
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಆರ್‌ಸಿಬಿ-ಪುಣೆ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಮಧ್ಯಾಹ್ನ 2ರಿಂದ ರಾತ್ರಿ 9.30ರವರೆಗೆ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಅಲ್ಲದೆ ಸಂಚಾರ ವ್ಯವಸ್ಥೆ ಮಾರ್ಪಾಡು ಮಾಡಲಾಗಿದೆ.
ಶನಿವಾರವಾದ್ದರಿಂದ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನಲೆಯಲ್ಲಿ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ಮಾರ್ಗದ ರಸ್ತೆಗಳಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದ್ದು, ಕೆಲ ಮಾರ್ಗದಲ್ಲಿ ವಾಹನ ಸಂಚಾರವನ್ನು ಬದಲಾಯಿಸಲಾಗಿದೆ. ಇನ್ನು ಕ್ರಿಕೆಟ್ ವೀಕ್ಷಣೆಗೆ ಆಗಮಿಸುವವ ಪ್ರೇಕ್ಷಕರಿಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಐಪಿಎಲ್ ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್ ಅಭಿಮಾನಿಗಳಿಗೆ ಬಿಎಂಟಿಸಿ ವತಿಯಿಂದ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದ್ದು, ಮಾಣಿಕ್ ಷಾ ಪರೇಡ್ ಮೈದಾನ, ಮೇಯೋ ಹಾಲ್ ನಿಂದ ಕಾಡುಗೋಡಿ (ಎಸ್ಬಿಎಸ್-1ಕೆ), ಮೇಯೋ ಹಾಲ್ ನಿಂದ ಸರ್ಜಾಪುರ (ಜಿ-2), ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ (ಜಿ-3), ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ (ಜಿ-4), ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೆಂಗೇರಿ ಕೆಎಚ್ಬಿ ಕ್ವಾಟ್ರರ್ಸ್ (ಜಿ-6), ಬಿಆರ್ವಿ ಪೆರೇಡ್ ಗ್ರೌಂಡ್ನಿಂದ ಜನಪ್ರಿಯ ಟೌನ್ಶಿಪ್ (ಜಿ-7), ಆರ್.ಕೆ. ಹೆಗಡೆನಗರ (ಜಿ-10), ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲ (ಜಿ-8),ಯಲಹಂಕ (ಜಿ-9), ಬಾಗಲೂರು (ಜಿ-11) ಪ್ರದೇಶಗಳಿಗೆ ಹೆಚ್ಚುವರಿ ಬಸ್ ಗಳ ಸೇವೆ ಒದಗಿಸಲಾಗಿದೆ.
ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ
ಇನ್ನು ವೀಕೆಂಡ್ ಆದ್ದರಿಂದ ಮೈದಾನಕ್ಕೆ ಆಗಮಿಸುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ಸಂಭವವಿರುವುದರಿಂದ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಯುಬಿ ಸಿಟಿ ಹಾಗೂ ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ ಪಾಸ್ ಹೊಂದಿರುವವರು ಯುಬಿ ಸಿಟಿ ಪೇ ಅಂಡ್ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಹುದು. ಕೆಎಸ್ಸಿಎ ಸದಸ್ಯರ ವಾಹನಗಳನ್ನು ಸೇಂಟ್ ಮಾರ್ಕ್ಸ್ ಕ್ಯಾಥಡ್ರೆಲ್ ಚರ್ಚ್ ಹಾಗೂ ಬೌರಿಂಗ್ ಇನ್ಸ್ಟಿಟಿಟ್ಯೂಟ್ನಲ್ಲಿ ನಿಲ್ಲಿಸಲು ಅನುವು ಮಾಡಿಕೊಡಲಾಗಿದೆ.
ಪಾರ್ಕಿಂಗ್ ನಿರ್ಬಂಧಿತ ಸ್ಥಳಗಳು
ಕ್ವೀನ್ಸ್ ರಸ್ತೆಯಲ್ಲಿ ಸಿಟಿಒ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆ ಎರಡೂ ಬದಿ, ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆ ಎರಡೂ ಕಡೆ, ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ, ಕ್ರಿಕೆಟ್ ಮೈದಾನದ ಕಾಂಪೌಂಡ್ಗೆ ಹೊಂದಿಕೊಂಡಂತೆ ರಸ್ತೆಯ ಎರಡೂ ಕಡೆ, ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆ ಎರಡೂ ಬದಿ ಮತ್ತು ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ. ವೃತ್ತದಿಂದ ಡಿಕೆನ್ಸನ್ ರಸ್ತೆ ಜಂಕ್ಷನ್ವರೆಗೆ ರಸ್ತೆ ಎರಡೂ ಬದಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವಲ ಹಾಗಿಲ್ಲ. ಇದಲ್ಲದೆ ಕಾಮರಾಜ ರಸ್ತೆ ಜಂಕ್ಷನ್ನಿಂದ ಡಿಕೆನ್ಸನ್ ರಸ್ತೆ ಜಂಕ್ಷನ್ ವರೆಗೆ ಬಿಎಂಟಿಸಿ ಬಸ್ ಹೊರತುಪಡಿಸಿ ಇತರೆ ಎಲ್ಲ ತರಹದ ವಾಹನಗಳ ನಿಲುಗಡೆ ನಿಷೇಧ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಎಸ್ಬಿಐ ವೃತ್ತದಿಂದ ಆಶೀರ್ವಾದಂ ವೃತ್ತದವರೆಗೆ, ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ. ರಸ್ತೆಯಿಂದ ಸೇಂಟ್ಮಾರ್ಕ್ಸ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆವರೆಗೆ, ಕ್ವೀನ್ಸ್‌ವೃತ್ತದಿಂದ ಹಡ್ಸನ್ ವೃತ್ತದವರೆಗೆ ಹಾಗೂ ಮಲ್ಯ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್ಆರ್ಎಂಆರ್ ವೃತ್ತದವರೆಗೆ, ಕಬ್ಬನ್ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂದೆ, ಬಾಲಭವನ ಮೌಂಟೇನ್ ರಸ್ತೆಗಳಲ್ಲಿ ಪಾರ್ಕಿಂಗ್ ಗೆ ನಿರ್ಬಂಧ ಹೇರಲಾಗಿದೆ.
ಕ್ವೀನ್ಸ್‌ವೃತ್ತದಿಂದ ಲ್ಯಾವೆಲ್ಲೆ ರಸ್ತೆಯಲ್ಲಿ ಗ್ರಾಂಟ್ ಜಂಕ್ಷನ್ವರೆಗೂ ಪಾರ್ಕಿಂಗ್ ಮಾಡುವ ಹಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement