
ಲಂಡನ್: ಸಾಕಷ್ಟು ಏಳುಬೀಳುಗಳೊಂದಿಗೆ ಇಂಗ್ಲೆಂಡ್ ತಂಡವನ್ನು ಮಣಿಸಿದ ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೇರಿದ್ದು, ಇದೀಗ ಫೈನಲ್ ಪ್ರವೇಶಕ್ಕಾಗಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಗುರುವಾರ ಸೆಣಸಲಿದೆ.
ಲಂಡನ್ ನ ಎಡ್ಜ್ ಬ್ಯಾಸ್ಟನ್ ನಲ್ಲಿ ಇಂದು ಬಾಂಗ್ಲಾದೇಶ ಮತ್ತು ಭಾರತ ತಂಡಗಳ ಫೈನಲ್ ಪ್ರವೇಶಕ್ಕಾಗಿ ಸೆಣಸಲಿವೆ. ಅಚ್ಚರಿ ಫಲಿತಾಂಶದೊಂದಿಗೆ ಸೆಮಿ ಫೈನಲ್ ಪ್ರವೇಶಿಸಿರುವ ಮುಶ್ರಫೆ ಮೋರ್ತಾಜಾ ಪಡೆ ಬಲಿಷ್ಠ ವಿರಾಟ್ ಕೊಹ್ಲಿ ಪಡೆಯನ್ನು ಎದುರಿಸಲಿದೆ. ಇನ್ನು ಈ ಹಿಂದೆ ಬಾಂಗ್ಲಾದೇಶ ತಂಡದ ನಾಯಕ ಮುಶ್ರಫೆ ಮೋರ್ತಾಜಾ ಅಭಿಪ್ರಾಯಪಟ್ಟಿರುವಂತೆ ಭಾರತ ಮೇಲೆಯೇ ಒತ್ತಡ ಹೆಚ್ಚಿದೆ. ಟೂರ್ನಿಯಲ್ಲಿ ಬಲಿಷ್ಠ ತಂಡ ಎಂದು ಹೇಳಲಾಗುತ್ತಿರುವ ಮತ್ತು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಭಾರತವನ್ನು ಪರಿಗಣಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಇಂದಿನ ಪಂದ್ಯ ಭಾರತಕ್ಕೆ ಪ್ರಮುಖವಾಗಿದ್ದು, ಯಾವುದೇ ಕಾರಣಕ್ಕೂ ಪಂದ್ಯವನ್ನು ಕೈ ಚೆಲ್ಲಬಾರದು. ಬಾಂಗ್ಲಾದೇಶಕ್ಕೆ ಹೋಲಿಕೆ ಮಾಡಿದರೆ ಭಾರತ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಪಂದ್ಯಾವಳಿ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಮಶ್ರಫೆ ಮೊರ್ತಾಜಾ ಪಡೆಯನ್ನು 240 ರನ್‌ಗಳ ಅಂತರದಿಂದ ಸೋಲಿಸಿದ್ದ ಭಾರತ, ಸಹಜವಾಗಿ ನೆಚ್ಚಿನ ತಂಡವಾಗಿದೆ.
ಆದರೆ, ಅಚ್ಚರಿಯ ಫಲಿತಾಂಶ ನೀಡುವಲ್ಲಿ ಎತ್ತಿದ ಕೈ ಆಗಿರುವ ಬಾಂಗ್ಲಾ, ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದರೆ, ಆಸ್ಪ್ರೇಲಿಯಾ ವಿರುದ್ಧದ ಪಂದ್ಯ ರದ್ದಾದ ಕಾರಣ 1 ಅಂಕ ಗಳಿಸಿತ್ತು. ಬಳಿಕ ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್ ಗಳ ಅಂತರದಿಂದ ನ್ಯೂಜಿಲೆಂಡ್ ಅನ್ನು ಮಣಿಸುವ ಮೂಲಕ ಸೆಮಿ ಫೈನಲ್ ಗೆ ಪ್ರವೇಶ ಪಡೆದಿದೆ.
2007ರ ವಿಶ್ವಕಪ್ ನಲ್ಲಿ ಭಾರತಕ್ಕೆ ಬಾಂಗ್ಲಾ ನೀಡಿದ್ದ ಆಘಾತ ಇನ್ನೂ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಅಲ್ಲದೇ 2015ರಲ್ಲಿ ಭಾರತ ವಿರುದ್ಧ ತವರಿನಲ್ಲಿ ನಡೆದ ಸರಣಿಯನ್ನು 2-1 ಅಂತರದಿಂದ ಗೆದ್ದಿದ್ದ ಬಾಂಗ್ಲಾದೇಶವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಆದರೆ 2015ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಸೋಲೊಪ್ಪಿಕೊಂಡಿತ್ತು. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 124 ರನ್‌ಗಳ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಭಾರತ, ಲಂಕಾ ವಿರುದ್ಧದ ಹೋರಾಟವನ್ನು ಸೋತಿತ್ತು.
ಇನ್ನು ಭಾರತ ತಂಡದತ್ತ ಚಿತ್ತ ಹರಿಸಿದರೆ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾ, ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಬ್ಯಾಟಿಂಗ್ ವಿಭಾಗದದಲ್ಲಿ ತಂಡಕ್ಕೆ ಬಲ ನೀಡಲಿದ್ದಾರೆ. ಬೌಲಿಂಗ್ ನಲ್ಲಿ ಪ್ರಬಲ ಪ್ರದರ್ಶನ ವಿಲ್ಲದಿದ್ದರೂ ಲಯದಲ್ಲಿರುವ ವೇಗಿಗಳು ಯಾವುದೇ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಆಘಾತ ನೀಡಬಲ್ಲರು. ಸ್ಪಿನ್ ಬೌಲರ್ ಮತ್ತು ಆಲ್ ರೌಂಡರ್ ಗಳ ಆಯ್ಕೆ ಈ ಪಂದ್ಯದಲ್ಲಿ ನಿರ್ಣಾಯಕ ವೆನಿಸಬಹುದು.
ಪಿಚ್ ರಿಪೋರ್ಟ್
ಎಡ್ಜ್ ಬಾಸ್ಟನ್ ಪಿಚ್ ಮೋಡ ಕವಿದ ವಾತಾವರಣ ಇಲ್ಲದಿದ್ದರೆ ಬ್ಯಾಟ್ಸ್‌ಮನ್ ಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂಬುದು ಈಗಾಗಲೇ ನಡೆದ ಪಂದ್ಯಗಳಲ್ಲಿ ಸಾಬೀತಾಗಿದ್ದು, ರನ್ ಹೊಳೆ ನಿರೀಕ್ಷಿಸಲಾಗಿದೆ. ವೇಗಿಗಳಿಗೂ ಪಿಚ್‌ನಿಂದ ನೆರವು ದೊರೆಯಲಿದೆ. ಟಾಸ್ ನಿರ್ಣಾಯಕವೆನಿಸಲಿದ್ದು, ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
Advertisement