ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ಕೊನೆಗೂ ನಿಗದಿಯಾಗಿದ್ದು ಇವರಿಬ್ಬರ ವಿವಾಹ ಸಮಾರಂಭ ಇಟಲಿಯಲ್ಲಿ ನಡೆಯಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಮುಂದಿನ ವಾರ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಇವರಿಬ್ಬರ ಮದುವೆ ಸಮಾರಂಭ ಇಟಲಿಯಲ್ಲಿ ನಡೆಯಲಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಆಂಗ್ಲ ಪತ್ರಿಕೆ ವರದಿ ಪ್ರಕಾರ ಇದೇ ಡಿಸೆಂಬರ್ 9,10,11 ಹಾಗೂ 12ರಂದು ಕೊಹ್ಲಿ ಹಾಗೂ ಅನುಷ್ಕಾ ಮದುವೆಯಾಗಲಿದ್ದು ನಾಳೆ ಇಟಲಿಗೆ ಪ್ರಯಾಣ ಬೆಳಸಲಿದ್ದಾರೆ. ಈಗಾಗಲೇ ಮದುವೆಗಾಗಿ ಕೊಹ್ಲಿ ಗೆಳೆಯರು ಹಾಗೂ ಕುಟುಂಬ ಇಟಲಿಗೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ತಿಳಿದುಬಂದಿದೆ.
ಟೀಂ ಇಂಡಿಯಾ ಆಯ್ಕೆ ಸಮಿತಿ ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಭಾರತೀಯ ಕ್ರಿಕೆಟಿಗರು ಲಂಕಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಭಾಗಿಯಾಗುತ್ತಿರುವ ಕಾರಣ ಕೊಹ್ಲಿಗೆ ಮದುವೆಗೆ ಗೈರಾಗಲಿದ್ದಾರೆ.
ಆದರೆ ಇದೇ ಡಿಸೆಂಬರ್ 21ರಂದು ಮುಂಬೈನಲ್ಲಿ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸುವ ಸಾಧ್ಯತೆ ಇದೆ.