ತಂಡದ ಎಲ್ಲ 11 ಆಟಗಾರರಿಗೂ ಪಂದ್ಯಶ್ರೇಷ್ಠ ಗೌರವ ನೀಡಿದ ಕ್ಷಣಕ್ಕೆ ಈಗ 21 ವರ್ಷ!

ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ತಂಡದ ಎಲ್ಲ 11 ಆಟಗಾರರಿಗೆ ಪಂದ್ಯಶ್ರೇಷ್ಠ ನೀಡಿದ ಅಪರೂಪದ ಕ್ಷಣ ಘಟಿಸಿ ಶನಿವಾರಕ್ಕೆ 21 ವರ್ಷಗಳು ತುಂಬಿವೆ.
ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನವಾಗಿದ್ದ ಪಾಕ್ ಆಟಗಾರರು
ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನವಾಗಿದ್ದ ಪಾಕ್ ಆಟಗಾರರು
ಲಂಡನ್: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ತಂಡದ ಎಲ್ಲ 11 ಆಟಗಾರರಿಗೆ ಪಂದ್ಯಶ್ರೇಷ್ಠ ನೀಡಿದ ಅಪರೂಪದ ಕ್ಷಣ ಘಟಿಸಿ ಶನಿವಾರಕ್ಕೆ 21 ವರ್ಷಗಳು ತುಂಬಿವೆ.
ಕ್ರಿಕೆಟ್ ಕ್ರೀಡೆಯೇ ಹಾಗೆ..ಇಲ್ಲಿ ಅಸಾಧ್ಯವಾದುದು ಸಾಧ್ಯವಾಗುತ್ತದೆ..ಸಾಧ್ಯ ಎಂಬ ಪರಿಸ್ಥಿತಿ ಕೂಡ ಅಸಾಧ್ಯವಾಗಿ ಬಿಡುತ್ತದೆ. ಬೇಲ್ಸ್ ಬೀಳದೆ ವಿಕೆಟ್ ಎಗರಿ ಆಸ್ಟ್ರೇಲಿಯಾದ ಬ್ಯಾಟ್ಸಮನ್ ವಿಚಿತ್ರವಾಗಿ ಔಟ್ ಆಗಿದ್ದ ಸುದ್ದಿಯನ್ನು ನಾವು ಇತ್ತೀಚೆಗೆ ಓದಿದ್ದೇವೆ. ಇಂಥಹ ಹಲವು ಘಟನೆಗಳು ಕ್ರಿಕೆಟ್ ರಂಗದಲ್ಲಿ ಸಾಮಾನ್ಯ. ಇದೇ ರೀತಿ ಮತ್ತೊಂದು ಅಪರೂಪದ ಘಟನೆಯೊಂದು ಕ್ರಿಕೆಟ್ ಇತಿಹಾಸದಲ್ಲಿ ಗತಿಸಿದ್ದು, ಆ ಅಪರೂಪದ ಕ್ಷಣಕ್ಕೆ ಇಂದಿಗೆ ಭರ್ತಿ 21 ವರ್ಷ..
ಹೌದು...ಒಂದು ಪಂದ್ಯದಲ್ಲಿ ಎಲ್ಲ 11 ಮಂದಿಯನ್ನೂ ಪಂದ್ಯಶ್ರೇಷ್ಠ ಗೌರವಕ್ಕೆ ಆಯ್ಕೆ ಮಾಡಿದ ಕ್ಷಣಕ್ಕೆ ಇಂದಿಗೆ 21 ವರ್ಷ. 1996ರ ಸೆಪ್ಟೆಂಬರ್ 1ರಂದು ಈ ಸ್ವಾರಸ್ಯಕರ ಘಟನೆ ನಡೆದಿದ್ದು, ಇಂಗ್ಲೆಂಡ್ ಟ್ರೆಂಟ್ ಬ್ರಿಡ್ಜ್ ಮೈದಾನ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ತಂಡದ ಪರಿಶ್ರಮವನ್ನು ಪರಿಗಣಿಸಿ ಮ್ಯಾಚ್ ರೆಫ್ರಿ, ಶೂನ್ಯಕ್ಕೆ ಔಟ್ ಆದ ಆಟಗಾರನೂ ಸೇರಿದಂತೆ ವಿಜೇತ ತಂಡದ ಎಲ್ಲರನ್ನೂ ಮ್ಯಾನ್ ಆಫ್ ದಿ ಮ್ಯಾಚ್ ಎಂದು ಘೋಷಿಸಿದ್ದರು. ಈ ಅಪರೂಪದ ಗೌರವಕ್ಕೆ ಪಾಕಿಸ್ತಾನ ತಂಡದ 11 ಆಟಗಾರರು ಪಾತ್ರರಾಗಿದ್ದರು.
1996ರ ಸೆಪ್ಟೆಂಬರ್ 1ರಂದು ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಟೆಕ್ಸೆಕೊ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 246 ರನ್ ಗಳಿಸಿತು. ಇಂಗ್ಲೆಂಡ್ ತಂಡದ ಪರ ನಿಕ್ ನೈಟ್ ಜೀವನಶ್ರೇಷ್ಠ 125 ರಗ್ ಗಳಿಸಿದ್ದರು. ಆರಂಭಿಕನಾಗಿ ಆಗಮಿಸಿದ್ದ ನೈಟ್, ನಾಟೌಟ್ ಬ್ಯಾಟ್ಸ್‌ಮನ್ ಆಗಿ ಮರಳಿದರು. ಏಕದಿನ ಪಂದ್ಯದಲ್ಲಿ ಇಡೀ ಇನಿಂಗ್ಸ್ ಆಡಿದ ವಿಶ್ವದ ಮೂರನೇ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು. ನಿಕ್ ನೈಟ್ ಜೀವನಶ್ರೇಷ್ಠ ಸಾಧನೆ ಹೊರತಾಗಿಯೂ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿದಿರಲಿಲ್ಲ. ಕಾರಣ ಆ ಪಂದ್ಯವನ್ನು ಇಂಗ್ಲೆಂಡ್ ತಂಡ ಸೋತಿತ್ತು.
ಗೆದ್ದ ತಂಡದ ಆಟಗಾರನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡುವುದು ಅಂದಿನ ವಾಡಿಕೆಯಾಗಿತ್ತು. ಆದರೆ ಪಾಕಿಸ್ತಾನ ತಂಡದಲ್ಲಿನ ಓರ್ವ ಆಟಗಾರರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡುವುದು ರೆಫರಿಗೆ ಕಷ್ಟಸಾಧ್ಯವಾಗಿತ್ತು. ಕಾರಣ ಇಂಗ್ಲೆಂಡ್ ತಂಡ ನೀಡಿದ್ದ ಗುರಿಗೆ ಬದಲಾಗಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಆಗ ಅದ್ಭುತ ಸ್ಪೆಲ್ ನಡೆಸಿದ್ದ ಇಂಗ್ಲೆಂಡ್ ತಂಡದ ಆಡಂ ಹೊಲಿಯಾಕ್ 45 ರನ್‌  ಗೆ ನಾಲ್ಕು ವಿಕೆಟ್ ಕಬಳಿಸಿ, ಪ್ರವಾಸಿ ತಂಡದ ಕುಸಿತಕ್ಕೆ ಕಾರಣರಾಗಿದ್ದರು. ಆವರ ಈ ಸಾಧನೆ ಕೂಡಾ ರೆಫರಿಗಳಿಗೆ ಶ್ರೇಷ್ಠ ಸಾಧನೆ ಎನಿಸಲಿಲ್ಲ.
ಪಾಕಿಸ್ತಾನ ತಂಡದ ಪರವಾಗಿ ವಾಸಿಂ ಅಕ್ರಂ ಮೂರು ವಿಕೆಟ್ ಪಡೆದರೆ, ಚೊಚ್ಚಲ ಪಂದ್ಯವಾಡಿದ ಶಾಹಿದ್ ನಝೀರ್ ಕೂಡ ಗಮನಾರ್ಹ ಪ್ರದರ್ಶನ ನೀಡಿದರು. ಬ್ಯಾಟಿಂಗ್‌ ನಲ್ಲಿ ಸಯೀದ್ ಅನ್ವರ್ ಹಾಗೂ ಇಜಾಝ್ ಅಹ್ಮದ್ ಅರ್ಧಶತಕ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ ಎರಡು ಎಸೆತ ಇರುವಂತೆ ಆ ಪಂದ್ಯವನ್ನು ಗೆದ್ದುಕೊಂಡಿತ್ತು. ಪಾಕಿಸ್ತಾನದ ಐದು ಮಂದಿ ಆಟಗಾರರು 29 ರಿಂದ 61 ರನ್ ಗಳಿಸಿದ್ದರು. ಆದ್ದರಿಂದ ಪಂದ್ಯಶ್ರೇಷ್ಠರ ಆಯ್ಕೆ ಹೇಗೆ ಎಂಬ ಗೊಂದಲ ಮ್ಯಾಚ್ ರೆಫ್ರಿ ಟಾಮ್ ಗ್ರಾವೆನಿಯವರನ್ನು ಕಾಡಿತ್ತು.
ಕೊನೆಗೂ ಅಂತಿಮ ಆಯ್ಕೆ ಮಾಡಲಾಗದ ಮ್ಯಾಚ್ ರೆಫ್ರಿ ಟಾಮ್ ಗ್ರಾವೆನಿ ಪಂದ್ಯದ ಜಯಕ್ಕೆ ಇಡೀ ತಂಡದ ಸಂಘಟಿತ ಆಟವೇ ಕಾರಣ ಎಂಬ ನಿರ್ಧಾರಕ್ಕೆ ಬಂದು ವಿಜೇತ ತಂಡದ ಎಲ್ಲ ಹನ್ನೊಂದು ಮಂದಿ ಆಟಗಾರರನ್ನೂ ಪಂದ್ಯಶ್ರೇಷ್ಠರೆಂದು ಘೋಷಿಸಿದರು!
ಕ್ರಿಕೆಟ್ ನಲ್ಲಿ ತಂಡದ ಎಲ್ಲ ಆಟಗಾರರಿಗೂ ಪಂದ್ಯ ಶ್ರೇಷ್ಠ ನೀಡಿದ 2 ಕ್ಷಣಗಳು ದಾಖಲಾಗಿದ್ದು, ಏಕದಿನ ಕ್ರಿಕೆಟ್ ನಲ್ಲಿ ಪಾಕಿಸ್ತಾನಕ್ಕೆ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂತಹ ಗೌರವಕ್ಕೆ ಭಾಜನವಾಗಿತ್ತು. 1999ರ ಜನವರಿ 15ರಂದ 18ರವರೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಚ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 351 ರನ್ ಗಳ ಅಂತರದಲ್ಲಿ ಜಯ ಸಾಧಿಸಿತ್ತು. ಅಂದೂ ಕೂಡ ಪಂದ್ಯ ರೆಫರಿ ದ.ಆಫ್ರಿಕಾದ ಎಲ್ಲ 11 ಆಟಗಾರರನ್ನು ಪಂದ್ಯಶ್ರೇಷ್ಠ ಗೌರವಕ್ಕೆ ಆಯ್ಕೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com