ಅಲ್ಪ ಗುರಿಯಿದ್ದರೂ ಭಾರತದ ಬಲಾಢ್ಯ ಬ್ಯಾಟಿಂಗ್ ಪಡೆ ಎಡವಿದೆಲ್ಲಿ?

ಸುಲಭವಾಗಿ ಗೆಲ್ಲಬಹುದಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸ್ವಯಂಕೃತ ಅಪರಾಧದಿಂದ ಭಾರತ ಕೈ ಚೆಲ್ಲಿದ್ದು, ಸರಣಿಯಲ್ಲಿ ಆಫ್ರಿಕನ್ನರಿಗೆ 1-0 ಮುನ್ನಡೆ ಬಿಟ್ಟುಕೊಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೇಪ್ ಟೌನ್: ಸುಲಭವಾಗಿ ಗೆಲ್ಲಬಹುದಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸ್ವಯಂಕೃತ ಅಪರಾಧದಿಂದ ಭಾರತ ಕೈ ಚೆಲ್ಲಿದ್ದು, ಸರಣಿಯಲ್ಲಿ ಆಫ್ರಿಕನ್ನರಿಗೆ 1-0 ಮುನ್ನಡೆ ಬಿಟ್ಟುಕೊಟ್ಟಿದೆ. ಹಾಗಿದ್ದರೆ ಭಾರತ  ತಂಡ ಎಡವಿದೆಲ್ಲಿ.. ಕೊಹ್ಲಿ ಯೋಜನೆ ಎಲ್ಲಿ ಕೈ ಕೊಟ್ಟಿತು..
ಅಜಿಂಕ್ಯಾ ರಹಾನೆ ಬದಲಿಗೆ ರೋಹಿತ್ ಗೆ ಮಣೆ
ನಾಯಕ ಕೊಹ್ಲಿ ಮಾಡಿದ ಮೊದಲ ಯಡವಟ್ಟು ತಂಡದ ಆಯ್ಕೆ... ಹೌದು.. ಉಪ ನಾಯಕ ಅಜಿಂಕ್ಯಾ ರಹಾನೆಯನ್ನು ತಂಡದಿಂದ ಕೈ ಬಿಟ್ಟು, ರೋಹಿತ್ ಶರ್ಮಾಗೆ ಕೊಹ್ಲಿ ಮಣೆ ಹಾಕಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಅದರಲ್ಲೂ ಪ್ರಮುಖವಾಗಿ ಆಫ್ರಿಕಾದಂತಹ ಬೌನ್ಸೀ ಟ್ರ್ಯಾಕ್ ನಲ್ಲಿ ರಹಾನೆಯಂತಹ ಬ್ಯಾಟ್ಸಮನ್ ಗಳ ಅಗತ್ಯತೆಯನ್ನು ಕೊಹ್ಲಿ ಗಣನೆಗೆ ತೆಗೆದುಕೊಳ್ಳದೇ ಕೇವಲ ಪ್ರಸ್ತುತ ಏಕದಿನ ಮಾದರಿಯಲ್ಲಿ ಫಾರ್ಮ್ ನಲ್ಲಿದ್ದಾರೆ ಎಂಬ ಒಂದೇ ಕಾರಣಕ್ಕೆ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದ್ದರು. ಆದರೆ ಅದು ತಪ್ಪು ನಿರ್ಧಾರ ಎಂದು ಆಫ್ರಿಕಾ ವಿರುದ್ಧ ಎರಡೂ ಇನ್ನಿಂಗ್ಸ್ ಗಳಲ್ಲೂ ರೋಹಿತ್ ಶರ್ಮಾ ಸಾಬೀತು ಮಾಡಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ 11 ರನ್ ಗಳಿಸಿದ್ದರೆ. 2ನೇ ಇನ್ನಿಂಗ್ಸ್ ನಲ್ಲಿ 10 ರನ್ ಗಳಿಸಿ ಔಟ್ ಆಗಿದ್ದರು.
ಆರಂಭಿಕ ಬ್ಯಾಟ್ಸಮನ್ ಗಳ ವೈಫಲ್ಯ
ಇನ್ನು ಕೇಪ್ ಟೌನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಬಲಾಢ್ಯ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಭಾರತ ತಂಡ ಅಕ್ಷರಶಃ ವೈಫಲ್ಯಕಂಡಿತ್ತು. ಆರಂಭಿಕರಾದ ಮುರಳಿ ವಿಜಯ್, ಶಿಖರ್ ಧವನ್, ಪೂಜಾರ, ವಿರಾಟ್ ಕೊಹ್ಲಿ ಮತ್ತು ಧವನ್ ತಮ್ಮ ಜವಾಬ್ದಾರಿ ಮರೆತಂತೆ ಬ್ಯಾಟ್ ಬೀಸಿದ್ದರು. ಅಲ್ಲದೆ ಆರಂಭಿಕರಾಗಿ ಮುರಳಿ ವಿಜಯ್ ರನ್ನು ಕಣಕ್ಕಿಳಿಸಿದ್ದೂ ಕೂಡ ಅಚ್ಚರಿಯಾಗಿತ್ತು. ಈ ಹಿಂದೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಯಶಸ್ವಿಯಾಗಿತ್ತು. ಇದೇ ಜೋಡಿಯನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದಿತ್ತು. ಇನ್ನು ಧವನ್ ಫುಟ್ ವರ್ಕ್ ಕೂಡ ಪ್ರಶ್ನೆ ಮಾಡುವಂತಿತ್ತು, ಧವನ್ ಫಾರ್ಮ್ ಗಾಗಿ ಪರದಾಡುವ ಆಟಗಾರರಂತೆ ಬ್ಯಾಟ್ ಬೀಸುತಿದ್ದರು.
ಪಾಂಡ್ಯಾ ಬದಲಿಗೆ ಅಶ್ವಿನ್ ಗೆ ಬಡ್ತಿ ನೀಡಿದ್ದೇಕೆ
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಬದಲಿಗೆ ಸ್ಪಿನ್ನರ್ ಆರ್ ಅಶ್ವಿನ್ ಗೆ ಕೊಹ್ಲಿ ಬಡ್ತಿ ನೀಡಿ ಐದನೇ ವಿಕೆಟ್ ನಲ್ಲಾಡುವಂತೆ ಮಾಡಿದ್ದರು. ಈ ಬದಲಾವಣೆ ಕೈಕೊಟ್ಟಿತಾದರೂ ಪಾಂಡ್ಯಾ ಮಾತ್ರ ತಮ್ಮ ಜವಾಬ್ದಾರಿ ಮರೆಯದೇ ಮೊದಲ ಇನ್ನಿಂಗ್ಸ್ ನಲ್ಲಿ 93 ರನ್ ಸಿಡಿಸಿ ಭಾರತದ ಮಾನ ಕಾಪಾಡಿದ್ದರು. ಅವರ ಒಂದು ಇನ್ನಿಂಗ್ಸ್ ಮತ್ತು ಭಾರತೀಯ ಬೌಲರ್ ಗಳ ಶಿಸ್ತುಬದ್ಧ ದಾಳಿಯಿಂದಾಗಿ ಮತ್ತೆ ಭಾರತ ತಂಡ ಪಂದ್ಯ ಗೆಲ್ಲುವ ಅವಕಾಶ ಪಡೆಯಿತಾದರೂ ಮತ್ತದೇ ಬ್ಯಾಟಿಂಗ್ ವೈಫಲ್ಯದಿಂದ ಪಂದ್ಯವನ್ನು ಕೈ ಚೆಲ್ಲಿತು. ಈ ಬಾರಿ ಪಾಂಡ್ಯಾ ಕೂಡ ಕೈ ಕೊಟ್ಟಿದ್ದರು. ಅಂತಿಮ ಹಂತದಲ್ಲಿ ಒಂದೇ ಒಂದು ವಿಕೆಟ್ ಉಳಿಸಿಕೊಂಡಿದ್ದರೂ ಭಾರತ ಈ ಪಂದ್ಯವನ್ನು ಗೆಲುತ್ತಿತ್ತು ಎನ್ನಲಾಗಿದೆ.
ಆಫ್ರಿಕನ್ನರ ಪ್ರಬಲ ಬೌಲಿಂಗ್ ದಾಳಿ
ಭಾರತದ ಸೋಲಿಗೆ ಕೇವಲ ಆ ತಂಡದ ಬ್ಯಾಟಿಂಗ್ ಮಾತ್ರವಲ್ಲ.. ಬದಲಿಗೆ ಬ್ಯಾಟಿಂಗ್ ವೈಫಲ್ಯಕಂಡರೂ ಬೌಲಿಂಗ್ ನಲ್ಲಿ ಎದುರಾಳಿಗಳನ್ನು ಬಗ್ಗಿಸಿದ ಆಫ್ರಿಕನ್ ಬೌಲರ್ ಗಳು ಆಪ್ರಿಕಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅಲ್ಪ ಗುರಿ ನೀಡಿದ್ದರೂ ಅಂಜದ ಸಂಘಟಿತ ದಾಳಿ ನಡೆಸಿದ ಆಫ್ರಿಕನ್ ಬೌಲರ್ ಗಳು ಭಾರತದ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಅಕ್ಷರಶಃ ಕಾಡಿದರು. ನಾಲ್ಕನೇ ದಿನ ಆಫ್ರಿಕ್ ಬೌಲರ್ ಗಳು ನೀಡಿದ್ದು ಕೇವಲ 52 ರನ್ ಗಳಷ್ಟೇ ಎಂದರೆ ಅವರ ಶಿಸ್ತುಬದ್ಧ ದಾಳಿ ಹೇಗಿತ್ತು ಎಂಬುದು ತಿಳಿಯುತ್ತದೆ. ಅಲ್ಲದೆ ಮಾರ್ಕರ್ಮ್ ಮತ್ತು ಎಲ್ಗಾರ್ ನಿಯಮಿತವಾಗಿ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ದುಸ್ವಪ್ನರಾದರು. ಅಂತೆಯೇ ನಾಯಕ ಫಾಫ್ ಡುಪ್ಲೆಸಿಸ್ ನಾಯಕತ್ವ ಮತ್ತು ಚಾಣಾಕ್ಷ ಫೀಲ್ಡಿಂಗ್ ನಿಯೋಜನೆ ಆಫ್ರಿಕಾ ಪಾಲಿಗೆ ಜಯ ಒಲಿಯುವಂತೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com