ಭಾರತದ ಸೋಲಿಗೆ ಕಾರಣವಾಯ್ತು ಆ 2 "ನೋ ಬಾಲ್"!

ಟಿ20 ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತವನ್ನು 7 ವಿಕೆಟ್ ಗಳ ಅಂತರದಲ್ಲಿ ಸೋಲಿಸಿ ಫೈನಲ್ ಗೇರಿದ್ದು, ಭಾರತದ ಸೋಲಿಗೆ ಕಾರಣವಾಗಿದ್ದು ಮಾತ್ರ ಆ 2 ನೋ ಬಾಲ್ ಗಳು..!
ಅಶ್ವಿನ್ ಮತ್ತು ಪಾಂಡ್ಯಾ ಅವರ ನೋಬಾಲ್ (ಕ್ರಿಕ್ ಇನ್ಫೋ)
ಅಶ್ವಿನ್ ಮತ್ತು ಪಾಂಡ್ಯಾ ಅವರ ನೋಬಾಲ್ (ಕ್ರಿಕ್ ಇನ್ಫೋ)
Updated on

ಮುಂಬೈ: ಟಿ20 ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತವನ್ನು 7 ವಿಕೆಟ್ ಗಳ ಅಂತರದಲ್ಲಿ ಸೋಲಿಸಿ ಫೈನಲ್ ಗೇರಿದ್ದು, ಭಾರತದ ಸೋಲಿಗೆ ಕಾರಣವಾಗಿದ್ದು ಮಾತ್ರ ಆ  2 ನೋ ಬಾಲ್ ಗಳು..!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೊಹ್ಲಿ (ಅಜೇಯ 89 ರನ್), ರೋಹಿತ್ ಶರ್ಮಾ (43 ರನ್) ಮತ್ತು ಅಜಿಂಕ್ಯಾ ರಹಾನೆ (40ರನ್) ಉತ್ತಮ ಬ್ಯಾಟಿಂಗ್  ನೆರವಿನಿಂದ 192 ರನ್ ಗಳ ಬೃಹತ್ ಮೊತ್ತ ದಾಖಲಿಸುವುದರೊಂದಿಗೆ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲುವ ವಿಶ್ವಾಸ ಮೂಡಿತ್ತು. ಅದರಲ್ಲೂ ಪ್ರಮುಖವಾಗಿ ಬೌಲಿಂಗ್ ನಲ್ಲಿ ವಿಂಡೀಸ್  ದೈತ್ಯ ಕ್ರಿಸ್ ಗೇಯ್ಲ್ ಕೇವಲ 5 ರನ್ ಗಳಿಸಿ ಔಟ್ ಆಗುತ್ತಿದ್ದಂತೆಯೇ ಭಾರತ ಪಂದ್ಯವನ್ನು ಗೆದ್ದೇ ಬಿಟ್ಟಿತು ಎಂದು ಅಭಿಮಾನಿಗಳು ಕುಣಿದಾಡಿದ್ದರು.

ಆದರೆ ಆ ಬಳಿಕ ಭಾರತೀಯ ಬೌಲರ್ ಗಳನ್ನು ದಂಡಿಸಿದ ವಿಂಡೀಸ್ ಬ್ಯಾಟ್ಸಮನ್ ಗಳು ಭಾರತದ ಕೈಯಲ್ಲಿದ್ದ ಗೆಲುವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಪ್ರಮುಖವಾಗಿ ಆರಂಭಿಕ ಆಟಗಾರ  ಚಾರ್ಲ್ಸ್ ಮತ್ತು ಲೆಂಡ್ಲ್ ಸಿಮಾನ್ಸ್ ಮತ್ತು ಆಂಡ್ರೆ ರಸೆಲ್ ಭಾರತೀಯ ಬೌಲರ್ ಗಳ ಮೇಲೆ ನಿಜಕ್ಕೂ ಸವಾರಿ ಮಾಡಿದ್ದರು. ತಮಗೆ ಸಿಕ್ಕ ಜೀವದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ  ಸಿಮಾನ್ಸ್ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುತ್ತ ವೆಸ್ಟ್ ಇಂಡೀಸ್ ತಂಡವನ್ನು ಗೆಲುವಿನ ದಡಸೇರಿಸಿದ್ದರು.

ಭಾರತಕ್ಕೆ ಎರವಾದ ಆ 2 ನೋ ಬಾಲ್

ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ಸೋಲು ನಿಜಕ್ಕೂ ಭಾರತದ ಸ್ವಯಂಕೃತ ಅಪರಾಧ ಎನ್ನಬಹುದು. ಏಕೆಂದರೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ  ತಂಡದ ಆಟಗಾರರು ಬೌಲಿಂಗ್ ನಲ್ಲಿ ಮಾತ್ರ ತಮ್ಮ ಜವಾಬ್ದಾರಿ ಮರೆತಂತ್ತಿದ್ದರು. ಟಿ20 ಮಾದರಿಯ ಕ್ರಿಕೆಟ್ ನಲ್ಲಿ ನೋಬಾಲ್ ಗಳು ಎಷ್ಟು ದುಬಾರಿಯಾಗಬಲ್ಲವು ಎಂಬುದನ್ನು ಭಾರತೀಯ  ಬೌಲರ್ ಗಳು ನಿನ್ನೆ ಇಡೀ ವಿಶ್ವಕ್ಕೇ ತೋರಿಸಿಕೊಟ್ಟರು.

ಗಾಯಾಳು ಫ್ಲೆಚರ್ ಬದಲಿಗೆ ತ೦ಡ ಕೂಡಿಕೊ೦ಡಿದ್ದ ಸಿಮ್ಮನ್ಸ್‍ಗೆ 2 ಜೀವದಾನ ನೀಡಿದ್ದು ತ೦ಡಕ್ಕೆ ದುಬಾರಿಯಾಯಿತು. ವೆಸ್ಟ್ ಇಂಡೀಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಲೆಂಡ್ಲ್  ಸಿಮಾನ್ಸ್ ಪಂದ್ಯದ 7ನೇ ಓವರ್ ನಲ್ಲಿಯೇ ಔಟ್ ಆಗಿದ್ದರು. ಅಶ್ವಿನ್ ಎಸೆದ 7ನೇ ಓವರ್ ನ 5ನೇ ಎಸೆತದಲ್ಲಿ ಸಿಮಾನ್ಸ್, ಬುಮ್ರಾಗೆ ಕ್ಯಾಚ್ ನೀಡಿದ್ದರು. ಅಶ್ವಿನ್ ಎಸೆದ ಸ್ಪಿನ್ ಬಾಲ್ ಅನ್ನು  ಸಿಮಾನ್ಸ್ ಬೌಂಡರಿಗೆ ಅಟ್ಟುವ ಪ್ರಯತ್ನ ಮಾಡಿದರು. ಆಗ ಬಾಲ್ ಅವರ ಬ್ಯಾಟ್ ನ ತುದಿಗೆ ಬಿದ್ದು ನೇರ ಬೌಂಡರಿಯತ್ತ ಸಾಗಿತ್ತು. ಅದರೆ ಅಷ್ಟರಲ್ಲಿಯೇ ಅದ್ಭುತವಾಗಿ ಬಾಗಿದ ಬುಮ್ರಾಹ್  ಸಿಮಾನ್ಸ್ ನೀಡಿದ ಕ್ಯಾಚ್ ಅನ್ನು ತೆಗೆದುಕೊಂಡಿದ್ದರು. ಆಗ ಮತ್ತೆ ಭಾರತೀಯ ಪಾಳಯದಲ್ಲಿ ಹರ್ಷ ಮೊಳಗಿತ್ತಾದರೂ, ಅಂಪೈರ್ ಗಳು ಅಶ್ವಿನ್ ಎಸೆತವನ್ನು ನೋಬಾಲ್ ಎಂದು ಘೋಷಣೆ  ಮಾಡಿದಾಗ ಮತ್ತೆ ನಿರಾಶೆ ಮೂಡಿತ್ತು.

ಆಗ ಸಿಮಾನ್ಸ್ ಕೇವಲ 18 ರನ್ ಗಳಿಸಿದ್ದರು ಅಷ್ಟೇ.. ಇನ್ನು ಎರಡನೇ ಬಾರಿಗೆ ಸಿಮಾನ್ಸ್ ಗೆ ಜೀವದಾನ ನೀಡಿದ್ದು ಬಾಂಗ್ಲಾ ಪಂದ್ಯದ ಕೊನೆಯ ಓವರ್ ಹೀರೋ ಹಾರ್ದಿಕ್ ಪಾಂಡ್ಯಾ. ಪಾ೦ಡ್ಯ  ಎಸೆದ 15ನೇ ಓವರ್ ನ ಕೊನೆಯ ಎಸೆತದಲ್ಲಿ ಸಿಮಾನ್ಸ್, ಅಶ್ವಿನ್‍ಗೆ ಕ್ಯಾಚ್ ನೀಡಿದ್ದರು. ಪಾಂಡ್ಯಾ ಹಾಕಿದೆ ಫುಲ್ ಟಾಸ್ ಎಸೆತವನ್ನು ತಪ್ಪಾಗಿ ಗ್ರಹಿಸಿದ್ದ ಸಿಮಾನ್ಸ್ ಕವರ್ ನಲ್ಲಿದ್ದ ಅಶ್ವಿನ್ ಗೆ ಕ್ಯಾಚ್ ನೀಡಿದ್ದರು. ಆದರೆ ಅದೂ ಕೂಡ ನೋಬಾಲ್ ಆಗಿತ್ತು. ಆಗ ಸಿಮಾನ್ಸ್ ವೈಯುಕ್ತಿಕ ರನ್ ಗಳಿಕೆ 50 ರನ್ ಅಗಿತ್ತು. ಈ ಎರಡು ಜೀವದಾನ ಪಡೆದ ಸಿಮಾನ್ಸ್ ಬಳಿಕ ಸ್ಫೋಟಕ ಆಟವಾಡಿ ಕೇವಲ 51 ಎಸೆತಗಳಲ್ಲಿ ಬರೊಬ್ಬರಿ 82 ರನ್ ಸಿಡಿಸಿ ವಿಂಡೀಸ್ ಗೆಲುವಿನಲ್ಲಿ ಮಹತ್ವ ಪಾತ್ರ ವಹಿಸಿದರು. ಆ ಎರಡು ನೋ ಬಾಲ್ ಗಳಿಲ್ಲದೇ ಹೋಗಿದ್ದರೆ ಖಂಡಿತ ವೆಸ್ಟ್ ಇಂಡೀಸ್ ಭಾರತದ ಮೊತ್ತವನ್ನು ಗಳಿಸಲು ಪ್ರಯಾಸ ಪಡಬೇಕಿತ್ತು.

ಆದರೆ ಭಾರತೀಯ ಬೌಲರ್ ಗಳ ಬೇಜವಾಬ್ದಾರಿತನ ದುಬಾರಿಯಾಗಿ ಪರಿಣಮಿಸಿ ಭಾರತದ ಫೈನಲ್ ಕನಸು ನುಚ್ಚು ನೂರಾಗುವಂತೆ ಮಾಡಿತು. ಹಾರ್ಧಿಕ್ ಪಾಂಡ್ಯಾ ನೋಬಾಲ್ ಎಸೆದಿದ್ದು  ಪರವಾಗಿಲ್ಲ. ಏಕಂದರೆ ಅವರು ವೇಗದ ಬೌಲರ್. ಓಡಿ ಬಂದು ಬಾಲ್ ಎಸೆಯುವ ವೇಳೆ ನೋಬಾಲ್ ಗಳಾಗುವ ಸಾಧ್ಯತೆ ಇರುತ್ತದೆ. ಆದರೆ ಅಶ್ವಿನ್ ಸ್ಪಿನ್ ಬೌಲರ್ ಆಗಿದ್ದುಕೊಂಡು ನೋಬಾಲ್  ಎಸೆದಿದ್ದು ನಿಜಕ್ಕೂ ಭಾರತಕ್ಕೆ ಎರವಾಯಿತು ಎನ್ನಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com