ಇಂಡೋ-ವಿಂಡೀಸ್ ಉಪಾಂತ್ಯ: ಗಮನ ಸೆಳೆದ ಐದು ಅಂಶಗಳು

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋತಿರಬಹುದು. ಆದರೆ ಟೀಂ ಇಂಡಿಯಾಕ್ಕೆ ಸಕಾರಾತ್ಮಕವಾಗಬಲ್ಲ ಒಂದಷ್ಟು..
ಇಂಡೋ-ವಿಂಡೀಸ್ ಉಪಾಂತ್ಯ ಪಂದ್ಯದಲ್ಲಿ ಗಮನ ಸೆಳೆದ ಐದು ಅಂಶಗಳು
ಇಂಡೋ-ವಿಂಡೀಸ್ ಉಪಾಂತ್ಯ ಪಂದ್ಯದಲ್ಲಿ ಗಮನ ಸೆಳೆದ ಐದು ಅಂಶಗಳು
Updated on

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋತಿರಬಹುದು. ಆದರೆ ಟೀಂ ಇಂಡಿಯಾಕ್ಕೆ  ಸಕಾರಾತ್ಮಕವಾಗಬಲ್ಲ ಒಂದಷ್ಟು ಅಂಶಗಳು ಗಮನ ಸೆಳೆದವು.

ಟಿ20 ವಿಶ್ವಕಪ್ ನ 2ನೇ ಸೆಮಿ ಫೈನಲ್ ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಹಣಾಹಣಿಯಲ್ಲಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದ ಐದು ಪ್ರಮುಖ ಅಂಶಗಳು ಇಲ್ಲಿವೆ.

1. ಫಾರ್ಮ್ ಗೆ ಮರಳಿದ ರೋಹಿತ್ ಶರ್ಮಾ
ಕಳೆದ ನಾಲ್ಕು ಪಂದ್ಯಗಳಿಂದ ಕಳಪೆ ಬ್ಯಾಟಿಂಗ್ ಬಳಲುತ್ತಿದ್ದ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಮ್ಮ ತವರಿನ ಪಿಚ್ ನಲ್ಲಿ ಫಾರ್ಮ್ ಕಂಡುಕೊಂಡರು. ತೀರಾ  ನಿರ್ಣಾಯಕವಾದ ಈ ಪಂದ್ಯದಲ್ಲಿ ನಿಧಾನಗತಿಯ ಆರಂಭ ಪಡೆದರೂ ಬಳಿಕ ಚೇತರಿಸಿಕೊಂಡ ಶರ್ಮಾ ಭಾರತದ ರನ್ ವೇಗವನ್ನು ಹೆಚ್ಚಿಸ ತೊಡಗಿದರು. ಅಂಜಿಕ್ಯಾ ರಹಾನೆ ಜೊತೆಗೂಡಿ  ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ವೈಯುಕ್ತ 43 ರನ್ ಗಳನ್ನು ಸಿಡಿಸಿದರು. ಅಲ್ಲದೆ ಮೊದಲ ವಿಕೆಟ್ ಜೊತೆಯಾಟದಲ್ಲಿ ರಹಾನೆ ಜೊತೆಗೂಡಿ ಕೇವಲ 45 ಎಸೆತದಲ್ಲಿ 62 ರನ್  ಸಿಡಿಸಿದ್ದರು. ಪ್ರಸಕ್ತ ಟಿ20 ವಿಶ್ವಕಪ್ ಸರಣಿಯಲ್ಲಿ ಇದು ರೋಹಿತ್ ಶರ್ಮಾ ಅವರ ವೈಯುಕ್ತಿಕ ಅತ್ಯಧಿಕ ರನ್ ಗಳಿಕೆಯಾಗಿದೆ. ಈ ಹಿಂದೆ ಶರ್ಮಾ, ಕಿವೀಸ್ ವಿರುದ್ಧ 5, ಪಾಕಿಸ್ತಾನದ ವಿರುದ್ಧ 10,  ಬಾಂಗ್ಲಾ ವಿರುದ್ಧ 18 ಮತ್ತು ಆಸಿಸ್ ವಿರುದ್ಧ 12 ರನ್ ಗಳನ್ನಷ್ಟೇ ದಾಖಲಿಸಿ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ನಿನ್ನೆ ತವರು ನೆಲದ ಬೆಂಬಲ ಪಡೆದ ರೋಹಿತ್ ಕೇವಲ 31  ಎಸೆತಗಳಲ್ಲಿ 43 ರನ್ ಸಿಡಿಸಿ ವಿಂಡೀಸ್ ನ ಬದ್ರಿಗೆ ವಿಕೆಟ್ ಒಪ್ಪಿಸಿದ್ದರು.

2. ಸಾಮರ್ಥ್ಯ ಪ್ರದರ್ಶಿಸಿದ ವಿಂಡೀಸ್ ನ ಸ್ಯಾಮುಯೆಲ್ ಬದ್ರಿ

ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿನ್ನೆ ನಿಜಕ್ಕೂ ವಿಂಡೀಸ್ ಬೌಲರ್ ಗಳ ಮೇಲೆ ಸವಾರಿ ಮಾಡಿತ್ತು. ಭಾರತದ ಮೊದಲ ವಿಕೆಟ್ ಪತನವಾಗಿದ್ದೇ  ತಂಡದ ಮೊತ್ತ 62 ರನ್ ಗಳಾಗಿದ್ದಾಗ. ವಿಂಡೀಸ್ ನ ಸ್ಯಾಮುಯೆಲ್ ಬದ್ರಿ ಎಸೆದ 8ನೇ ಓವರ್ ನಲ್ಲಿ ರೋಹಿತ್ ಶರ್ಮಾ ಎಲ್ ಬಿ ಬಲೆಗೆ ಬಿದ್ದಿದ್ದರು. ಕೇವಲ ವಿಕೆಟ್ ಪಡೆದಿದ್ದು ಮಾತ್ರವಲ್ಲದೇ  ಭಾರತದ ಬ್ಯಾಟಿಂಗ್ ವೇಗಕ್ಕೆ ಬದ್ರಿ ಅಕ್ಷರಶಃ ಕಡಿವಾಣ ಹಾಕಿದ್ದರು. ವಿಂಡೀಸ್ ನ ಇತರೆ ಬೌಲರ್ ಗಳಾದ ರಸೆಲ್ (11.75 ಸರಾಸರಿ), ಬ್ರಾತ್ ವೇಟ್ (9.50 ಸರಾಸರಿ), ಬೆನ್ನ್ (9.00 ಸರಾಸರಿ)  ಮತ್ತು ಡ್ವೇಯ್ನ್ ಬ್ರಾವೋ (11.00ಸರಾಸರಿ) ಅವರು ಭಾರತೀಯ ಬ್ಯಾಟ್ಸಮನ್ ಗಳಿಂದ ದಂಡನೆಗೆ ಒಳಗಾದರೆ ಬದ್ರಿ (6.50 ಸರಾಸರಿ) ಮಾತ್ರ ತಮ್ಮ ನಾಲ್ಕು ಓವರ್ ಗಳಲ್ಲಿ ಬಿಟ್ಟುಕೊಟ್ಟಿದ್ದು  ಕೇವಲ 26 ರನ್ ಮಾತ್ರ. ಆ ಮೂಲಕ ಭಾರತದ ರನ್ ವೇಗಕ್ಕೆ ಬದ್ರಿ ಕಡಿವಾಣ ಹಾಕಿದ್ದರು. ಅದರಲ್ಲಿಯೂ ಪ್ರಮುಖವಾಗಿ ಭಾರತದ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಚಾಣಾಕ್ಷತನ  ಪ್ರದರ್ಶಿಸಿದ ವಿಂಡೀಸ್ ನಾಯಕ ಸಾಮಿ ಬದ್ರಿಗೆ ಸ್ಲಾಗ್ ಓವರ್ ಸಮಯದಲ್ಲಿ ಬಾಲ್ ನೀಡಿದ್ದರು. ಇದರಿಂದ ಭಾರತದ ರನ್ ವೇಗಕ್ಕೆ ಕಡಿವಾಣ ಬಿದ್ದಿತ್ತು. ಇಲ್ಲವಾಗಿದ್ದಲ್ಲಿ ಖಂಡಿತ ಭಾರತ  ತಂಡದ ಮೊತ್ತ 220ರ ಗಡಿ ದಾಟುತ್ತಿತ್ತು.

3. ಮತ್ತೆ ಕೇಂದ್ರ ಬಿಂದುವಾದ ವಿರಾಟ್ ಕೊಹ್ಲಿ
ಸೂಪರ್ 10 ಹಂತದ ಕೊನೆಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಕೇಂದ್ರ ಬಿಂದುವಾಗಿದ್ದ ಭಾರತದ ವಿರಾಟ್ ಕೊಹ್ಲಿ  ನಿನ್ನೆ ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿಯೂ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಇನ್ನಿಂಗ್ಸ್ 8ನೇ ಓವರ್ ನಲ್ಲಿ ಬದ್ರಿ ಎಸೆತದಲ್ಲಿ ರೋಹಿತ್ ಶರ್ಮಾ ಎಲ್ ಬಿ ಬಲೆಗೆ  ಬಿದ್ದ ಬಳಿಕ ಕ್ರೀಸ್ ಗೆ ಆಗಮಿಸಿದ ಕೊಹ್ಲಿ ಆರಂಭದಲ್ಲಿ ಕೊಂಚ ಗೊಂದಲಗೊಂಡರಾದರೂ, ಬಳಿಕ ಚೇತರಿಸಿಕೊಂಡು ಎಂದಿನ ತಮ್ಮ ಬ್ಯಾಟಿಂಗ್ ಅನ್ನು ಮುಂದುವರೆಸಿದರು. ಪಂದ್ಯದ ಒಂದು  ಹಂತದಲ್ಲಿ ರನ್ ಔಟ್ ಆಗುವ ಅಪಾಯಕ್ಕೆ ಕೊಹ್ಲಿ ಸಿಲುಕಿದ್ದರಾದರೂ, ವಿಂಡೀಸ್ ಕ್ಷೇತ್ರ ರಕ್ಷಕರ ಯಡವಟ್ಟಿನಿಂದಾಗಿ ಅವರು ಬಚಾವ್ ಆಗಿದ್ದರು. ಕೊಹ್ಲಿಗೆ ಭಾರತದ ಆರಂಭಿಕ ಆಟಗಾರ  ಅಜಿಂಕ್ಯಾ ರಹಾನೆ ನಿಜಕ್ಕೂ ಉತ್ತಮ ಸಾಥ್ ನೀಡಿದರು. ಒಂದು ರನ್ ಗಳಿಸುವ ಪರಿಸ್ಥಿತಿಯಲ್ಲಿ ವೇಗವಾಗಿ ಓಡುವ ಮೂಲಕ 2 ರನ್ ಕದಿಯುತ್ತಿದ್ದ ಈ ಜೋಡಿ ಚಾಕಚಕ್ಯತೆ ನಿಜಕ್ಕೂ ಕ್ರಿಕೆಟ್  ವಿಶ್ಲೇಷಕರ ಶ್ಲಾಘನೆಗೆ ಪಾತ್ರವಾಯಿತು. ಇನ್ನು ಇನ್ನಿಂಗ್ಸ್ ಅಂತಿಮ ಸ್ಲಾಗ್ ಓವರ್ ಗಳಲ್ಲಿಯಂತೂ ಕೊಹ್ಲಿ ಬೌಂಡರಿಗಳ ಮೇಲೆ ಬೌಂಡರಿ ಬಾರಿಸಿ ವಿಂಡೀಸ್ ಬೌಲರ್ ಗಳ ಬೆವರಿಳಿಸಿದರು.  ಕೇವಲ 47 ಎಸೆತಗಳನ್ನು ಎದುರಿಸಿದ ಕೊಹ್ಲಿ ಬರೊಬ್ಬರಿ 89 ರನ್ ಸಿಡಿಸಿದರು. ಅಲ್ಲದೇ ಅಜೇಯರಾಗಿ ಉಳಿಯುವ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

4. ಗೇಯ್ಲ್ ವಿಕೆಟ್ ಕಬಳಿಸಿ ವಿಂಡೀಸ್ ಪಾಳಯದ ಆತಂಕಕ್ಕೆ ಕಾರಣರಾದ ಭಾರತದ ವೇಗಿಗಳು
ಸೆಮಿಫೈನಲ್ ಗೂ ಮುನ್ನ ಈ ಪಂದ್ಯವನ್ನು ಕ್ರಿಸ್ ಗೇಯ್ಲ್ ಮತ್ತು ವಿರಾಟ್ ಕೊಹ್ಲಿ ನಡುವಿನ ಹೋರಾಟ ಎಂದು ಭಾವಿಸಲಾಗುತ್ತಿತ್ತು. ಆದರೆ ನಿನ್ನೆಯ ಪಂದ್ಯದ ಕೇಂದ್ರ ಬಿಂದುವಾಗಿದ್ದ ಕ್ರಿಸ್  ಗೇಯ್ಲ್ ಕೇವಲ 5 ರನ್ ಗಳಿಸಿ ವಿಂಡೀಸ್ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದ್ದರು. ಬುಮ್ರಾಹ್ ಎಸೆದ 2ನೇ ಓವರ್ ನ ಮೊದಲ ಎಸೆತದಲ್ಲೇ ಗೇಯ್ಲ್ ಕ್ಲೀನ್ ಬೋಲ್ಡ್ ಆಗುವುದರೊಂದಿಗೆ  ವಿಂಡೀಸ್ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಮೊದಲ ಓವರ್ ನಲ್ಲಿ ಆಶೀಶ್ ನೆಹ್ರಾಗೆ ಬೌಂಡರಿ ಬಾರಿಸಿ ಎಂದಿನ ತಮ್ಮ ದೈತ್ಯ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸುವ  ಮುನ್ಸೂಚನೆ ನೀಡಿದ ಗೇಯ್ಲ್ 2ನೇ ಓವರ್ ನಲ್ಲಿ ಬುಮ್ರಾಹ್ ಎಸೆದ ಯಾರ್ಕರ್ ಎಸೆತವನ್ನು ಆಡುವಲ್ಲಿ ವಿಫಲರಾಗಿ ಕ್ಲೀನ್ ಬೋಲ್ಡ್ ಆದರು. ಆ ಮೂಲಕ ಧೋನಿ ಪಡೆಯ ವೇಗದ ಬೌಲರ್  ಗಳು ವಿಂಡೀಸ್ ಮಾರಕವಾಗುವ ಕುರಿತು ಮುನ್ಸೂಚನೆ ನೀಡಿದ್ದರಾದರೂ, ಬಳಿಕ ಬಂದ ಚಾರ್ಲ್ಸ್ ಮತ್ತು ಸಿಮಾನ್ಸ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ವಿಂಡೀಸ್ ಗೆಲುವಿಗೆ ಕಾರಣರಾದರು.

5. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಿಮಾನ್ಸ್
ವೆಸ್ಟ್ ಇಂಡೀಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಲೆಂಡ್ಲ್ ಸಿಮಾನ್ಸ್ ನಿಜಕ್ಕೂ ಭಾರತದ ಕಾರ್ಯತಂತ್ರಗಳನ್ನೆಲ್ಲಾ ವಿಫಲಗೊಳಿಸಿದ್ದರು. ಆರಂಭದಿಂದಲೇ ಚಾರ್ಲ್ಸ್ ಜೊತೆಗೂಡಿ  ರನ್ ವೇಗವನ್ನು ಹೆಚ್ಚಿಸುತ್ತಿದ್ದ ಸಿಮಾನ್ಸ್ ಭಾರತದ ಬೌಲರ್ ಗಳ ಬೆವರಿಳಿಸಿದ್ದರು. ಟಿ20 ಮಾದರಿಯ ಸ್ಪೆಶಲಿಸ್ಟ್ ಬ್ಯಾಟ್ಸಮನ್ ಆಗಿರುವ ಸಿಮಾನ್ಸ್ ತಮಗೆ ಸಿಕ್ಕ 2 ಅಮೂಲ್ಯ ಜೀವಾದಾನವನ್ನು  ಸಮರ್ಥವಾಗಿ ಬಳಸಿಕೊಂಡರು. ವೆಸ್ಟ್ ಇಂಡೀಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಲೆಂಡ್ಲ್ ಸಿಮಾನ್ಸ್ ಪಂದ್ಯದ 7ನೇ ಓವರ್ ನಲ್ಲಿಯೇ ಔಟ್ ಆಗಿದ್ದರು. ಅಶ್ವಿನ್ ಎಸೆದ 7ನೇ ಓವರ್ ನ  5ನೇ ಎಸೆತದಲ್ಲಿ ಸಿಮಾನ್ಸ್, ಬುಮ್ರಾಗೆ ಕ್ಯಾಚ್ ನೀಡಿದ್ದರು. ಅಶ್ವಿನ್ ಎಸೆದ ಸ್ಪಿನ್ ಬಾಲ್ ಅನ್ನು ಸಿಮಾನ್ಸ್ ಬೌಂಡರಿಗೆ ಅಟ್ಟುವ ಪ್ರಯತ್ನ ಮಾಡಿದರು. ಆಗ ಬಾಲ್ ಅವರ ಬ್ಯಾಟ್ ನ ತುದಿಗೆ ಬಿದ್ದು  ನೇರ ಬೌಂಡರಿಯತ್ತ ಸಾಗಿತ್ತು. ಅದರೆ ಅಷ್ಟರಲ್ಲಿಯೇ ಅದ್ಭುತವಾಗಿ ಬಾಗಿದ ಬುಮ್ರಾಹ್ ಸಿಮಾನ್ಸ್ ನೀಡಿದ ಕ್ಯಾಚ್ ಅನ್ನು ತೆಗೆದುಕೊಂಡಿದ್ದರು. ಆಗ ಮತ್ತೆ ಭಾರತೀಯ ಪಾಳಯದಲ್ಲಿ ಹರ್ಷ  ಮೊಳಗಿತ್ತಾದರೂ, ಅಂಪೈರ್ ಗಳು ಅಶ್ವಿನ್ ಎಸೆತವನ್ನು ನೋಬಾಲ್ ಎಂದು ಘೋಷಣೆ ಮಾಡಿದಾಗ ಮತ್ತೆ ನಿರಾಶೆ ಮೂಡಿತ್ತು.

ಆಗ ಸಿಮಾನ್ಸ್ ಕೇವಲ 18 ರನ್ ಗಳಿಸಿದ್ದರು ಅಷ್ಟೇ.. ಇನ್ನು ಎರಡನೇ ಬಾರಿಗೆ ಸಿಮಾನ್ಸ್ ಗೆ ಜೀವದಾನ ನೀಡಿದ್ದು ಬಾಂಗ್ಲಾ ಪಂದ್ಯದ ಕೊನೆಯ ಓವರ್ ಹೀರೋ ಹಾರ್ದಿಕ್ ಪಾಂಡ್ಯಾ. ಪಾ೦ಡ್ಯ  ಎಸೆದ 15ನೇ ಓವರ್ ನ ಕೊನೆಯ ಎಸೆತದಲ್ಲಿ ಸಿಮಾನ್ಸ್, ಅಶ್ವಿನ್‍ಗೆ ಕ್ಯಾಚ್ ನೀಡಿದ್ದರು. ಪಾಂಡ್ಯಾ ಹಾಕಿದೆ ಫುಲ್ ಟಾಸ್ ಎಸೆತವನ್ನು ತಪ್ಪಾಗಿ ಗ್ರಹಿಸಿದ್ದ ಸಿಮಾನ್ಸ್ ಕವರ್ ನಲ್ಲಿದ್ದ ಅಶ್ವಿನ್ ಗೆ  ಕ್ಯಾಚ್ ನೀಡಿದ್ದರು. ಆದರೆ ಅದೂ ಕೂಡ ನೋಬಾಲ್ ಆಗಿತ್ತು. ಆಗ ಸಿಮಾನ್ಸ್ ವೈಯುಕ್ತಿಕ ರನ್ ಗಳಿಕೆ 50 ರನ್ ಅಗಿತ್ತು. ಈ ಎರಡು ನೋ ಬಾಲ್ ಗಳಿಲ್ಲದೇ ಹೋಗಿದ್ದರೆ ಖಂಡಿತ ವೆಸ್ಟ್ ಇಂಡೀಸ್  ಭಾರತದ ಮೊತ್ತವನ್ನು ಗಳಿಸಲು ಪ್ರಯಾಸ ಪಡಬೇಕಿತ್ತು. 2 ಜೀವದಾನದ ಬಳಿಕ ಸಿಮಾನ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಂಡೀಸ್ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಕೇವಲ  51 ಎಸೆತಗಳನ್ನು ಎದುರಿಸಿದ ಸಿಮಾನ್ಸ್ ಬರೊಬ್ಬರಿ 82 ರನ್ ಸಿಡಿಸಿ ವಿಂಡೀಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com