ಮೆಲ್ಬರ್ನ್: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಕನ್ನಡಿಗ ಮಾಯಾಂಕ್ ಅಗರವಾಲ್ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದು ಮೊದಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಇನ್ನು ಮಾಯಾಂಕ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಕೆರಿ ಓ ಕೀಫೆ ಜನಾಂಗೀಯ ನಿಂದನೆ ಮಾಡಿದ್ದು ಇದಕ್ಕೆ ಟ್ವೀಟರಿಗರು ಕಿಡಿಕಾರಿದ್ದಾರೆ.
ಮಾಯಾಂಕ್ ಅಗರವಾಲ್ ದೇಸಿ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿರೋದು ಯಾವುದೋ ಕ್ಯಾಂಟಿನ್ ಸಿಬ್ಬಂದಿ ಅಥವಾ ಹೊಟೇಲ್ ವೈಟರ್ ವಿರುದ್ಧ ಎಂದು ಅವಮಾನ ಮಾಡಿದ್ದರು. ಇದಕ್ಕೆ ಟ್ವೀಟರಿಗರು ಆಕ್ರೋಶಗೊಂಡಿದ್ದು ಕೇಫೆಗೆ ಮಂಗಳಾರತಿ ಮಾಡಿದ್ದಾರೆ.
ಆಸ್ಟ್ರೇಲಿಯಾ ಮಾಜಿ ಕ್ರಿಕೆಟರುಗಳಾದ ಶೇನ್ ವಾರ್ನ್ ಮತ್ತು ಮಾರ್ಕ್ ವ್ಹಾ ಅವರೊಂದಿಗೆ ಫೋಕ್ಸ್ ಸ್ಪೋರ್ಟ್ ಚಾನೆಲ್ ಗೆ ಕಮೆಂಟ್ರಿ ನೀಡುತ್ತಿದ್ದ ಕೆರಿ ಓ ಕೀಫೆ ಈ ರೀತಿಯ ಅಸಂಬದ್ಧ ಹೇಳಿಕೆಯನ್ನು ನೀಡಿದ್ದರು.
ಮಾಯಾಂಕ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಅವರ ಫಸ್ಟ್ ಕ್ಲಾಸ್ ಕೆರಿಯರ್ ಸಾಧನೆಯನ್ನು ತೋರಿಸಲಾಗಿತ್ತು. ಅದರಲ್ಲಿ ಇತ್ತೀಚೆಗೆ ನಡೆದ ರಣಜಿ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ಅಂಕಿ ಅಂಶಗಳನ್ನು ನೋಡಿ ಕಮೆಂಟ್ರಿ ನೀಡುತ್ತಿದ್ದಾಗ ಮಾಯಾಂಕ್ ರನ್ನು ನಿಂದಿಸಿದ್ದರು.