
ಮುಂಬೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರ ಹಗರಣಗಳ ಮೂಲಕ ಕುಖ್ಯಾತಿ ಪಡೆದಿದ್ದ ಬಿಸಿಸಿಐ ಇದೀಗ ಕುಖ್ಯಾತಿ ಕಳಚಿಕೊಳ್ಳಲು ಯತ್ನಿಸುತ್ತಿದ್ದ ಇದೇ ಮೊದಲ ಬಾರಿಗೆ ಐಪಿಎಲ್ ಪ್ರಸಾರ ಹಕ್ಕನ್ನು ಹರಾಜಿನ ಮೂಲಕ ಮಾರಾಟಕ್ಕಿಟ್ಟಿದೆ.
ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಅನುರಾಗ್ ಠಾಕೂರ್ ಅವರು ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಪ್ರಮುಖ ಹೆಜ್ಜೆ ಇಟ್ಟಿದ್ದು, ಮುಂದಿನ 10 ವರ್ಷಗಳ ಕಾಲಾವಧಿಗೆ ಐಪಿಎಲ್ ಪ್ರಸಾರ ಹಕ್ಕನ್ನು ಹರಾಜಿನ ಮೂಲಕ ಮಾರಾಟ ಮಾಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಬಿಸಿಸಿಐಗೆ ಮತ್ತಷ್ಟು ಲಾಭ ಹರಿದು ಬರುವ ನಿರೀಕ್ಷೆ ಇದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅನುರಾಗ್ ಠಾಕೂರ್ ಅವರು, ವಿಶ್ವದ ಇತರೆ ಕ್ರೀಡೆಗಳಿಗೆ ಹೋಲಿಸಿದರೆ ಐಪಿಎಲ್ ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ಟೂರ್ನಿಯಾಗಿದೆ. ಹೀಗಾಗಿ ಇಂತಹ ಕ್ರೀಡೆಯನ್ನು ಪಾರದರ್ಶಕವಾಗಿಡುವ ಮೂಲಕ ಮತ್ತಷ್ಟು ಜನಪ್ರಿಯಗೊಳಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಬಿಡ್ಡಿಂಗ್ ಮೂಲಕ ಪ್ರಸಾರ ಹಕ್ಕು ಮಾರಾಟ ಮಾಡಲು ಮುಂದಾಗಿದ್ದೇವೆ. ಅತೀ ಹೆಚ್ಚು ಮೊತ್ತದ ಬಿಡ್ಡಿಂಗ್ ಮಾಡುವ ವಾಹಿನಿಗೆ ಮುಂದಿನ ಹತ್ತು ವರ್ಷಗಳ ಕಾಲಾವಧಿಯ ಪ್ರಸಾರಹಕ್ಕನ್ನು ನೀಡುವುದಾಗಿ ಅವರು ಹೇಳಿದ್ದಾರೆ.
"ಪ್ರತಿಭೆಗೆ ಅವಕಾಶ ಎಂಬುದು ಐಪಿಎಲ್ ಟ್ಯಾಗ್ ಲೈನ್ ಆಗಿದ್ದು, ಇದನ್ನೇ ಕಳೆದ 9 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೇವೆ. ಐಪಿಎಲ್ ಮೂಲಕ ಸಾಕಷ್ಟು ಉತ್ತಮ ಪ್ರತಿಭೆಗಳು ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೆಲೆಕಂಡುಕೊಂಡಿವೆ. ವಿಶ್ವದ ಕ್ರಿಕೆಟ್ ಪ್ರೇಮಿಗಳೂ ಕೂಡ ಐಪಿಎಲ್ ಅನ್ನು ಸಾಕಷ್ಟು ಪ್ರೀತಿಸುತ್ತಿದ್ದಾರೆ. ಐಪಿಎಲ್ ಇದೀಗ ಕ್ರೀಡಾಭಿಮಾನಿಗಳ ನೆಚ್ಚಿನ ಟೂರ್ನಿಯಾಗಿದೆ. ಸಾಕಷ್ಟು ಖ್ಯಾತ ಆಟಗಾರರೂ ಕೂಡ ಐಪಿಎಲ್ ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಪ್ರತಿಷ್ಠಿತ ಟೂರ್ನಿ ಆಯೋಜಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಹಿಂದೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಸಾಕಷ್ಟು ವಿವಾದಕ್ಕೊಳಗಾಗಿದ್ದ ಐಪಿಎಲ್ ಟೂರ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಬಳಿಕ ಸುಪ್ರೀಂ ಕೋರ್ಟ್ ಲೋಧಾ ಸಮಿತಿಯನ್ನು ನೇಮಿಸಿ ಐಪಿಎಲ್ ಆಡಳಿತ ಮಂಡಳಿಗೆ ಮೇಜರರ್ ಸರ್ಜರಿ ಮಾಡಿಸಿತ್ತು. ಲೋಧಾ ಸಮಿತಿ ಕೂಡ ಬಿಸಿಸಿಐ ಹಾಗೂ ಐಪಿಎಲ್ ಗೆ ಸಾಕಷ್ಟು ಬದಲಾವಣೆಯ ಶಿಫಾರಸ್ಸು ಮಾಡಿತ್ತು. ಅದರನ್ವಯ ಇದೀಗ ಹರಾಜಿನ ಮೂಲಕ 2018ರ ಐಪಿಎಲ್ ಪ್ರಸಾರ ಹಕ್ಕನ್ನು ಮಾರಾಟ ಮಾಡಲಾಗುತ್ತಿದೆ.
ಪ್ರಸ್ತುತ ಐಪಿಎಲ್ ಪ್ರಸಾರ ಹಕ್ಕನ್ನು ಸೋನಿ ಎಂಟರ್ ಟೈನ್ ಮೆಂಟ್ ಇಂಡಿಯಾ ಸಂಸ್ಥೆ ಹೊಂದಿದ್ದು, ಅದರ ಕಾಲಾವಧಿ 2017ಕ್ಕೆ ಅಂತ್ಯವಾಗಲಿದೆ. ಹೀಗಾಗಿ 2018ರ ಪ್ರಸಾರಹಕ್ಕಿಗಾಗಿ ಬಿಸಿಸಿಐ ಹರಾಜು ನಡೆಸುತ್ತಿದೆ.
Advertisement