ಗಂಭೀರ್-ಸೆಹ್ವಾಗ್ ದಾಖಲೆ ಧೂಳಿಪಟ, ದಾಖಲೆ ಬರೆದ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ

ದುಬೈನಲ್ಲಿ ಭಾನುವಾರ ನಡೆದ ಇಂಡೋ-ಪಾಕ್ ಹೈವೋಲ್ಟೇಜ್ ಕದನದಲ್ಲಿ ಭಾರತ ಜಯಗಳಿಸಿದೆಯಾದರೂ, ಭಾರತದ ಭರ್ಜರಿ ಜಯ ಹಿಂದೆಯೇ ಹಲವು ದಾಖಲೆಗಳು ಸೃಷ್ಟಿಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ದುಬೈ: ದುಬೈನಲ್ಲಿ ಭಾನುವಾರ ನಡೆದ ಇಂಡೋ-ಪಾಕ್ ಹೈವೋಲ್ಟೇಜ್ ಕದನದಲ್ಲಿ ಭಾರತ ಜಯಗಳಿಸಿದೆಯಾದರೂ, ಭಾರತದ ಭರ್ಜರಿ ಜಯ ಹಿಂದೆಯೇ ಹಲವು ದಾಖಲೆಗಳು ಸೃಷ್ಟಿಯಾಗಿವೆ.
ಈ ಪೈಕಿ ಭಾರತದ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಜೋಡಿ ತಾವು ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಜೋಡಿ ಎಂಬುದನ್ನು ಸಾಬೀತು ಮಾಡಿದ್ದಾರೆ. ದುಬೈನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಹಂತದ 2ನೇ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 238 ರನ್ ಗಳ ಗುರಿಯನ್ನು ಬೆನ್ನ ಹತ್ತಿದ ಭಾರತ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಜೋಡಿ ದಾಖಲೆಯ ಜೊತೆಯಾಟ ನೀಡಿತು. ಆರಂಭದಿಂದಲೂ ಪಾಕ್ ಬೌಲರ್ ಗಳನ್ನು ದಂಡಿಸಿದ ಈ ಜೋಡಿ ಪಾಕಿಸ್ತಾನಕ್ಕೆ ವಿಕೆಟ್ ನೀಡುವ ಮನಸ್ಸೇ ಮಾಡಲಿಲ್ಲ. ಪರಿಣಾಮ 210 ರನ್ ಗಳ ವರೆಗೂ ಈ ಜೊತೆಯಾಟ ಮುಂದುವರೆಯಿತು. ಇಬ್ಬರು ಶತಕ ಸಿಡಿಸಿ ಸಂಭ್ರಮಿಸಿದರು. 
ಒಟ್ಟು 201 ಎಸೆತಗಳನ್ನು ಎದುರಿಸಿದ ಈ ಜೋಡಿ 210 ರನ್ ಪೇರಿಸಿತು. ಆ ಮೂಲಕ ಈ ಹಿಂದೆ ಗೌತಮ್ ಗಂಭೀರ್ ಮತ್ತು ವಿರೇಂದ್ರ ಸೆಹ್ವಾಗ್ ಹೆಸರಲ್ಲಿದ್ದ 201 ರನ್ ಗಳ ದಾಖಲೆ ಜೊತೆಯಾಟವನ್ನು ಈ ಜೋಡಿ ಮುರಿಯಿತು. ಇನ್ನು ಭಾರತದ ಪರ ಅತೀ ಹೆಚ್ಚು ರನ್ ಪೇರಿಸಿದ ಆರಂಭಿಕರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ನ ಸವ್ಯಸಾಚಿಗಳಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅಗ್ರ ಮತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ. 2001 ಅಕ್ಟೋಬರ್ 24ರಲ್ಲಿ ಕೀನ್ಯಾ ವಿರುದ್ಧ ಈ ಜೋಡಿ 258 ರನ್ ಕಲೆ ಹಾಕಿರುವುದು ಈ ವರೆಗಿನ ದಾಖಲೆಯಾಗಿ ಉಳಿದುಕೊಂಡಿದೆ. ಆ ಬಳಿಕ ಇದೇ ಜೋಡಿ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ 98ರಲ್ಲಿ ಗಳಿಸಿದ್ದ 252 ರನ್ ಗಳ ಜೊತೆಯಾಟ 2ನೇ ಸ್ಥಾನದಲ್ಲಿದೆ.  2014ರಲ್ಲಿ ಕಟಕ್ ನಲ್ಲಿ ಮತ್ತದೇ ಶ್ರೀಲಂಕಾ ವಿರುದ್ಧ ಭಾರತದ ಧವನ್ ಮತ್ತು ರಹಾನೆ ಗಳಿಸಿದ್ದ 231 ರನ್ ಗಳ ಜೊತೆಯಾಟ ಮೂರನೇ ಸ್ಥಾನದಲ್ಲಿದ್ದು, ನಿನ್ನೆ ರೋಹಿತ್ ಶರ್ಮಾ ಮತ್ತು ಧವನ್ ಗಳಿಸಿದ 210ರನ್ ಗಳ ಜೊತೆಯಾಟ ನಾಲ್ಕನೇ ಸ್ಥಾನದಲ್ಲಿದೆ.
ಇನ್ನು ವಿಶ್ವ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಪೇರಿಸಿದ ಆರಂಭಿಕರಲ್ಲಿ ಪಾಕಿಸ್ತಾನದ ಫಕರ್ ಜಮಾನ್ ಮತ್ತು ಇಮಾಮ್ ಉಲ್ ಹಕ್ ಜೋಡಿ ಅಗ್ರ ಸ್ಥಾನದಲ್ಲಿದ್ದು, ಕಳೆದ ಜುಲೈನಲ್ಲಿ ಜಿಂಬಾಂಬ್ವೆ ವಿರುದ್ಧ ಈ ಜೋಡಿ ದಾಖಲೆಯ 304 ರನ್ ಜೊತೆಯಾಟವಾಡಿತ್ತು. ಇದು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಆರಂಭಿಕರ ಗರಿಷ್ಛ ರನ್ ಜೊತೆಯಾಟವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com