

ನವದೆಹಲಿ: ಸೆಪ್ಟಂಬರ್ 22 ರಿಂದ ಭಾರತ- ನ್ಯೂಜಿಲ್ಯಾಂಡ್ ನಡುವೆ ಕಾನ್ಪುರದಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿ ಪ್ರಾರಂಭವಾಗಲಿದೆ. ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೋಚ್ ಅನಿಲ್ ಕುಂಬ್ಳೆ ಅವರು ಭಾಗವಹಿಸಿದ್ದ ಆಯ್ಕೆ ಸಮಿತಿಯ ಸಭೆಯಲ್ಲಿ ಭಾರತದ ತಂಡವನ್ನು ಅಂತಿಮಗೊಳಿಸಲಾಗಿದೆ.
ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಗೌತಮ್ ಗಂಭೀರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟೆಸ್ಟ್ ಸರಣಿಗೆ ಗೌತಮ್ ಗಂಭೀರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ಕಳಪೆ ಪ್ರದರ್ಶನ ನೀಡುತ್ತಿರುವ ಶಿಖರ್ ಧವನ್ ಅವರನ್ನು ತಂಡದಲ್ಲಿ ಇರಿಸಿಕೊಳ್ಳಲಾಗಿದೆ. ಇದರಿಂದಾಗಿ ಗೌತಮ್ ಗಂಭೀರ್ ಅಭಿಮಾನಿಗಳು ಬಿಸಿಸಿಐ ಆಯ್ಕೆ ಸಮಿತಿ ಮತ್ತು ಕೊಹ್ಲಿ ವಿರುದ್ಧ ಗರಂ ಆಗಿದ್ದಾರೆ.
ಈ ಸಂಬಂಧ ಗೌತಮ್ ಗಂಭೀರ್ ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಗಂಭೀರ್ ಅಭಿಮಾನಿಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸತತ ವೈಫಲ್ಯಎದುರಿಸುತ್ತಿರುವ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಅವರ ಸ್ಥಾನಕ್ಕೆ ಗಂಭೀರ್ ಅವರನ್ನು ಆಯ್ಕೆ ಮಾಡಬಹುದಿತ್ತು ಎಂದು ಟ್ವೀಟ್ ಮಾಡಿದ್ದಾರೆ.