ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಅವರ ದಾಳಿಗೆ ತತ್ತರಿಸಿದ ಟಿಮ್ ಪೈನೆ ಪಡೆ ಕೇವಲ 151 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬರೊಬ್ಬರಿ 292 ರನ್ ಗಳ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ. ನಿನ್ನೆ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ಭಾರತೀಯ ಬೌಲರ್ ಗಳ ದಾಳಿಗೆ ಅಕ್ಷರಶಃ ನಲುಗಿ ಹೋಯಿತು. ತಂಡದ ಮೊತ್ತ ಕೇವಲ 24 ರನ್ ಗಳಾಗಿದ್ದಾಗಲೇ ಇಶಾಂತ್ ಶರ್ಮಾ ಮೊದಲ ಆಘಾತ ನೀಡಿದರು. ಕೇವಲ 8 ರನ್ ಗಳಿಸಿದ್ದ ಫಿಂಚ್ ಮಯಾಂಕ್ ಅಗರ್ವಾಲ್ ಗೆ ಕ್ಯಾಚಿತ್ತು ಹೊರ ನಡೆದರು. ಆ ಬಳಿಕ ಮತ್ತೋರ್ವ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ರನ್ನು ಬುಮ್ರಾ ಪೆವಿಲೆಯನ್ ಗೆ ಅಟ್ಟಿದರು. 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉಸ್ಮಾನ್ ಖವಾಜರನ್ನು ರವೀಂದ್ರ ಜಡೇಜಾ ಔಟ್ ಮಾಡಿದರೆ, ಶಾನ್ ಮಾರ್ಶ್ ರನ್ನು ಬುಮ್ರಾ ಎಲ್ ಬಿ ಬಲೆಗೆ ಕೆಡವಿದರು.