ಲಂಡನ್: ಕ್ರಿಕೆಟ್ ಮೇಲೆ ತಮಗಿದ್ದ ಅಪಾರ ಪ್ರೇಮವೇ ಮೈದಾನದ ಹೊರಗಿನ ಸಮಸ್ಯೆಗಳನ್ನು ಎದುರಿಸಲು ನೆರವಾಯಿತು ಎಂದು ಭಾರತ ತಂಡದ ವೇಗಿ ಮಹಮದ್ ಶಮಿ ಹೇಳಿದ್ದಾರೆ.
ತಮ್ಮ ಪತ್ನಿ ಹಸೀನ್ ಜಹಾನ್ ರೊಂದಿಗಿನ ವಿರಸ, ವಿವಾದದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿರುವ ವೇಗಿ ಶಮಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಮೊದಲ ದಿನದಾಟದಲ್ಲೇ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಗಮನಾರ್ಹ ಕಮ್ ಬ್ಯಾಕ್ ಮಾಡಿದ್ದಾರೆ.
ಇನ್ನು ತಮ್ಮ ಪ್ರದರ್ಶನದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಮಿ, ತುಂಬಾ ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದೆ. ಆ ಬಳಿಕ ತವರಿಗೆ ಬಂದಾಗ ಒಂದಷ್ಟು ಮೈದಾನದ ಹೊರಗಿನ ಸಮಸ್ಯೆಗಳು ನನ್ನನ್ನು ಕಾಡತೊಡಗಿದವು. ಆದರೆ ಇವಾವುದಕ್ಕೂ ನಾನು ಜಗ್ಗಲಿಲ್ಲ. ನನ್ನ ಇಷ್ಟದ ಕೆಲಸವನ್ನು ಮುಂದುವರೆಸಿದ್ದೆ ಎಂದು ಶಮಿ ಹೇಳಿದ್ದಾರೆ.
ಕ್ರಿಕೆಟ್ ಮೇಲಿನ ಪ್ರೀತಿಯಿಂದಾಗಿ ನಾನು ಎಂದಿಗೂ ಒಂಟಿಯಲ್ಲ ಎನ್ನುವ ಭಾವನೆ ಮೂಡಿಸಿತು. ನನ್ನ ಕೆಲಸವನ್ನು ನಾನು ಮುಂದುವರೆಸಿದೆ. ನಾನು ಯಾವುದೇ ರೀತಿಯ ಸಮಸ್ಯೆ ಎದುರಿಸಿದರೂ ಅದರಿಂದ ನನ್ನ ಪ್ರೀತಿಯ ಕ್ರಿಕೆಟ್ ಗೆ ತೊಂದರೆಯಾಗದಂತೆ ನೋಡಿಕೊಂಡೆ. ಜೀವನದಲ್ಲಿ ಏಳು-ಬೀಳು ಸಹಜ. ಆದರೆ ನನ್ನ ದೇಶಕ್ಕಾಗಿ ಆಡುವಾಗ ಖಂಡಿತಾ ನನ್ನ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ ಉತ್ತಮ ಪ್ರದರ್ಶನ ನೀಡಬೇಕು. ಕೌಟುಂಬಿಕ ಸಮಸ್ಯೆಗಳಿಗಿಂತ ನನ್ನ ಮೊದಲ ಆದ್ಯತೆ ಕ್ರಿಕೆಟ್ ಆಗಿತ್ತು. ಇದೀಗ ಅದರ ಫಲಿತಾಂಶ ದೊರೆತಿದೆ ಎಂದು ತಮ್ಮ ಪ್ರದರ್ಶನದ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ.
ಇನ್ನು ಮೊದಲ ದಿನದಾಟದ ಬಗ್ಗೆ ಮಾತನಾಡಿದ ಶಮಿ, ಮೊದಲ ದಿನದಾಟದಂದು ತಂಡದ ಪ್ರದರ್ಶನ ಉತ್ತಮವಾಗಿತ್ತು. ತಂಡದ ವೇಗಿಗಳು ಇಂಗ್ಲೆಂಡ್ ದಾಂಡಿಗರ ರನ್ ಓಟಕ್ಕೆ ಬ್ರೇಕ್ ಹಾಕಿದರು. ಅಂತೆಯೇ ಅಶ್ವಿನ್ ಪ್ರದರ್ಶನ ಕೂಡ ಅತ್ಯುತ್ತಮವಾಗಿತ್ತು. ಮುಖ್ಯವಾಗಿ ಪಿಚ್ ವರ್ತನೆಯನ್ನು ನಾವು ಮೊದಲೇ ಕಂಡು ಹಿಡಿಯಲು ಸಾಧ್ಯವಾಗಿದ್ದು ನಾವು ಮೇಲುಗೈ ಸಾಧಿಸಲು ನೆರವಾಯಿತು ಎಂದು ಶಮಿ ಹೇಳಿದ್ದಾರೆ.
ನಿನ್ನೆ ಆರಂಭವಾದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ ಮೇಲುಗೈ ಸಾಧಿಸಿದ್ದು. ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿದೆ. ಭಾರತದ ಪರ ಅಶ್ವಿನ್ 4 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿದರೆ, ಶಮಿ 2 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದ್ದಾರೆ. ಇನ್ನು ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ತಲಾ 1 ವಿಕೆಟ್ ಪಡೆದಿದ್ದಾರೆ.