ಬೂಮ್ ಬೂಮ್ ಅಫ್ರಿದಿಗೆ ಪಾಕ್ ಕ್ರಿಕೆಟ್ ಸಂಸ್ಥೆ ಕೊಟ್ಟ ದೊಡ್ಡ ಗಿಫ್ಟ್ ಇದೇ ಏನು..?

ಪಾಕಿಸ್ತಾನ ಕ್ರಿಕೆಟ್ ನಲ್ಲಿ ಇದೀಗ ನಾಯಕ ಶಾಹಿದ್ ಅಫ್ರಿದಿ ನಿವೃತ್ತಿಯದ್ದೇ ಮಾತು. ತಂಡದಿಂದ ಅಫ್ರಿದಿ ಅವರನ್ನು ಉಚ್ಛಾಟಿಸುವ ಹಂತಕ್ಕೆ ಪಿಸಿಬಿ ಹೋಗಲು ಅಫ್ರಿದಿ ಮಾಡಿದ್ದಾದರೂ ಏನು..?
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ (ಸಂಗ್ರಹ ಚಿತ್ರ)
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ (ಸಂಗ್ರಹ ಚಿತ್ರ)

ಪಾಕಿಸ್ತಾನ ಕ್ರಿಕೆಟ್ ನಲ್ಲಿ ಇದೀಗ ನಾಯಕ ಶಾಹಿದ್ ಅಫ್ರಿದಿ ನಿವೃತ್ತಿಯದ್ದೇ ಮಾತು. ಏಷ್ಯಾಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋತ ದಿನದಿಂದ ಆರಂಭವಾದ ಈ ಚರ್ಚೆಗೆ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಸೋತಾಗ ಒಂದು ಪೂರ್ಣ ಸ್ವರೂಪ ದೊರೆಯಿತು. ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಶಹರ್ಯಾರ್ ಖಾನ್  ಅಂತೂ ಹಾವೂ ಸಾಯಬಾರದೂ ಕೋಲೂ ಮುರಿಯಬಾರದು ಎನ್ನುವ ರೀತಿಯಲ್ಲಿ ಟಿ20 ವಿಶ್ವಕಪ್ ಬಳಿಕ ಶಾಹಿದ್ ಅಫ್ರಿದಿ ನಿವೃತ್ತಿ ಖಚಿತ ಎನ್ನುವ ರೀತಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಒಂದು ಹಂತದಲ್ಲಿಯಂತೂ ಅಫ್ರಿದಿ ನಿವೃತ್ತಿ ನೀಡದಿದ್ದರೆ ತಂಡದಿಂದಲೇ ಉಚ್ಛಾಟಿಸುವ ಕುರಿತು ಮಾತನಾಡಿದ್ದರು. ಪಾಕಿಸ್ತಾನ  ಕ್ರಿಕೆಟ್ ತಂಡದಿಂದ ಅಫ್ರಿದಿ ಅವರನ್ನು ಉಚ್ಛಾಟಿಸುವ ಹಂತಕ್ಕೆ ಪಿಸಿಬಿ ಹೋಗಲು ಅಫ್ರಿದಿ ಮಾಡಿದ್ದಾದರೂ ಏನು..? ಪಾಕಿಸ್ತಾನ ಕ್ರಿಕೆಟ್ ಗೆ ಅವರಿಂದಾದ ನಷ್ಟವಾದರೂ ಏನು..?

ಶಾಹಿದ್ ಅಫ್ರಿದಿ ಅಲಿಯಾಸ್ ಬೂಮ್ ಬೂಮ್ ಅಫ್ರಿದಿ..ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅಫ್ರಿದಿ ಬೂಮ್ ಬೂಮ್ ಅಫ್ರಿದಿ ಎಂದೇ ಖ್ಯಾತಿ ಪಡೆದಿದ್ದಾರೆ. ಇನ್ನು ಸಹ ಕ್ರಿಕೆಟಿಗರ ಪಾಲಿಗಂತೂ ಪ್ರೀತಿಯ ಲಾಲಾ..1996 ಅಕ್ಟೋಬರ್ 2ರಂದು ನೈರೋಬಿಯಲ್ಲಿ ಕೀನ್ಯಾ ವಿರುದ್ಧ ನಡೆದ ನಾಲ್ಕನೇ ಏಕದಿನ ಕ್ರಿಕೆಟ್  ಪಂದ್ಯದಲ್ಲಿ 16 ವರ್ಷ ವಯಸ್ಸಿನ ಶಾಹಿದ್ ಅಫ್ರಿದಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಅದೂ ಕೂಡ ತಂಡದ ಪ್ರಮುಖ ಬೌಲರ್ ಮುಷ್ತಾಕ್ ಅಹ್ಮದ್ ಗಾಯಗೊಂಡಿದ್ದರಿಂದ ಅಫ್ರಿದಿಗೆ ಆಡುವ ಭಾಗ್ಯ ಲಭಿಸಿತ್ತು. ಓರ್ವ ಲೆಗ್ ಸ್ಪಿನ್ನರ್ ಆಗಿ ಪಾಕ್ ತಂಡಕ್ಕೆ ಆಯ್ಕೆಯಾಗಿದ್ದ ಅಫ್ರಿದಿ 10 ಓವರ್ ಎಸೆದು ಯಾವುದೇ ವಿಕೆಟ್  ಪಡೆಯದೇ ಕೇವಲ 32 ರನ್ ಗಳನ್ನಷ್ಟೇ ನೀಡಿದ್ದರು. ಆ ಪಂದ್ಯದಲ್ಲಿ ಅಫ್ರಿದಿಗೆ ಬ್ಯಾಟಿಂಗ್ ಮಾಡುವ ಅವಕಾಶವೇ ದೊರೆಯಲಿಲ್ಲ. ಕೀನ್ಯಾ ನೀಡಿದ್ದ 149 ರನ್ ಗಳ ಗುರಿಯನ್ನು ಪಾಕಿಸ್ತಾನ ತಂಡ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಅಫ್ರಿದಿ 8ನೇ ಬ್ಯಾಟ್ಸ್ ಮನ್ ಆದ್ದರಿಂದ ಅವರಿಗೆ ಬ್ಯಾಟ್ ಬೀಸುವ ಅವಕಾಶ ಲಭಿಸಿರಲಿಲ್ಲ.

ಆದರೆ ತಮ್ಮ 2ನೇ ಪಂದ್ಯದಲ್ಲಿ ಅಫ್ರಿದಿಗೆ ಬ್ಯಾಟ್ ಮಾಡುವ ಅವಕಾಶ ಲಭಿಸಿತ್ತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಆ 16 ವರ್ಷ 217 ದಿನಗಳ ಬಾಲಕ ಅಲ್ಲಿಯವರೆಗಿನ ಕ್ರಿಕೆಟ್ ಚರಿತ್ರೆಯಲ್ಲಿಯೇ ಯಾರೂ ಬರೆಯದ ಇತಿಹಾಸವೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದ. ಆ ನಾಲ್ಕು ದೇಶಗಳ ಸಮೀರ್  ಕಪ್-1996-97 ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಾಹಿದ್ ಅಫ್ರಿದಿ ಕೇವಲ 37 ಎಸೆತಗಳನ್ನು ಎದುರಿಸಿ ದಾಖಲೆಯ ಶತಕ ಸಿಡಿಸಿದ್ದರು. ಅವರ ಈ ಭರ್ಜರಿ ಶತಕದಲ್ಲಿ 11 ಸಿಕ್ಸರ್ ಗಳು ಕೂಡ ಒಳಗೊಂಡಿತ್ತು. ಇದು ಆವರೆಗಿನ ಕ್ರಿಕೆಟ್ ಇತಿಹಾಸದಲ್ಲಿಯೇ ದಾಖಲಾದ ಅತಿ ವೇಗದ ಶತಕ ಎಂದು ದಾಖಲಾಗಿತ್ತು.  ಅಲ್ಲದೇ ಪಂದ್ಯವೊಂದರಲ್ಲಿ ಆಟಗಾರನೊಬ್ಬ ಸಿಡಿಸಿದ ಅತೀ ಹೆಚ್ಚು ಸಿಕ್ಸರ್ ಗಳ ಸಂಖ್ಯಾಪಟ್ಟಿಯಲ್ಲಿಯೂ ಅಫ್ರಿದಿ ಅಗ್ರ ಸ್ಥಾನಕ್ಕೇರಿದ್ದರು. ಪಾಕಿಸ್ತಾನ ಆ ಪಂದ್ಯದಲ್ಲಿ ಬರೊಬ್ಬರಿ 371 ರನ್ ಗಳಿಸಿತ್ತು. ಇದೂ ಕೂಡ ಆವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದರ 2ನೇ ಗರಿಷ್ಠ ಮೊತ್ತವಾಗಿತ್ತು. ಆ ಪಂದ್ಯದಲ್ಲಿ ಶ್ರೀಲಂಕಾ  ಪಾಕಿಸ್ತಾನದ ಬೃಹತ್ ಮೊತ್ತದ ಗುರಿ ಮುಟ್ಟಲಾಗದೇ 82 ರನ್ ಗಳ ಅಂತರದಲ್ಲಿ ಶರಣಾಗಿತ್ತು. ತಮ್ಮ 2ನೇ ಪಂದ್ಯದಲ್ಲಿಯೇ ಶಾಹಿದ್ ಅಫ್ರಿದಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನೇ ಚಕಿತಗೊಳಿಸಿದ್ದರು.

ಅಫ್ರಿದಿ ಅವರ ಈ ದಾಖಲೆಯನ್ನು ಮುರಿಯಲು "ಆಧುನಿಕ ಕ್ರಿಕೆಟ್ ತಂಡ"ಗಳಿಗೆ ಬರೊಬ್ಬರಿ 18 ವರ್ಷಗಳೇ ಬೇಕಾಯಿತು. 2014 ಜನವರಿ 1ರಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ ಕೋರಿ ಆ್ಯಂಡರ್ಸನ್ 36 ಎಸೆತಗಳಲ್ಲಿ ಅಜೇಯ 131 ರನ್ ಗಳನ್ನು ಸಿಡಿಸುವ ಮೂಲಕ 18 ವರ್ಷದ ಹಿಂದಿನ  ಅಫ್ರಿದಿದಾಖಲೆಯನ್ನು ಮುರಿದಿದ್ದರು. ಆ ಬಳಿಕ ಆ್ಯಂಡರ್ಸನ್ ದಾಖಲೆಯನ್ನು 2015 ರ ಜನವರಿ 18ರಂದು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲೇ ಶತಕ ಸಿಡಿಸುವ ಮೂಲಕ ಮುರಿದಿದ್ದರು.

ಈ ರೀತಿ ದಾಖಲೆಯ ಇನ್ನಿಂಗ್ಸ್ ವೊಂದನ್ನು ಕಟ್ಟಿದ್ದ ಶಾಹಿದ್ ಅಫ್ರಿದಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲು ಬರೊಬ್ಬರಿ 2 ವರ್ಷಗಳೇ ಬೇಕಾದವು. ಇದು ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಪ್ರತಿಭಾನ್ವೆಷಣೆಯ ಫಲವೋ ಏನೋ ಗೊತ್ತಿಲ್ಲ. ಅಂತೂ ಅಫ್ರಿದಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ 2 ವರ್ಷಗಳ ಬಳಿಕ ಅಂದರೆ  1998 ಅಕ್ಟೋಬರ್ 22ರಂದು ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾದರು. ಅಷ್ಟು ಹೊತ್ತಿಗಾಗಲೇ ಅಫ್ರಿದಿ 66 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಅಫ್ರಿದಿ ವಿಫಲರಾಗಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ 10 ರನ್ ಗಳಿಸಿದ್ದ ಅವರು, ಎರಡನೇ ಇನ್ನಿಂಗ್ಸ್ ನಲ್ಲಿ  ಕೇವಲ 4 ರನ್ ಗಳಿಸಿ ಔಟ್ ಆಗಿದ್ದರು. ಆದರೂ ಅಫ್ರಿದಿ ತಮ್ಮ ಪಾದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಜಗತ್ತಿಗೇ ಸಾಬೀತು ಪಡಿಸಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಮಾಡಿದ್ದ ಅಫ್ರಿದಿ ಆಸ್ಟ್ರೇಲಿಯಾದ ಪ್ರಮುಖ 5 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.

ಆ ಬಳಿಕ ಅಫ್ರಿದಿ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಮತ್ತೆ ನಾಲ್ಕು ತಿಂಗಳ ಕಾಲ ಕಾಯಬೇಕಾಯಿತು. 2000 ಇಸವಿಯ ಜನವರಿಯಲ್ಲಿ ಆಯೋಜನೆಗೊಂಡಿದ್ದ ಪಾಕಿಸ್ತಾನದ ಭಾರತ ಪ್ರವಾಸ ಸರಣಿಯಲ್ಲಿ ಪಾಕಿಸ್ತಾನದ ಪರ ಮತ್ತೆ ಟೆಸ್ಟ್ ನಲ್ಲಿ ಅಫ್ರಿದಿ ಬ್ಯಾಟ್ ಹಿಡಿದಿದ್ದರು. ಅದೊಂದು ಐತಿಹಾಸಿಕ ಸರಣಿಯಾಗಿದ್ದು, ಮುಂಬೈ  ಸರಣಿ ಸ್ಫೋಟದಿಂದಾಗಿ ಉಭಯ ದೇಶಗಳ ನಡುವಿನ ಕ್ರಿಕೆಟ್ ಬಾಂಧವ್ಯ ಬರೊಬ್ಬರಿ 10 ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಹೀಗಾಗಿ ಆ ಕಾಲಘಟ್ಟದಲ್ಲಿ ಪಾಕಿಸ್ತಾನ ತಂಡದ ಭಾರತ ಪ್ರವಾಸ ಸಾಕಷ್ಟು ಪ್ರಮುಖವಾಗಿತ್ತು. ಇದೇ ಸರಣಿಯಲ್ಲೇ ಮತ್ತೆ ಅಫ್ರಿದಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಜಗತ್ತಿಗೇ ಪರಿಚಯಿಸಿದ್ದರು.  ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಮೇಲೆ ಸವಾರಿ ಮಾಡಿದ್ದ ಅಫ್ರಿದಿ 191 ಎಸೆತಗಳಲ್ಲಿ 141 ರನ್ ಪೇರಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರಿದ್ದರು. ಅಲ್ಲದೆ ಭಾರತದ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದ ಅವರು 3 ವಿಕೆಟ್ ಕೂಡ ಗಳಿಸಿದ್ದರು. ಅಂತೆಯೇ ಎರಡನೇ ಇನ್ನಿಂಗ್ಸ್ ನಲ್ಲಿಯೂ 54 ರನ್ ಗಳಿಸಿ  ಭಾರತದ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಆ ಪಂದ್ಯವನ್ನು ಪಾಕಿಸ್ತಾನ ತಂಡ 12 ರನ್ ಗಳ ಅಂತರದಿಂದ ಜಯಿಸಿತ್ತು.

ಆ ಬಳಿಕ ಆಫ್ರಿದಿ ತಮ್ಮ ಮೂರನೇ ಪಂದ್ಯವನ್ನು 2005 ಮಾರ್ಚ್ ನಲ್ಲಿ ಮತ್ತದೇ ಭಾರತದ ವಿರುದ್ಧವೇ ಆಡಿದ್ದರು. ಆಗಲೂ ಭಾರತವನ್ನು ಪರಿಪರಿಯಾಗಿ ಕಾಡಿದ್ದ ಅಫ್ರಿದಿ ಆ ಟೆಸ್ಟ್ ಪಂದ್ಯದಲ್ಲಿ ಸೂಪರ್ ಫಾಸ್ಟ್ ಅರ್ಧಶತಕ ಗಳಿಸಿದ್ದರು. ಅಲ್ಲದೆ ಆ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ ಪಾಕಿಸ್ತಾನದ ಗೆಲುವಿನಲ್ಲಿ ಮಹತ್ವದ ಪಾತ್ರ  ನಿರ್ವಹಿಸಿದ್ದರು. ಮತ್ತೊಂದು ಪ್ರಮುಖ ವಿಚಾರವೆಂದರೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಫ್ರಿದಿಯೇ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಔಟ್ ಮಾಡಿದ್ದರು. ಅದೇ ಪ್ರವಾಸದಲ್ಲಿ ಭಾರತದ ವಿರುದ್ಧ ಏಕದಿನ ಸರಣಿಯಲ್ಲೂ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದ ಅಫ್ರಿದಿ ಮತ್ತೆ ಭಾರತೀಯ ಬೌಲರ್  ಗಳನ್ನು ಕಾಡಿದ್ದರು. ಕ್ರಿಕೆಟ್ ಇತಿಹಾಸದ 2ನೇ ಅತಿವೇಗದ ಶತಕವನ್ನು ಸರಿಗಟ್ಟಿದ್ದ ಅಫ್ರಿದಿ ಆ ಏಕದಿನ ಪಂದ್ಯದಲ್ಲಿ ಕೇವಲ 45 ಎಸೆತದಲ್ಲಿ ಶತಕ ಸಿಡಿಸಿ ವೆಸ್ಟ್ ಇಂಡೀಸ್ ತಂಡದ ದಂತಕಥೆ ಬ್ರಯಾನ್ ಲಾರಾ ಅವರ ದಾಖಲೆಯನ್ನು ಸರಿಗಟ್ಟಿದ್ದರು.

ಇನ್ನು 2005 ಏಪ್ರಿಲ್ 15ರಂದು ಕಾನ್ಪುರದಲ್ಲಿ ನಡೆದ ಭಾರತದ ವಿರುದ್ಧ ಐದನೇ ಏಕದಿನ ಪಂದ್ಯದಲ್ಲಿ ನಿಜಕ್ಕೂ ಭಾರತದ ಪಾಲಿಗೆ ಅಪ್ರಿದಿ ಬೂಮ್ ಬೂಮ್ ಅಫ್ರಿದಿಯಾಗಿದ್ದರು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿ ಪಾಕಿಸ್ತಾನಕ್ಕೆ 250 ರನ್  ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನುಹತ್ತಿದ ಪಾಕಿಸ್ತಾನಕ್ಕೆ ಅಫ್ರಿದಿ ನಿಜಕ್ಕೂ ರನ್ ಮೆಷಿನ್ ಆಗಿ ಪರಿಣಮಿಸಿದ್ದರು. ಆ ಪಂದ್ಯದಲ್ಲಿ ಒಟ್ಟು 46 ಎಸೆತಗಳನ್ನು ಎದುರಿಸಿದ್ದ ಅಫ್ರಿದಿ 9 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಾಯದಿಂದ ಬರೊಬ್ಬರಿ 102 ರನ್ ಸಿಡಿಸಿದ್ದರು. ಅಂತೆಯೇ ಕೇವಲ 45 ಎಸೆತದಲ್ಲಿ ಶತಕ ಸಿಡಿಸುವ ಮೂಲಕ  2ನೇ ಅತಿವೇಗದ ಶತಕ ಕೂಡ ಸಿಡಿಸಿದ್ದರು. ಆ ಪಂದ್ಯವನ್ನು ಪಾಕಿಸ್ತಾನ ತಂಡ ಐದು ವಿಕೆಟ್ ಗಳ ಅಂತರದಿಂದ ಜಯಿಸಿತ್ತು. ಅಫ್ರಿದಿ ಕೂಡ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಪ್ರತಿಫಲವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಹೀಗೆ ಜಾಗತಿಕ ಕ್ರಿಕೆಟ್ ನಲ್ಲಿ ಪಾಕಿಸ್ತಾನ ತಂಡ ತನ್ನದೇ ಆದ ಛಾಪು ಮೂಡಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಶಾಹಿದ್ ಅಫ್ರಿದಿಯಂತಹ ಆಟಗಾರನನ್ನು ನಿವೃತ್ತಿಯಾಗು ಇಲ್ಲದಿದ್ದರೆ ತಂಡದಿಂದಲೇ ಉಚ್ಛಾಟಿಸುವುದಾಗಿ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕ್ರಮ ಎಷ್ಟರ ಮಟ್ಟಿಗೆ ಸರಿ ಎಂಬುದು ಈಗ  ಎದ್ದಿರುವ ಪ್ರಶ್ನೆ. ಅರಾಜಕತೆ ಮತ್ತು ರಾಜಕೀಯದಿಂದಾಗಿ ನಲುಗುತ್ತಿರುವ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ, ಹಿರಿಯ ಕ್ರಿಕೆಟಿಗರನ್ನು ನಡೆಸಿಕೊಳ್ಳುತ್ತಿರುವ ಪರಿ ಇದೇಯೇನು..? ಇಂತಹುದೇ ಪರಿಸ್ಥಿತಿ ಹಿಂದೊಮ್ಮೆ ಭಾರತಕ್ಕೂ ಒದಗಿತ್ತು. ಗ್ರೇಗ್ ಚಾಪೆಲ್ ರಂತಹ ವಕ್ರಬುದ್ಧಿ ಕೋಚ್ ನಿಂದಾಗಿ ಭಾರತ ತಂಡದ ಅಮೂಲ್ಯ ಕ್ರಿಕೆಟ್  ರತ್ನಗಳು ಅನಾಮತ್ತಾಗಿ ನಿವೃತ್ತಿ ತೆಗೆದುಕೊಂಡಿದ್ದವು. ಕೆಲವರ ಪಾಲಿಗಂತೂ ನಿವೃತ್ತಿ ಪಂದ್ಯವನ್ನಾಡುವ ಸೌಭಾಗ್ಯ ಕೂಡ ದೊರೆಯಲಿಲ್ಲ. ಭಾರತ ಕ್ರಿಕೆಟ್ ರಂಗದ ಪಾಲಿಗೆ ಆ ಸಂದರ್ಭ ನಿಜಕ್ಕೂ ಗ್ರಹಣವೇ ಸರಿ..ಇದರ ಪರಿಣಾಮ ಭಾರತ ಕ್ರಿಕೆಟ್ ತಂಡವನ್ನು ಸಾಕಷ್ಟು ವರ್ಷಗಳವರೆಗೂ ಕಾಡಿತ್ತು.

ಇಂತಹ ಪಕ್ಕದ ರಾಷ್ಟ್ರದ ಬೆಳವಣಿಗೆಯಿಂದಾದರೂ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಬುದ್ದಿಕಲಿತು, ಹಿರಿಯ ಆಟಗಾರರಿಗೆ ತಮ್ಮದೇ ಆದ ಸಮಯ ನೀಡಿ ಗೌರವ ಮತ್ತು ಆದರದೊಂದಿಗೆ ಅವರಿಗೆ ನಿವೃತ್ತಿ ನೀಡುವುದು ಕ್ರಿಕೆಟ್ ಬೆಳವಣಿಗೆ ದೃಷ್ಟಿಯಿಂದ ಉತ್ತಮ. ಇಲ್ಲವಾದಲ್ಲಿ ಭಯೋತ್ಪಾದನೆಯಿಂದಾಗಿ ಕ್ರಿಕೆಟ್ ಪಾಕಿಸ್ತಾನವನ್ನು  ಈಗಾಗಲೇ ತೊರೆದಿದೆ. ಪಿಸಿಬಿ ತನ್ನ ಇಂತಹ ಧೋರಣೆಯನ್ನು ಹೀಗೆಯೇ ಮುಂದುವರೆಸಿದರೆ ಪಾಕಿಸ್ತಾನದ ಕ್ರಿಕೆಟಿಗರು ಖಂಡಿತ ಕ್ರಿಕೆಟ್ ಮೇಲಿನ ಅಭಿಮಾನವನ್ನು ಬಿಟ್ಟು ವಾಮ ಮಾರ್ಗದಲ್ಲಿ ಹಣ ಸಂಪಾದನೆಗಾಗಿ ಮತ್ತದೇ ಸ್ಪಾಟ್ ಫಿಕ್ಸಿಂಗ್ ನಂತಹ ಅಕ್ರಮ ಚಟುವಟಿಕೆಗೆ ಇಳಿಯುವ ಸಾಧ್ಯತೆಯನ್ನೂ ಕೂಡ  ತಳ್ಳಿಹಾಕುವಂತಿಲ್ಲ. ಹೀಗಾಗಿದ್ದೇ ಆದರೆ ಇಡೀ ಜಗತ್ತೇ ಪಾಕಿಸ್ತಾನದಿಂದ ಕ್ರಿಕೆಟ್ ಅನ್ನು ದೂರ ಇಡುವ ಪರಿಸ್ಥಿತಿ ಬಂದೊದಗಿದರೂ ಅಚ್ಚರಿಯೇನಿಲ್ಲ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಕೂಡ ಈ ಬಗ್ಗೆ ಮುತುವರ್ಜಿ ವಹಿಸಿ ಕ್ರಿಕೆಟ್ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆದು ಹಿರಿಯ ಕ್ರಿಕೆಟಿಗರಿಗೆ ಸಲ್ಲಬೇಕಾದ ಗೌರವ ಮತ್ತು ಆದರಗಳು ಸಲ್ಲುವಂತೆ ಕ್ರಮ ಕೈಗೊಳ್ಳಬೇಕು. ಜಾಗತಿಕವಾಗಿ ಕ್ರಿಕೆಟ್ ಅಭಿವೃದ್ದಿಗೆ ಕೇವಲ ಕ್ರಿಕೆಟ್ ಆಯೋಜನೆ ಒಂದೇ ಅಲ್ಲ ಉತ್ತಮ  ಕ್ರಿಕೆಟ್ ನಿರ್ವಹಣೆ ಕೂಡ ಐಸಿಸಿಯ ಜವಾಬ್ದಾರಿಯೇ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com