ಫ್ರಾಂಚೈಸಿ ವಜಾ ಪ್ರಕರಣ: ಕೊಚ್ಚಿ ಟಸ್ಕರ್ಸ್ ಗೆ ಬಿಸಿಸಿಐ ನಿಂದ 800 ಕೋಟಿ ರೂ. ಪರಿಹಾರ?

2011ರಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಐಪಿಎಲ್ ಟೂರ್ನಿಯಿಂದ ಕೇರಳದ ಕೊಚ್ಚಿ ಟಸ್ಕರ್ಸ್ ತಂಡವನ್ನು ಕೈಬಿಡಲಾಗಿದ್ದ ಪ್ರಕರಣ ಸಂಬಂಧ ಬಿಸಿಸಿಐ ಇದೀಗ ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಗೆ ಬರೊಬ್ಬರಿ 800 ಕೋಟಿಗೂ ಅಧಿಕ ಪರಿಹಾರ ಧನ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮುಂಬೈ: 2011ರಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಐಪಿಎಲ್ ಟೂರ್ನಿಯಿಂದ ಕೇರಳದ ಕೊಚ್ಚಿ ಟಸ್ಕರ್ಸ್ ತಂಡವನ್ನು ಕೈಬಿಡಲಾಗಿದ್ದ ಪ್ರಕರಣ ಸಂಬಂಧ ಬಿಸಿಸಿಐ ಇದೀಗ ಕೊಚ್ಚಿ ಟಸ್ಕರ್ಸ್  ಫ್ರಾಂಚೈಸಿಗೆ ಬರೊಬ್ಬರಿ 800 ಕೋಟಿಗೂ ಅಧಿಕ ಪರಿಹಾರ ಧನ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಈ ಹಿಂದೆ 2011ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಪ್ರಾಂಚೈಸಿಯನ್ನು ವಜಾಗೊಳಿಸಿದ್ದ ಬಿಸಿಸಿಐ ಕೊಚ್ಚಿ ತಂಡದ ಮಾಲೀಕರಿಗೆ 550 ಕೋಟಿ ರೂ.ಗಳ ಪರಿಹಾರ ನೀಡಬೇಕು  ಎಂದು ನಿವೃತ್ತ ನ್ಯಾಯಮೂರ್ತಿ ಲಹೋಟಿ ನೇತೃತ್ವದ ಸಮಿತಿ ವರದಿ ನೀಡಿತ್ತು. ಅಲ್ಲದೆ 550 ಕೋಟಿ ರು. ನೀಡದಿದ್ದ ಪಕ್ಷದಲ್ಲಿ ವಾರ್ಷಿಕ ಶೇ.18 ರಷ್ಟು ಮೊತ್ತದ ದಂಡ ತೆರಬೇಕು ಎಂದೂ ವರದಿಯಲ್ಲಿ ಎಚ್ಚರಿಕೆ ನೀಡಿತ್ತು. ಆದರೆ  ಸಮಿತಿ ನಿರ್ದೇಶನದ ಹೊರತಾಗಿಯೂ ಬಿಸಿಸಿಐ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಪರಿಹಾರ ಧನವನ್ನಾಗಲಿ ಅಥವಾ ಪುನಃ ಫ್ರಾಂಚೈಸಿ ನೀಡುವ ಕಾರ್ಯವಾಗಲಿ ಮಾಡಿರಲಿಲ್ಲ. 
ಬಿಸಿಸಿಐನ ಈ ನಡೆ ಇದೀಗ ಆ ಸಂಸ್ಥೆಗೆ ದುಬಾರಿಯಾಗಿ ಪರಿಣಮಿಸಿದ್ದು, ಲಹೋಟಿ ಸಮಿತಿ ನಿರ್ದೇಶನದ ಅನ್ವಯ ಬಿಸಿಸಿಐ ವಾರ್ಷಿಕ ಶೇ.18ರ ಬಡ್ಡಿಯೊಂದಿಗೆ 550 ಕೋಟಿ ರು.ಗಳನ್ನು ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ  ನೀಡಬೇಕಿದೆ. ಇದೀಗ ಆ ಮೊತ್ತ ಬಡ್ಡಿ ಸೇರಿ ಸುಮಾರು 800 ಕೋಟಿ ರು.ಗೂ ಅಧಿಕವಾಗಿದ್ದು, ಈ ಮೊತ್ತವನ್ನು ಬಿಸಿಸಿಐ ನೀಡಲೇಬೇಕು ಎಂದು ಕೊಚ್ಚಿ ಟಸ್ಕರ್ಸ್ ಕೇರಳ ಪ್ರಾಚೈಸಿಯು ಪಟ್ಟು ಹಿಡಿದಿದ್ದು, ಇದೀಗ ಬಿಸಿಸಿಐ  ಅಡಕತ್ತರಿಗೆ ಸಿಲುಕಿದಂತಾಗಿದೆ.
ಹೀಗಾಗಿ ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಯೊಂದಿಗೆ ಬಿಸಿಸಿಐ ಸಂಧಾನಕ್ಕೆ ಮುಂದಾಗಿದ್ದು, ಮುಂಬೈನಲ್ಲಿರುವ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಲಾಗುತ್ತಿದೆ. ಅಲ್ಲದೆ ಇದೇ ವಿಚಾರವಾಗಿ ಐಪಿಎಲ್ ಆಡಳಿತ ಮಂಡಳಿಯೊಂದಿಗೂ  ಚರ್ಚೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು, ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಗಳು 850 ಕೋಟಿ ಪರಿಹಾರ ಕೇಳಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತಿದ್ದು, ಸಂಧಾನ ಮಾತುಕತೆ  ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?
ಕೊಚ್ಚಿ ಟಸ್ಕರ್ಸ್ ತಂಡ  ರೆಂಡೆವಸ್ ಸ್ಪೋಟ್ಸ್ ವಲ್ರ್ಡ್(ಆರ್‍ಎಸ್‍ಡಬ್ಲ್ಯೂ) ಕಂಪೆನಿ ಸೇರಿದಂತೆ ಒಟ್ಟಾರೆ ಐದು ಕಂಪನಿಗಳ ಸಮೂಹದಿಂದ ಹಣಕಾಸು ನೆರವು ಪಡೆದಿತ್ತು. ಆದರೆ 2011ರಲ್ಲಿ ತಂಡ ಬ್ಯಾಂಕ್ ಗ್ಯಾರಂಟಿ  ನಿಯಮಾವಳಿಯ ಉಲ್ಲಂಘನೆ ಮಾಡಿದೆ ಎಂದು ಬಿಸಿಸಿಐ ಆರೋಪಿಸಿತ್ತು. ಅಂತೆಯೇ 6 ತಿಂಗಳೊಳಗೆ ಹೊಸ ಬ್ಯಾಂಕ್  ಗ್ಯಾರಂಟಿಯನ್ನು ಒದಗಿಸುವಂತೆ ತಂಡದ ಮಾಲೀಕರಿಗೆ ಸೂಚಿಸಿತ್ತು. ಆದರೆ ನಿಗದಿತ ಸಮಯದಲ್ಲಿ ಕೊಚ್ಚಿ  ಟಸ್ಕರ್ಸ್ ತಂಡ ಹೊಸ ಬ್ಯಾಂಕ್  ಗ್ಯಾರಂಟಿ ನೀಡಲು ವಿಫಲವಾಗಿದ್ದರಿಂದ ನಿಯಾಮವಳಿಯಂತೆ ಫ್ರಾಂಚೈಸಿಯನ್ನು ಬಿಸಿಸಿಐ ವಜಾಗೊಳಿಸಿತ್ತು. ಮಾತ್ರವಲ್ಲದೇ ಕೊಚ್ಚಿ ಫ್ರಾಂಚೈಸಿ ನೀಡಿದ್ದ ರು. 156 ಕೋಟಿ ಬ್ಯಾಂಕ್  ಗ್ಯಾರಂಟಿಯನ್ನೂ ಕೂಡ ಮುಟ್ಟುಗೊಲು ಹಾಕಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com