ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿಯೂ ಚಾಕಚಕ್ಯತೆಯ ಪ್ರದರ್ಶನ ನೀಡಿದ ಭಾರತದ ವನಿತೆಯರು ಅರ್ಹವಾಗಿಯೇ ಇಂಗ್ಲೆಂಡ್ ವಿರುದ್ಧ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಟಾಸ್ ಸೋತ ಇಂಗ್ಲೆಂಡ್ ತಂಡ ಮೊದಲು ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಆರಂಭಿಕ ಆಟಗಾರ್ತಿಯರಾದ ರಾತ್ ಮತ್ತು ಮಂದನಾ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ ಬರೊಬ್ಬರಿ 144 ರನ್ ಗಳ ಜೊತೆಯಾಟ ನೀಡಿದ್ದ ಈ ಜೋಡಿಯನ್ನು ನೈಟ್ ಬೇರ್ಪಡಿಸಿದರು. ಅಷ್ಟು ಹೊತ್ತಿಗಾಗಲೇ 90 ರನ್ ಸಿಡಿಸಿ ಶತಕದ ಆಂಚಿನಲ್ಲಿದ್ದರು. ಬಳಿಕ ನಾಯಕಿ ಮಿಥಾಲ್ ರಾಜ್ ಜೊತೆಗೂಡಿದ ರಾತ್ 86 ರನ್ ಗಳಿಸಿ ಹೇಜಲ್ ಗೆ ವಿಕೆಟ್ ಒಪ್ಪಿಸಿದರು.
ನಾಯಕಿ ಮಿಥಾಲಿ ರಾಜ್ ಅವರು 71 ರನ್ ಸಿಡಿಸಿ ಇನ್ನಿಂಗ್ಸ್ ನ ಅಂತಿಮ ಓವರ್ ನ ಅಂತಿಮ ಎಸೆತದಲ್ಲಿ ನೈಟ್ ಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು.
ಈ ಮೊತ್ತವನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಕೇವಲ 246 ರನ್ ಗಳಿಗೆ ಸರ್ವಪತನ ಕಂಡಿತು. ನೈಟ್ 46 ರನ್ ಮತ್ತು ವಿಲ್ಸನ್ ಅವರು 81 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರ್ತಿಯರಿಂದ ಅಂತಹ ಪ್ರಭಾವಿ ಪ್ರದರ್ಶನ ಮೂಡಿಬರಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 47.3 ಓವರ್ ಗಳಲ್ಲಿ 246 ರನ್ ಗಳಿಸಿ ಆಲ್ ಔಟ್ ಆಯಿತು. ಆ ಮೂಲಕ ಭಾರತ ತಂಡ 35 ರನ್ ಗಳ ಅಂತರದಿಂದ ಜಯಭೇರಿ ಭಾರಿಸಿತು.
ಭಾರತದ ಪರ ಬ್ಯಾಟಿಂಗ್ ನಲ್ಲಿ 90 ರನ್ ಸಿಡಿಸಿದ ಮಂದನಾ ಪಂದ್ಯ ಶ್ರೇಷ್ಟ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾದರು.