ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ, ಏಷ್ಯಾ ಕಪ್ 2018ರ ಫೈನಲ್ ಗೆ ಭಾರತ ಲಗ್ಗೆ!

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಅರ್ಹವಾಗಿಯೇ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದುಬೈ: ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ 2018 ನಿರ್ಣಾಯಕ ಹಂತ ತಲುಪಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಅರ್ಹವಾಗಿಯೇ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.
ನಿನ್ನೆ ದುಬೈನಲ್ಲಿ ನಡೆದ ಸೂಪರ್ ಹಂತದ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 237  ರನ್ ಗಳಿಸಿತು. 238 ರನ್ ಗಳ ಸಾಮಾನ್ಯ ಗುರಿ ಬೆನ್ನು ಹತ್ತಿದ ಭಾರತ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಹಾಗೂ ನಾಯಕ ರೋಹಿತ್ ಶರ್ಮಾ ಭರ್ಜರಿ ಆರಂಭ ಒದಗಿಸಿದರು. ಅಜೇಯ ಆಟವಾಡಿದ ಈ ಜೋಡಿ ದಾಖಲೆ 210 ರನ್ ಗಳ ಜೊತೆಯಾಟವಾಡಿತು. 
ಧವನ್ ಹಾಗೂ ರೋಹಿತ್ ಶರ್ಮಾ ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು. ಪಂದ್ಯವನ್ನು ಇನ್ನೇನು ಭಾರತ ಗೆದ್ದೇ ಬಿಟ್ಟಿತು ಎನ್ನುವಾಗಲೇ ಇಲ್ಲದ ರನ್ ಕದಿಯಲು ಹೋಗಿ ಧವನ್ ರನೌಟ್ ಗೆ ಬಲಿಯಾದರು. ಅಷ್ಟು ಹೊತ್ತಿಗಾಗಲೇ ಭಾರತ ಗೆಲುವು ಖಚಿತವಾಗಿತ್ತು. ಬಳಿಕ ಬಂದ ಅಂಬಾಟಿ ರಾಯುಡು ರೋಹಿತ್ ಜೊತೆಗೂಡಿ ಗೆಲುವಿನ ಔಪಚಾರಿಕತೆ ಮುಗಿಸಿದರು. ಈ ಗೆಲುವಿನ ಮೂಲಕ ಭಾರತ ಏಷ್ಯಾಕಪ್ ಟೂರ್ನಿ ಫೈನಲ್ ಗೆ ಲಗ್ಗೆ ಇಟ್ಟಿತು. ಆ ಮೂಲಕ ಪೈನಲ್ ಗೆ ಲಗ್ಗೆ ಇಟ್ಟ ಮೊದಲ ತಂಡ ಎಂಬ ಕೀರ್ತಿಗೂ ಭಾಜನವಾಯಿತು.
ಇನ್ನು ಫೈನಲ್ ಗೇರುವ ಮತ್ತೊಂದ ತಂಡಕ್ಕಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಆಡಿರುವ ತಲಾ 2 ಪಂದ್ಯಗಳ ಪೈಕಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಹೀಗಾಗಿ ಈ ಎರಡೂ ತಂಡಗಳ ನಡುವೆ ನಡೆಯುವ ಮುಂದಿನ ಪಂದ್ಯ ಸೆಮಿಫೈನಲ್ ಪಂದ್ಯವಾಗಿರಲಿದ್ದು, ಇಲ್ಲಿ ಗೆದ್ದ ತಂಡ ಪೈನಲ್ ಹಂತಕ್ಕೇರಲಿದೆ.
ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಆಪ್ಘಾನಿಸ್ತಾನವನ್ನು ಎದುರಿಸಲಿದ್ದು, ಭಾರತದ ಪಾಲಿಗೆ ಇದು ಆಟಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿರಲಿದೆ. ಆದರೆ ಟೂರ್ನಿಯಲ್ಲಿ ಭಾರತ ಅಜೇಯ ತಂಡವಾಗಿದ್ದು, ಇದನ್ನು ಮುಂದುವರೆಸುವ ವಿಶ್ವಾಸ ಹೊಂದಿದೆ. ಅಂತೆಯೇ ನಿನ್ನೆ ಬಾಂಗ್ಲಾದೇಶದ ವಿರುದ್ಧ 3 ರನ್ ಗಳ ಅಂತರದಲ್ಲಿ ವಿರೋಚಿತ ಸೋಲುಕಂಡ ಆಪ್ಘಾನಿಸ್ತಾನ ಈ ಪಂದ್ಯ ಗೆದ್ದು ಗೆಲುವಿನ ಮೂಲಕ ಟೂರ್ನಿಗೆ ವಿದಾಯ ಹೇಳಲು ಬಯಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com