ಬೆಂಗಳೂರಿನಿಂದ ಎನ್ ಸಿಎ ಸ್ಥಳಾಂತರ ಖಚಿತ

ಕ್ರಿಕೆಟ್ ಆಟಗಾರರ ತರಬೇತಿ ಕೇಂದ್ರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಬೇರೆಡೆಗೆ ಸ್ಥಳಾಂತರಿಸಿವುದು ಖಚಿತವಾಗಿದ್ದು, ಈ ಬಗ್ಗೆ ಬಿಸಿಸಿಐ ಇತರೆ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರವೊಂದನ್ನು ಬರೆದಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಸಂಗ್ರಹ ಚಿತ್ರ)
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಸಂಗ್ರಹ ಚಿತ್ರ)

ಬೆಂಗಳೂರು: ಕ್ರಿಕೆಟ್ ಆಟಗಾರರ ತರಬೇತಿ ಕೇಂದ್ರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಬೇರೆಡೆಗೆ ಸ್ಥಳಾಂತರಿಸಿವುದು ಖಚಿತವಾಗಿದ್ದು, ಈ ಬಗ್ಗೆ ಬಿಸಿಸಿಐ ಇತರೆ ರಾಜ್ಯ  ಕ್ರಿಕೆಟ್ ಸಂಸ್ಥೆಗಳಿಗೆ ಪತ್ರವೊಂದನ್ನು ಬರೆದಿದೆ.

ಕ್ರಿಕೆಟ್ ಗೆ ಸಂಬಂಧಿಸಿದಂತೆ ಬೆಂಗಳೂರಿನ ಪಾಲಿಗೆ ಹೆಮ್ಮೆಯಂತಿದ್ದ ಎನ್ ಸಿಎ ಇನ್ನು ಕೆಲವೇ ದಿನಗಳಲ್ಲಿ ಶಾಶ್ವತವಾಗಿ ಸ್ಥಗಿತಗೊಳ್ಳಲ್ಲಿದ್ದು, ಎನ್ ಸಿಎಯನ್ನು ಬೇರೆಡೆಗೆ ಸ್ಥಳಾಂತರಿಸಲು  ಬಿಸಿಸಿಐ ನಿರ್ಧರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವ ಕುರಿತು ಬಿಸಿಸಿಐ ಇತರೆ  ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ಬದಲಿ ತಾಣಕ್ಕೆ ಸೂಕ್ತ ಜಾಗ ಹೊಂದಿರುವ ರಾಜ್ಯ ಸಂಸ್ಥೆಗಳು ಈ ಬಗ್ಗೆ ಮಾಹಿತಿ ನೀಡಬೇಕೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಕೇಳಿದೆ.

ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿಸಿಸಿಐ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದು, ಮಂಡಳಿ ಕಾರ್ಯದರ್ಶಿ ಅಜಯ್ ಶಿರ್ಕೆ ಎಲ್ಲ ರಾಜ್ಯ ಸಂಸ್ಥೆಗಳಿಗೆ ಪತ್ರ  ಬರೆದಿದ್ದು, 30-40 ಎಕರೆ ಭೂಮಿ ಹೊಂದಿರುವವರು ಮತ್ತು ಇದಕ್ಕೆ ಆಯಾ ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿರುವವರು ಸೂಕ್ತ ದಾಖಲೆಗಳನ್ನು ಒದಗಿಸಿ ಎನ್‌ಸಿಎಯನ್ನು ತಮ್ಮಲ್ಲಿಗೆ  ಸ್ಥಳಾಂತರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಈ ಬಗ್ಗೆ ಎನ್‌ಸಿಎ ಅಧ್ಯಕ್ಷ ನಿರಂಜನ್ ಷಾ ಅವರು ಮಾಧ್ಯಮಗಳಿದೆ ಮಾಹಿತಿ ನೀಡಿದ್ದು, "ಬೆಂಗಳೂರಿನಲ್ಲೇ ಎನ್‌ಸಿಎಯನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲು ಬಿಸಿಸಿಐ ಆಸಕ್ತಿ  ಹೊಂದಿದೆಯಾದರೂ, ನಗರದಲ್ಲಿ ಸೂಕ್ತ ಜಾಗ ದೊರಕಿಲ್ಲ. 2010ರಲ್ಲೇ ಕರ್ನಾಟಕ ಸರ್ಕಾರದಿಂದ 50 ಕೋಟಿ ರು.ಗೆ 49 ಎಕರೆ ಭೂಮಿ ಖರೀದಿಸಲಾಗಿತ್ತು. ಆದರೆ ಇದರ ವಿರುದ್ಧ ಸಾರ್ವಜನಿಕ  ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಇದು ಕಾನೂನು ಬಾಹಿರವಾದ ಖರೀದಿ ಎಂದು 2013ರಲ್ಲಿ ತೀರ್ಪು ನೀಡಿದೆ. ನಂತರ ಬಿಸಿಸಿಐ ಬೇರೆ ಜಾಗಕ್ಕಾಗಿ ರಾಜ್ಯ ಸರ್ಕಾರವನ್ನು  ವಿನಂತಿಸುತ್ತಲೇ ಬಂದಿತ್ತು. ಆದರೆ ಕರ್ನಾಟಕ ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ಬರಲಿಲ್ಲ. ಬೆಂಗಳೂರಿನಲ್ಲಿ ಸೂಕ್ತ ಜಾಗಕ್ಕಾಗಿ ಬಿಸಿಸಿಐ ಸುದೀರ್ಘ ಸಮಯದಿಂದ ಕಾದಿದೆ. ಸದ್ಯ ಚಿನ್ನಸ್ವಾಮಿ  ಆವರಣದಲ್ಲಿರುವ ಅಕಾಡೆಮಿಗೆ ಜಾಗದ ಕೊರತೆ ಸಾಕಷ್ಟು ಕಾಡುತ್ತಿದೆ. ಹೀಗಾಗಿ ಬೇರೆಡೆ ಸೂಕ್ತ ಜಾಗ ಸಿಕ್ಕರೆ ಸ್ಥಳಾಂತರಿಸುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರದಿಂದ ಸೂಕ್ತ ಪ್ರಕ್ರಿಯೆ ಬರದ ಹಿನ್ನಲೆಯಲ್ಲಿ ಮಂಡಳಿ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ, ಜೂನ್ 30ರೊಳಗೆ ಕರ್ನಾಟಕ ಸರ್ಕಾರ ಬೇರೆ ಜಾಗ ಒದಗಿಸದಿದ್ದರೆ ಎನ್‌ಸಿಎಯನ್ನು  ಬೆಂಗಳೂರಿನಿಂದ ಸ್ಥಳಾಂತರ ಮಾಡುತ್ತೇವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com