತು. ಅಲ್ಲದೆ ಕೋಲ್ಕತಾ ಪಿಚ್ ಕೂಡ ಮೊದಲ ಇನ್ನಿಂಗ್ಸ್ ನಲ್ಲಿ ಸಾಕಷ್ಟು ತಿರುವು ಪಡೆಯುತ್ತದೆ ಎಂಬುದು ಇತಿಹಾಸದ ಪಂದ್ಯಗಳಿಂದ ತಿಳಿಯುತ್ತದೆ. ಹೀಗಾಗಿಯೇ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಷ್ಟೇ ಅಲ್ಲ ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡದ ಬ್ಯಾಟ್ಸಮನ್ ಗಳನ್ನು ಕಟ್ಟಿ ಹಾಕಲು ಆಗ್ಗಿಂದ್ದಾಗ್ಗೆ ಧೋನಿ ಬೌಲಿಂಗ್ ನಲ್ಲಿ ಬದಲಾವಣೆ ತರುತ್ತಿದ್ದರು.

ಪ್ರಮುಖವಾಗಿ ತಂಡದ ಸ್ಪಿನ್ ಅಸ್ತ್ರ ಆರ್ ಅಶ್ವಿನ್ ಅವರಿಗೆ ಹೊಸ ಬಾಲ್ ಹಂಚಿಕೊಳ್ಳಲು ಅವಕಾಶ ನೀಡಿದ್ದು ಧೋನಿ ಚಾಣಾಕ್ಷತನಕ್ಕೆ ಮತ್ತೊಂದು ಉದಾಹರಣೆ. ಧೋನಿ ನೀಡಿದ ಅವಕಾಶವನ್ನು ಸಮರ್ಥವಾಗಿ ಬಳಿಸಿಕೊಂಡ ಅಶ್ವಿನ್ 3 ಓವರ್ ಗಳನ್ನು ಎಸೆದು, 4 ರ ಸರಾಸರಿಯಲ್ಲಿ ಕೇವಲ 12 ರನ್ ಗಳನ್ನು ಮಾತ್ರ ನೀಡಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಭಸವಾಗಿ ಬ್ಯಾಟ್ ಬೀಸುತ್ತಿದ್ದ ಉಮರ್ ಅಕ್ಮಲ್ ಮತ್ತು ಶೋಯೆಬ್ ಮಲ್ಲಿಕ್ ಅವರ ಜೋಡಿಯನ್ನು ಬೇರ್ಪಡಿಸಲು ಧೋನಿ ರವೀಂದ್ರ ಜಡೇಜಾ ಕೈಗೆ ಬಾಲ್ ನೀಡಿದ್ದು ಯಶಸ್ವಿ ಕೂಡ ಆಗಿತ್ತು.

ಒಟ್ಟಾರೆ ಪಾಕಿಸ್ತಾನದ ಸೋಲಿಗೆ ಭಾರತದ ಸಂಘಟಿತ ಹೋರಾಟ ಮತ್ತು ವಿರಾಟ್ ಕೊಹ್ಲಿ ಅವರ ಸಮರ್ಥ ಬ್ಯಾಟಿಂಗ್ ನೆರವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com