ಚಾಂಪಿಯನ್ಸ್ ಟ್ರೋಫಿ ಓಕೆ, ಟಿ20 ಯಾಕೆ: ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ವಿರೋಧ

2021 ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಿಸಲು ನಿರ್ಧರಿಸಿರುವ ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ತೀವ್ರ ವಿರೋಧ ವ್ಯಕ್ತ ಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: 2021 ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಿಸಲು ನಿರ್ಧರಿಸಿರುವ ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ತೀವ್ರ ವಿರೋಧ ವ್ಯಕ್ತ ಪಡಿಸಿದೆ.
ಈಗಾಗಲೇ 2020ರಲ್ಲಿ ವಿಶ್ವ ಟಿ20 ಚಾಂಪಿಯನ್ ಷಿಪ್ ಆಯೋಜನೆಯಾಗಿದ್ದು, ಮತ್ತೆ 2021ರಲ್ಲಿ ಚಾಂಪಿಯನ್ಸ್ ಟ್ರೋಫಿ ಸರಣಿಯನ್ನೂ ಕೂಡ ಟಿ20 ಮಾದರಿಯಲ್ಲಿ ಆಡಿಸುವ ಐಸಿಸಿ ನಿರ್ಧಾರ ಸರಿಯಲ್ಲ ಎಂದು ಬಿಸಿಸಿಐ ಹೇಳಿದೆ. ಅಲ್ಲದೆ ಐಸಿಸಿ ಈ ನಿರ್ಧಾರಕ್ಕೆ ತಾನು ಸಹಿ ಹಾಕುವುದಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.
ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಟಿ20 ಮಾದರಿಯಲ್ಲಿ ಆಡಿಸಲು ಐಸಿಸಿ ನಿರ್ಧರಿಸಿದೆ ಯಾದರೂ, ಭಾರತವನ್ನು ಹೊರತು ಪಡಿಸಿದರೆ ಐಸಿಸಿಯ ಸದಸ್ಯ ರಾಷ್ಟ್ರಗಳು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ತನ್ನ ನಿರ್ಧಾರಕ್ಕೆ ಸಂಬಂಧಿಸಿದಂತೆ ಐಸಿಸಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಇತರೆ ಸದಸ್ಯ ರಾಷ್ಟ್ರಗಳ ನಿರ್ಧಾರ ಮೇಲೆ ತನ್ನ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
2019ರ ವಿಶ್ವಕಪ್ ಕ್ರಿಕೆಟ್ ಬದಲಾದ ವೇಳಾಪಟ್ಟಿ ಪ್ರಕಟ
ಇನ್ನು 2019ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಬದಲಾದ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದ್ದು, ಮೇ 30ರಿಂದ ಬಹು ನಿರೀಕ್ಷಿತ ಟೂರ್ನಿ ಆರಂಭಗೊಳ್ಳುತ್ತಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಟೀಂ ಇಂಡಿಯಾ ಅಭಿಯಾನ ಜೂನ್ 2ರಿಂದ ಆರಂಭವಾಗ ಬೇಕಿತ್ತು. ಆದರೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ಗಾಗಿ ಟೀಂ ಇಂಡಿಯಾದ ವೇಳಾ ಪಟ್ಟಿ ಬದಲಾಗಿದೆ. ಐಪಿಎಲ್ ನಲ್ಲಿ ಆಡಿರುವ ಟೀಂ ಇಂಡಿಯಾ ಆಟಗಾರರಿಗೆ ಕನಿಷ್ಠ 15 ದಿನಗಳ ವಿಶ್ರಾಂತಿ ಅವಶ್ಯಕತೆ ಇದ್ದು ಈ ಹಿನ್ನೆಲೆಯಲ್ಲಿ ಜೂನ್ 2ರ ಬದಲಿಗೆ ಜೂನ್ 5ರಂದು ಭಾರತ ಮೊದಲ ಪಂದ್ಯ ಆಡಲಿದೆ. 
ಒಂದು ಟೂರ್ನಿಯಿಂದ ಮತ್ತೊಂದು ಟೂರ್ನಿಗೆ ಕನಿಷ್ಠ 15 ದಿನ ವಿಶ್ರಾಂತಿ ನೀಡಬೇಕು ಎಂಬ ಲೋಧಾ ಸಮಿತಿ ಶಿಫಾರಸ್ಸು ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ತೀರ್ಮಾನಕ್ಕೆ ಬಂದಿದೆ. 2019ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಮೇ 30ರಿಂದ ಪ್ರಾರಂಭಗೊಳ್ಳಲಿದ್ದು ಈ ಬಾರಿ ಇಂಗ್ಲೆಂಡ್ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಬಾರಿ ಹತ್ತು ತಂಡಗಳು ಟೂರ್ನಿಯಲ್ಲಿ ಆಡಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com