
ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 91 ರನ್ ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾಗಿ ಶತಕ ವಂಚಿತರಾಗಿದ್ದರು. ಆದರೆ ನೂತನ ಕ್ರಿಕೆಟ್ ನಿಯಮಾವಳಿ ಜಾರಿಯಾಗಿದ್ದರೆ ಖಂಡಿತ ಶರ್ಮಾ ಶತಕ ಸಿಡಿಸುತ್ತಿದ್ದರು.
ಹೌದು...ಕ್ರಿಕೆಟ್ ನ ನೂತನ ನಿಯಮಾವಳಿಗಳ ಪ್ರಕಾರ ಬ್ಯಾಟ್ಸಮನ್ ನ ಯಾವುಗೇ ಭಾಗ ರನೌಟ್ ಸಂದರ್ಭದಲ್ಲಿ ಕ್ರೀಸ್ ದಾಟಿದ್ದರೆ (ನೆಲಕ್ಕೆ ಸ್ಪರ್ಶಿಸಿರಲೇಬೇಕು ಎಂದೇನಿಲ್ಲ ಗಾಳಿಯಲ್ಲಿದ್ದರೂ) ಆತನನ್ನು ನಾಟ್ ಔಟ್ ಎಂದು ಪರಿಗಣಿಸಲಾಗುತ್ತದೆ. ಈ ನೂತನ ನಿಯಮಾವಳಿ ಇದೇ ಆಕ್ಟೋಬರ್ 1 ರಿಂದ ಜಾರಿಯಾಗುತ್ತಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲೇ ಈ ನಿಯಮ ಜಾರಿಯಾಗಿದ್ದರೆ ರೋಹಿತ್ ಶರ್ಮಾ ನಾಟ್ ಔಟ್ ಆಗಿರುತ್ತಿದ್ದರು. ಆಗ ಖಂಡಿತಾ ಭಾರತದ ಪರ ರೋಹಿತ್ ಶರ್ಮಾ ಶತಕ ಸಿಡಿಸಿರುತ್ತಿದ್ದರು.
ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ 118 ಎಸೆತಗಳಲ್ಲಿ 91 ರನ್ ಗಳನ್ನು ಸಿಡಿಸಿದ್ದರು. ಪಂದ್ಯದ 37ನೇ ಓವರ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ವಿರಾಟ್ ಕೊಹ್ಲಿ ಶಬ್ದಾಬ್ ಖಾನ್ ಎಸೆದ ಎಸೆತವನ್ನು ಪಾಯಿಂಟ್ ಗೆ ತಳ್ಳಿ ಒಂದು ರನ್ ಪಡೆಯಲು ಯತ್ನಿಸಿದರು. ನಾನ್ ಸ್ಟ್ರೈಕ್ ನಲ್ಲಿದ್ದ ರೋಹಿತ್ ಶರ್ಮಾ ಕೂಡ ವೇಗವಾಗಿಯೇ ರನ್ ಪಡೆಯಲು ಯತ್ನಿಸಿದರು. ಅಷ್ಟುಹೊತ್ತಿಗಾಗಲೇ ಫೀಲ್ಡರ್ ಬಾಬರ್ ಅಜಮ್ ಬಾಲ್ ಅನ್ನು ಕೀಪರ್ ಗೆ ಎಸೆದರು, ಕೀಪರ್ ಕೂಡ ಬೇಲ್ಸ್ ಹಾರಿಸದರು. ಅಷ್ಟು ಹೊತ್ತಿಗಾಗಲೇ ರೊಹಿತ್ ಶರ್ಮಾ ಡೈವ್ ಮಾಡಿ ಕ್ರೀಸ್ ದಾಟಿದ್ದರಾದರೂ, ಬೇಲ್ಸ್ ಹಾರುವ ಹೊತ್ತಿಗೆ ಅವರ ಬ್ಯಾಟ್ ಗಾಳಿಯಲ್ಲಿತ್ತು. ಹೀಗಾಗಿ ಹಾಲಿ ನಿಯಮಾವಳಿಗಳಂತೆ ರೋಹಿತ್ ಶರ್ಮಾರನ್ನು ಔಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿದರು.
ಆ ಮೂಲಕ ಪಾಕಿಸ್ತಾನದ ವಿರುದ್ಧ ರೋಹಿತ್ ಶರ್ಮಾ ಶತಕ ಸಿಡಿಸುವ ಮತ್ತೊಂದು ಅವಕಾಶದಿಂದ ವಂಚಿತರಾದಂತಾಗಿದೆ.
Advertisement