ಸಂಗ್ರಹ ಚಿತ್ರ
ಕ್ರಿಕೆಟ್
ಸದ್ದಿಲ್ಲದೇ ಅಪೂರ್ವ ದಾಖಲೆ ಬರೆದ 'ಮಹಿಳಾ ಕ್ರಿಕೆಟ್ ನ ಸಚಿನ್' ಮಿಥಾಲಿ ರಾಜ್!
ಭಾರತೀಯ ಮಹಿಳಾ ಕ್ರಿಕೆಟ್ ನ ದಂತಕಥೆ ಮತ್ತು ಮಹಿಳಾ ಕ್ರಿಕೆಟ್ ನ ಸಚಿನ್ ಮಿಥಾಲಿ ರಾಜ್ ಸದ್ದಿಲ್ಲದೇ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.
ಗಾಲೆ: ಭಾರತೀಯ ಮಹಿಳಾ ಕ್ರಿಕೆಟ್ ನ ದಂತಕಥೆ ಮತ್ತು ಮಹಿಳಾ ಕ್ರಿಕೆಟ್ ನ ಸಚಿನ್ ಮಿಥಾಲಿ ರಾಜ್ ಸದ್ದಿಲ್ಲದೇ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.
ಹೌದು.. ಮಹಿಳಾ ಟೀಂ ಇಂಡಿಯಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅಪೂರ್ವ ದಾಖಲೆಯೊಂದನ್ನು ಮುಡಿಗೇರಿಸಿಕೊಂಡಿದ್ದು, ನಾಯಕಿಯಾಗಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸದಲ್ಲಿದ್ದು. ನಿನ್ನೆ ನಡೆದ ಮೊದಲ ಏಕದಿನ ಪಂದ್ಯಕ್ಕೆ ಮಿಥಾಲಿ ರಾಜ್ ಭಾರತ ತಂಡದ ಸಾರಥ್ಯ ವಹಿಸಿಕೊಳ್ಳುವ ಮೂಲಕ ಈ ಅಪೂರ್ವ ದಾಖಲೆಯನ್ನು ಮಿಥಾಲಿ ಮುಡಿಗೇರಿಸಿಕೊಂಡರು. ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಮಿಥಾಲಿ ರಾಜ್ ಗೆ ನಾಯಕಿಯಾಗಿ 118ನೇ ಪಂದ್ಯವಾಗಿದ್ದು, ಈ ಪಂದ್ಯದ ಮೂಲಕ ಈ ಅಪೂರ್ವ ಸಾಧನೆಗೆ ಮಿಥಾಲಿ ಭಾಜನರಾಗಿದ್ದಾರೆ.
ಭಾರತ ತಂಡದ ಪರ ಒಟ್ಟು 118 ಪಂದ್ಯಗಳಿಗೆ ಮಿಥಾಲಿ ರಾಜ್ ಸಾರಥ್ಯ ವಹಿಸಿದ್ದು, ಆ ಮೂಲಕ ಮಿಥಾಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ದಂತಕಥೆ ಚಾರ್ಲೋಟ್ ಎಡ್ವರ್ಡ್ಸ್ ಅವರನ್ನು ಹಿಂದಿಕ್ಕಿದ್ದಾರೆ. ಚಾರ್ಲೋಟ್ ಎಡ್ವರ್ಡ್ಸ್ ಒಟ್ಟು 117 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ಸಾರಥ್ಯ ವಹಿಸಿದ್ದು, ಈ ವರೆಗಿನ ದಾಖಲೆಯಾಗಿತ್ತು. ಉಳಿದಂತೆ ಆಸಿಸ್ ಏಕದಿನ ನಾಯಕ ಬೆಲಿಂಡಾ ಕ್ಲಾರ್ಕ್ 101 ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿ 3ನೇ ಸ್ಥಾನದಲ್ಲಿದ್ದು, 76 ಪಂದ್ಯಗಳಿಗೆ ಸಾರಥ್ಯವಹಿಸುವ ಮೂಲಕ ನ್ಯೂಜಿಲೆಂಡ್ ನ ಸೂಜಿ ಬೇಟ್ಸ್ 4ನೇ ಸ್ಥಾನದಲ್ಲಿದ್ದಾರೆ.
ಇನ್ನು ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಮಿಥಾಲಿ ಪಡೆ ಭರ್ಜರಿ 9 ವಿಕೆಟ್ ಗಳ ಅಂತರದಿಂದ ಜಯಿಸಿದೆ. ಮೊದಲು ಬ್ಯಾಟ್ ಮಾಡಿದ ಲಂಕಾ ವನಿತೆಯರ ತಂಡ 35.1 ಓವರ್ ನಲ್ಲಿ ಕೇವಲ 98 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಮಾನ್ಸಿ ಜೋಶಿ ಬೌಲಿಂಗ್ ದಾಳಿಗೆ ತತ್ತರಿಸಿಗ ಲಂಕಾ ವನಿತೆಯರ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. ಈ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ ಕೇವಲ 19.5 ಓವರ್ ನಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿ ಗುರಿ ಮುಟ್ಟಿತು. ಭಾರತದ ಪರ 73 ರನ್ ಗಳ ಅಜೇಯ ಆಟವಾಡಿದ ಸ್ಮೃತಿ ಮಂದಾನ ಗೆಲುವಿನ ರೂವಾರಿಯಾದರು.
Yesterday @M_Raj03 claimed yet another record - the most games as captain in Women's ODIs!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ