ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಮುಗ್ಗರಿಸಿದೆ.
ಎದುರಾಳಿ ತಂಡ ನೀಡಿದ 138 ರನ್ ಗಳನ್ನು ಬೆನ್ನಟ್ಟಿದ ಆರ್ ಸಿಬಿ ತಂಡ 71 ರನ್ ಗಳಿಸಿದ್ದಾಗ 10.5 ಓವರ್ ಗಳಲ್ಲಿ ಕ್ರಿಸ್ ಗೇಲ್ ವಿರಾಟ್ ಕೋಹ್ಲಿ ಎಬಿ ಡೆ ವಿಲ್ಲರ್ಸ್ ಶೇನ್ ವಾಟ್ಸನ್ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
17 ನೇ ಓವರ್ ನಲ್ಲಿ ಆರ್ ಸಿಬಿ ತಂಡ 111 ರನ್ ಗಳಿಸಿದ್ದಾಗ ಪವನ್ ನೇಗಿ ಸಹ ವಿಕೆಟ್ ಒಪ್ಪಿಸಿದರು. ಈ ಮೂಲಕ ಆರ್ ಸಿಬಿಬಿ ಗೆಲುವಿನ ಕನಸು ಬಹುತೇಕ ಭಗ್ನಗೊಂಡಿತ್ತು.
ಪಂಜಾಬ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೇ ಆರ್ ಸಿಬಿ ತಂಡ 19 ಓವರ್ ಗಳಿಗೆ 119 ರನ್ ಗಳಿಸಿ ಪಂಜಾಬ್ ತಂಡದೆದುರು ಸೋಲೊಪ್ಪಿಕೊಂಡಿತು. ಆರ್ ಸಿಬಿ ಪರ ಕ್ರಿಸ್ ಗೇಲ್ 0, ವಿರಾಟ್ ಕೊಹ್ಲಿ 6, ಎಬಿ ಡಿ ವಿಲಿಯರ್ಸ್ 10 ರನ್ ಗಳಿಸಿ ನಿರಾಶೆ ಮೂಡಿಸಿದರು.