ಸಂಗ್ರಹ ಚಿತ್ರ
ಕ್ರಿಕೆಟ್
ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದ ಯೂಸುಫ್ ಪಠಾಣ್ ಗೆ 5 ತಿಂಗಳ ನಿಷೇಧ ಹೇರಿದ ಬಿಸಿಸಿಐ!
ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಯೂಸುಫ್ ಪಠಾಣ್ ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದು, ಪಠಾಣ್ ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 5 ತಿಂಗಳ ನಿಷೇಧ ಹೇರಿದೆ.
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಯೂಸುಫ್ ಪಠಾಣ್ ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದು, ಪಠಾಣ್ ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 5 ತಿಂಗಳ ನಿಷೇಧ ಹೇರಿದೆ.
ಕಳೆದ ವರ್ಷವಷ್ಟೇ ಬಿಸಿಸಿಐ ಕ್ರಿಕೆಟಿಗರಿಗೂ ಡೋಪಿಂಗ್ ಟೆಸ್ಟ್ ಕಡ್ಡಾಯಗೊಳಿಸಿತ್ತು. ಅದರಂತೆ ಕಳೆದ ಮಾರ್ಚ್ ತಿಂಗಳನಿಂದ ಆಟಗಾರರಿಗೆ ಡೋಪಿಂಗ್ ಟೆಸ್ಟ್ ನಡೆಸಲಾಗುತ್ತಿದ್ದು, ಇತ್ತೀಚೆಗೆ ಇತರೆ ಆಟಗಾರರಂತೆಯೇ ಯೂಸುಫ್ ಪಠಾಣ್ ಅವರನ್ನೂ ಡೋಪಿಂಗ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಅದರಂತೆ ಪಠಾಣ್ ಅವರ ರಕ್ತ ಮತ್ತು ಮೂತ್ರದ ಮಾದರಿಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದರು. ಅದರಂತೆ ಇದೀಗ ಅವರ ವೈದ್ಯಕೀಯ ವರದಿ ಲಭ್ಯವಾಗಿದ್ದು ಯೂಸುಫ್ ಪಠಾಣ್ ದೇಹದಲ್ಲಿ ನಿಷೇಧಿತ ಮಾದಕ ವಸ್ತುವಿನ ಅಂಶ ಕಂಡುಬಂದಿದೆ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.
ಇದೇ ಕಾರಣಕ್ಕೆ ಯೂಸುಫ್ ಪಠಾಣ್ ರನ್ನು ಕ್ರಿಕೆಟ್ ನಿಂದ 5 ತಿಂಗಳ ಕಾಲ ನಿಷೇಧಕ್ಕೊಳಪಡಿಸಲಾಗಿದೆ. ಯೂಸುಫ್ ಪಠಾಣ್ ಬಿಸಿಸಿಐ ಆ್ಯಂಟಿ ಡೋಪಿಂಗ್ ನಿಯಮ 2.1ಅನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಯೂಸುಫ್ ಪಠಾಣ್ ಅವರ ರಕ್ತ ಮತ್ತು ಮೂತ್ರದಲ್ಲಿ ಟೆರ್ಬುಟಲೈನ್ ಎಂಬ ನಿಷೇಧಿತ ರಾಸಾಯನಿಕ ಅಂಶ ಪತ್ತೆಯಾಗಿದೆ ಎಂದು ವಾಡಾ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಟೆರ್ಬುಟಲೈನ್ ರಾಸಾಯನಿಕವನ್ನು ಈಗಾಗಲೇ ನಾಡಾ ಮತ್ತು ವಾಡಾ ಸಂಸ್ಥೆಗಳು ನಿಷೇಧಿತ ಅಂಶಗಳ ಪಟ್ಟಿಗೆ ಸೇರಿಸಿವೆ.
ಇನ್ನು ಈ ಸಂಬಂಧ ಬಿಸಿಸಿಐಗೆ ಕ್ರಿಕೆಟಿಗ ಯೂಸುಫ್ ಪಠಾಣ್ ಸ್ಪಷ್ಟನೆ ಕೂಡ ನೀಡಿದ್ದು, ಈ ಹಿಂದೆ ಆರೋಗ್ಯ ಸಂಬಂಧಿ ಕಾರಣಗಳಿಂದಾಗಿ ತಾವು ಕೆಲ ಔಷಧಿಗಳನ್ನು ತೆಗೆದುಕೊಂಡಿದ್ದೆ. ಆದರೆ ಅದರಲ್ಲಿ ಒಂದು ಔಷಧಿ ವೈದ್ಯರು ಸೂಚಿಸಿದ್ದ ಸಂಸ್ಥೆಯ ಔಷಧಿ ದೊರೆತಿರಲಿಲ್ಲ. ಆರೋಗ್ಯದ ವಿಚಾರವಾಗಿ ಅನಿವಾರ್ಯವಾಗಿ ಬೇರೊಂದು ಸಂಸ್ಥೆಯ ಔಷಧಿ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ತಾನು ಉದ್ದೇಶಪೂರ್ವಕವಾಗಿ ಈ ಔಷಧಿ ಸೇವನೆ ಮಾಡಿಲ್ಲ ಎಂದು ಹೇಳಿದ್ದಾರೆ. ಯೂಸುಫ್ ಹೇಳಿಕೆಯನ್ನು ಬಿಸಿಸಿಐ ಸ್ವೀಕರಿಸಿದೆ.
ಬಿಸಿಸಿಐ ಕಳೆದ ಆಗಸ್ಟ್ 15ರಂದು ಯೂಸುಫ್ ಮೇಲೆ ನಿಷೇಧ ಹೇರಿದ್ದು, ಇದೀಗ 5 ತಿಂಗಳ ನಿಷೇಧ ಖಾಯಂ ಮಾಡಿರುವುದರಿಂದ ಇದೇ ಜನವರಿ 14 2018ರ ಮಧ್ಯರಾತ್ರಿ ಅವರ ಅಮಾನತು ಶಿಕ್ಷೆ ಪೂರ್ಣವಾಗಲಿದೆ. ಹೀಗಾಗಿ ಯೂಸುಫ್ ಮುಂಬರುವ ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.


