ಟಿ-20 ರ್ಯಾಂಕಿಂಗ್: ವಿರಾಟ್ ಕೊಹ್ಲಿಗೆ ನಂ.1 ಪಟ್ಟ

ಟಿ-20 ವಿಶ್ವಕಪ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದ ಖುಷಿಯಲ್ಲಿದ್ದ ವಿರಾಟ್ ಕೊಹ್ಲಿ ಅವರಿಗೆ..
ಆಟಗಾರ ವಿರಾಟ್ ಕೊಹ್ಲಿ
ಆಟಗಾರ ವಿರಾಟ್ ಕೊಹ್ಲಿ

ನವದೆಹಲಿ: ಟಿ-20 ವಿಶ್ವಕಪ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದ ಖುಷಿಯಲ್ಲಿದ್ದ ವಿರಾಟ್ ಕೊಹ್ಲಿ ಅವರಿಗೆ ಇದೀಗ ಮತ್ತೊಂದು ಗರಿ ದಕ್ಕಿದ್ದು, ಐಸಿಸಿ ಟಿ20 ರ್ಯಾಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಇಂದು ಪ್ರಕಟಿಸಿರುವ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳ ರ್ಯಾಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂ.1 ಸ್ಥಾನಕ್ಕೇರಿದ್ದಾರೆಂದು ತಿಳಿದುಬಂದಿದೆ. ಭಾನುವಾರ ನಡೆದ ವಿಶ್ವಕಪ್ ಟಿ-20 ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 82 ರನ್ ಗಳನ್ನು ಭಾರಿಸುವ ಮೂಲಕ ವಿರಾಟ್ ಕೊಹ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಈ ಮೂಲಕ ಆಸ್ಟ್ರೇಲಿಯಾದ ಆಟಗಾರ ಅರೋನ್ ಫಿಂಚ್ ರನ್ನು ಕೊಹ್ಲಿ ಕೆಳಗಿಳಿಸಿದ್ದಾರೆ. ಫಿಂಚ್ ಗಿಂತ 24 ಅಂಕಗಳನ್ನು ಹೆಚ್ಚು ಪಡೆದುಕೊಂಡಿರುವ ಕೊಹ್ಲಿ ಸದ್ಯಕ್ಕೆ ಚುಟುಕು ಮಾದರಿ ಕ್ರಿಕೆಟ್ ನ ಕಿಂಗ್ ಎನಿಸಿಕೊಂಡಿದ್ದಾರೆ.

ಕೊಹ್ಲಿ ಅವರು 2016ರ ಟಿ-20 ಸರಣಿಯಲ್ಲಿ ಈವರೆಗೂ 4 ಪಂದ್ಯಗಳನ್ನು ಆಡಿದ್ದು, 184 ರನ್ ಗಳನ್ನು ಕಲೆ ಹಾಕಿದ್ದಾರೆ. ಇನ್ನು ವಿಂಡೀಸ್ ದೈತ್ಯ ಆಟಗಾರ ಎಂದೇ ಖ್ಯಾತಿ ಪಡೆದಿರುವ ಕ್ರಿಸ್ ಗೇಲ್ ಕೂಡ ರ್ಯಾಕಿಂಗ್ ಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಬೌಲಿಂಗ್ ನಲ್ಲಿ ನಂ.1 ಸ್ಥಾನದಲ್ಲಿ ಭಾರತದ ಆಫ್ ಸ್ಪಿನ್ನರ್ ಆಗಿರುವ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿರುವ ವೆಸ್ಟ್ ಇಂಡೀಸ್ ಆಟಗಾರ ಸ್ಯಾಮುಯಲ್ ಬದ್ರಿ ಅವರು ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬದ್ರಿ ಅವರು ಟಿ-20 ವಿಶ್ವಕಪ್ ನಲ್ಲಿ ಈವರೆಗೂ ನಡೆದಿರುವ ನಾಲ್ಕು ಪಂದ್ಯಗಳ ಪೈಕಿ 6 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಅಶ್ವಿನ್ ಅವರು 4 ವಿಕೆಟ್ ಗಳನ್ನು ಪಡೆದುಕೊಳ್ಳುವ ಮೂಲಕ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದರಂತೆ ಭಾರತ ಕೂಡ ರ್ಯಾಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದ್ದು, 2ನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಹಾಗೂ ಮೂರನೇ ಸ್ಥಾನವನ್ನು ವೆಸ್ಟ್ ಇಂಡೀಸ್ ಪಡೆದುಕೊಂಡಿದೆ. 

ಮಾರ್ಚ್ 31 ರಂದು ವೆಸ್ಟ್ ಇಂಡೀಸ್ ವಿರುದ್ಧ ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯ ಮುಂಬೈ ನಲ್ಲಿ ನಡೆಯಲಿದ್ದು, ಬೌಲಿಂಗ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ವೆಸ್ಟ್ ಇಂಡೀಸ್ ನ ಸ್ಯಾಮ್ಯುಯೆಲ್ ಹಾಗೂ ಬ್ಯಾಟಿಂಗ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ವಿರಾಟ್ ಕೊಹ್ಲಿಯವರು ಮುಖಾಮುಖಿಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com