ಟೆಸ್ಟ್ ಸರಣಿಗೆ ಆಯ್ಕೆ ಕುರಿತು ಮೈಕಲ್ ವಾನ್ ಟೀಕೆ, ಮೂರ್ಖತನದ ಹೇಳಿಕೆ ಎಂದ ಅದಿಲ್ ರಷೀದ್

ಟೆಸ್ಟ್ ತಂಡಕ್ಕೆ ತಮ್ಮನ್ನು ಪರಿಗಣಿಸಿರುವ ವಿಚಾರವನ್ನು ಟೀಕಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ ಮಾಜಿ ನಾಯಕ ಮೈಕಲ್ ವಾನ್ ಅವರ ಹೇಳಿಕೆಯನ್ನು ಆಟಗಾರ ಅದಿಲ್ ರಷೀದ್ ಮೂರ್ಖತನದ ಹೇಳಿಕೆ ಎಂದು ಟೀಕಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡದ ಆಯ್ಕೆ ಇದೀಗ ಮಾಜಿ ಮತ್ತು ಹಾಲಿ ಆಟಗಾರರ ನಡುವಿನ ವಾಗ್ವಾದಕ್ಕೆ ಕಾರಣವಾಗಿದ್ದು, ಟೆಸ್ಟ್ ತಂಡಕ್ಕೆ ತಮ್ಮನ್ನು ಪರಿಗಣಿಸಿರುವ ವಿಚಾರವನ್ನು ಟೀಕಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ ಮಾಜಿ ನಾಯಕ ಮೈಕಲ್ ವಾನ್ ಅವರ ಹೇಳಿಕೆಯನ್ನು ಆಟಗಾರ ಅದಿಲ್ ರಷೀದ್ ಮೂರ್ಖತನದ ಹೇಳಿಕೆ ಎಂದು ಟೀಕಿಸಿದ್ದಾರೆ.
ಬಿಬಿಸಿ ವಾಹಿನಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದಿಲ್ ರಷೀದ್, ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವುದು ನಿಜಕ್ಕೂ ನನಗೂ ಅಚ್ಚರಿ ತಂದಿದೆ. ನಾನಿನ್ನೂ  ಟೆಸ್ಟ್ ಕ್ರಿಕೆಟ್​ಗೆ ಸಂಪೂರ್ಣ ಸಜ್ಜಾಗಿಲ್ಲ. ಬಹುಶಃ ನನ್ನ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಸಮಿತಿ ನನ್ನು ಆಯ್ಕೆ ಮಾಡಿರಹುದು. ಆದಕೆ ಆಯ್ಕೆ ಕುರಿತು ಮಾಜಿ ನಾಯಕ ಮೈಕಲ್ ವಾನ್ ಅವರ ಹೇಳಿಕೆ ಸರಿಯಲ್ಲ. ಅವರು ಹೇಳಿದ್ದನ್ನೆಲ್ಲಾ ಜನ ಕೇಳುತ್ತಾರೆ ಎಂಬ ಭ್ರಮೆಯಲ್ಲಿ ವಾನ್ ಇದ್ದಾರೆ. ಜನ ಕೇಳಬಹುದು ಅಥವಾ ಇಲ್ಲ. ಆದರೆ ನಾನಂತೂ ಖಂಡಿತಾ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ಪ್ರಕಾರ ನಿವೃತ್ತಿ ದೊಡ್ಡ ವಿಚಾರವಲ್ಲ. ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದಾಗ ನೀವು ಖಂಡಿತಾ ದೇಶದ ಪರ ನಿಲ್ಲಬೇಕು. ದೇಶದ ಪರ ಆಡಲು ನೀನು ಆಡಲು ಸಿದ್ಧವಾಗಿರುವೆಯೇ ಎಂದಾಗ ಯಾವುದೇ ಆಟಗಾರ ಇಲ್ಲ ಎನ್ನಲು ಹೇಗೆ ಸಾಧ್ಯ. ಮೈಕಲ್ ವಾನ್ ಏನನ್ನು ಬೇಕದಾರೂ ಟ್ವೀಟ್ ಮಾಡಲಿ ಅವರ ಟ್ವೀಟ್ ಗೂ ನನಗೂ ಯಾವುದೇ ಸಂಬಂಧವಿಲ್ಲ.  ಜನರೇ ಮೈಕಲ್ ವಾನ್ ರ ಮೇಲಿನ ಆಸಕ್ತಿ ಕಳೆದುಕೊಂಡಿದ್ದಾರೆ. ಅವರು ಏನು ಹೇಳುತ್ತಾರೆ ಎಂಬುದಕ್ಕಿಂತ ಜನ ಏನು ಹೇಳುತ್ತಾರೆ ಎಂಬುದು ನನಗೆ ಮುಖ್ಯ. ನಾನು ಸಾಕಷ್ಟು ಮಾಜಿ ಆಟಗಾರರೊಂದಿಗೆ ಆಡಿದ್ದೇನೆ. ಆದರೆ ಯಾರೋ ಒಬ್ಬರು ಬಾಯಿಗೆ ಬಂದಂತೆ ಹರಟಿದರೆ ಅದಕ್ಕೆಲ್ಲಾ ನಾನು ಸ್ಪಷ್ಟನೆ ನೀಡಲು ಸಾಧ್ಯವಿಲ್ಲ ಎಂದು ರಷೀದ್ ಹೇಳಿದ್ದಾರೆ.
ಯಾರ್ಕ್ ಶೈರ್ ಗೆ ಅಸಮಾಧಾನವಿದ್ದರೆ ನಾನು ಭವಿಷ್ಯ ನೋಡಿಕೊಳ್ಳಬೇಕಾಗುತ್ತದೆ
ಇನ್ನು ಅದಿಲ್ ರಷೀದ್ ಅವರು ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಇದೇ ಸಂದರ್ಭದಲ್ಲೇ ಅವರು ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವುದು ಅವರು ಪ್ರತಿನಿಧಿಸುತ್ತಿರುವ ಯಾರ್ಕ್ ಶೈರ್ ತಂಡಕ್ಕೆ ಆಘಾತ ತಂದಿದೆ. ಈ ಬಗ್ಗೆ ಯಾರ್ಕ್ ಶೈರ್ ಈ ವರೆಗೂ ಯಾವುದೇ ಹೇಳಿಕೆ ನೀಡಿಲ್ಲವಾದರೂ ಅದು ಒಳಗೊಳಗೇ ಕುದಿಯುತ್ತಿದೆ. ತಮ್ಮ ತಂಡದ ಆಟಗಾರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರೂ ಆ ತಂಡ ಈ ವರೆಗೂ ಅಭಿನಂದನೆ ಸಲ್ಲಿಸಿಲ್ಲ. ಈ ಬಗ್ಗೆ ಮಾತನಾಡಿರುವ ಅದಿಲ್ ರಷೀದ್, ಇದು ನಿರೀಕ್ಷಿತ ಸ್ಪಂದನೆಯೇ. ಯಾವುದೇ ತಂಡವಾದರೂ ಇದನ್ನೇ ಮಾಡುತ್ತದೆ. ಆದರೆ ನನ್ನ ಆಯ್ಕೆ ಬಗ್ಗೆ ಯಾರ್ಕ್ ಶೈರ್ ಗೆ ಅಸಮಾಧಾನವಿದ್ದರೆ ನಾನು ನನ್ನ ಭವಿಷ್ಯ ನೋಡಿಕೊಳ್ಳಬೇಕಾಗುತ್ತದೆ ಎಂದು ಅದಿಲ್ ರಷೀದ್ ಹೇಳಿದ್ದಾರೆ.
ಇನ್ನು ಇದೇ ಆಗಸ್ಚ್ 1 ರಿಂದ ಎಡ್ಜ್ ಬ್ಯಾಸ್ಟನ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com