ಕೆಕೆಆರ್‌ ವಿರುದ್ಧ ಗೆಲುವಿನ ಒತ್ತಡದಲ್ಲಿ ಆರ್‌ಸಿಬಿ: ಡೇಲ್‌ ಸ್ಟೈನ್‌ ಕಣಕ್ಕೆ?

ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು ಪ್ಲೇ ಆಫ್‌ ಹಂತ ಕಳೆದುಕೊಳ್ಳುವ ಭೀತಿಯಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, 12 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌...
ಡೇಲ್ ಸ್ಟೈನ್
ಡೇಲ್ ಸ್ಟೈನ್
ಕೊಲ್ಕತಾ: ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು ಪ್ಲೇ ಆಫ್‌ ಹಂತ ಕಳೆದುಕೊಳ್ಳುವ ಭೀತಿಯಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, 12 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 35ನೇ ಪಂದ್ಯದಲ್ಲಿ ಕೊಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ನಾಳೆ ಇಲ್ಲಿನ ಈಡೆನ್‌ ಗಾರ್ಡನ್ಸ್‌ ಮೈದಾನದಲ್ಲಿ ಸೆಣಸಲಿದೆ.
ಡೆತ್‌ ಓವರ್‌ಗಳಲ್ಲಿ ಹಾಗೂ ನಿರ್ಣಾಯಕ ಓವರ್‌ಗಳಲ್ಲಿ ವಿಫಲವಾಗಿರುವ ಬೌಲಿಂಗ್‌ ವಿಭಾಗಕ್ಕೆ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ಅವರು ನಾಳಿನ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ಆರ್‌ಸಿಬಿ ಬೌಲಿಂಗ್‌ ವಿಭಾಗದಲ್ಲಿ ಸ್ಟೈನ್‌ ಮೇಲೆ ಸಾಕಷ್ಟು ನಂಬಿಕೆ ಇರಿಸಿದೆ.   
ಆರ್‌ಸಿಬಿ ಆಡಿರುವ ಒಟ್ಟು 8 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಬೆಂಗಳೂರು ಪ್ಲೇ ಆಫ್‌ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಇನ್ನುಳಿದ ಎಲ್ಲ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಹಾಗಾಗಿ, ವಿರಾಟ್‌ ನಾಯಕತ್ವದ ಆರ್‌ಸಿಬಿ ಹೊಸ ಹುಮ್ಮಸ್ಸು ಹಾಗೂ ನೂತನ ತಂತ್ರ ಮತ್ತು ಯೋಜನೆಯೊಂದಿಗೆ ನಾಳೆ ಕಣಕ್ಕೆ ಇಳಿಯಲಿದೆ.
ಎದುರಾಳಿ ಕೊಲ್ಕತಾ ನೈಟ್‌ ರೈಡರ್ಸ್‌ ತಂಡ ಆಡಿರುವ ಒಟ್ಟು 8 ಹಣಾಹಣಿಗಳಲ್ಲಿ 4ರಲ್ಲಿ ಗೆಲುವು ಹಾಗೂ ಇನ್ನುಳಿದ 4ರಲ್ಲಿ ಸೋಲು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಪ್ಲೇಆಪ್‌ ತಲುಪುವ ಹಾದಿಯಲ್ಲಿರುವ ದಿನೇಶ್‌ ಕಾರ್ತಿಕ್‌ ನಾಯಕತ್ವದ ಕೆಕೆಆರ್‌, ಗೆಲುವಿನ ಲಯಕ್ಕೆ ಮರಳುವುದು ಅನಿವಾರ್ಯ.
ಆರ್‌ಸಿಬಿ ಹಾಗೂ ಕೆಕೆಆರ್‌ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಕೆಕೆಆರ್‌ 15 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಇನ್ನುಳಿದ 9 ಪಂದ್ಯಗಳಲ್ಲಿ ಆರ್‌ಸಿಬಿ ಜಯ ದಾಖಲಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳ ನಡುವೆ ಎರಡನೇ ಕಾದಾಟ ಇದಾಗಿದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್‌ 5 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
ಕಳೆದ ಭಾನುವಾರ ಕೊಲ್ಕತಾ ನೈಟ್‌ ರೈಡರ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಕೆಕೆಆರ್‌ ತಂಡಕ್ಕೆ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಬಲವಿದ್ದು, ಪಂದ್ಯವನ್ನು ಎಂಥ ಕಠಿಣ ಸಂದರ್ಭದಲ್ಲಾದರೂ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ. ಇವರ ಜತೆಗೆ, ಕ್ರಿಸ್‌ ಲೀನ್‌, ಸುನೀಲ್‌ ನರೇನ್ ಹಾಗೂ ರಾಬಿನ್‌ ಉತ್ತಪ್ಪ ಬಲಿವಿದೆ.
ಉತ್ತಮ ಬೌಲಿಂಗ್‌ ಮಾಡುವಲ್ಲಿ ವಿಫಲರಾಗಿದ್ದ ಲೂಕಿ ಫರ್ಗುಸನ್‌ ಅವರ ಬದಲಿಗೆ ಹ್ಯಾರಿ ಗರ್ನಿ ನಾಳಿನ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ. ಚೆನ್ನೈ ವಿರುದ್ಧ ಕಳೆದ ಪಂದ್ಯವಾಡಿದ ತಂಡವೇ ನಾಳೆ ಕಣಕ್ಕೆ ಇಳಿಯಲಿದೆ.
ರಾಯಲ್ಸ್‌ ಚಾಲೆಂಜರ್ಸ್‌ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ನಾಯಕ ವಿರಾಟ್‌ ಕೊಹ್ಲಿ ಹಾಗೂ ಎ.ಬಿ ಡೆವಿಲಿರ್ಸ್‌ ಪ್ರಮುಖ ಶಕ್ತಿ. ಇವರಿಗೆ ಎಡಗೈ ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ಸಾಥ್‌ ನೀಡಲಿದ್ದಾರೆ. ಮಾರ್ಕುಸ್‌ ಸ್ಟೋಯಿನಿಸ್‌ ಇನ್ನುಳಿದ ಆಟಗಾರರು ಸ್ಥಿರತೆ ಕಾಪಾಡಿಕೊಳ್ಳುವುದು ಅಗತ್ಯ.
ಗಾಯಗೊಂಡಿರುವ ಆಸ್ಟ್ರೇಲಿಯಾ ನಥಾನ್‌ ಕೌಲ್ಟರ್‌ ನೈಲ್‌ ಅವರ ಸ್ಥಾನಕ್ಕೆ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ಅವರನ್ನು ನಾಳೆ ಕಣಕ್ಕೆ ಇಳಿಸಲು ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್‌ ನಿರ್ಧರಿಸಿದೆ. ಹಾಗಾಗಿ, ಬೌಲಿಂಗ್‌ ವಿಭಾಗದಲ್ಲಿ ನಾಳಿನ ಪಂದ್ಯದಲ್ಲಿ ಸುಧಾರಣೆಯಾಗಲಿದೆಯೇ ಎಂದು ಕಾದು ನೋಡಬೇಕು.
ಸಂಭಾವ್ಯ ಆಟಗಾರರು
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು:
ಪಾರ್ಥಿವ್‌ ಪಟೇಲ್‌, ವಿರಾಟ್‌ ಕೊಹ್ಲಿ (ನಾಯಕ), ಎ.ಬಿ ಡೆವಿಲಿಯರ್ಸ್‌, ಮಾರ್ಕುಸ್‌ ಸ್ಟೋಯಿನಿಸ್‌,  ಮೊಯಿನ್‌ ಅಲಿ, ಆಕಾಶ್‌ದೀಪ್‌ ನಾಥ್‌, ಪವನ್‌ ನೇಗಿ, ಉಮೇಶ್‌ ಯಾಧವ್‌/ಡೇಲ್‌ ಸ್ಟೈನ್‌, ನವದೀಪ್‌ ಸೈನಿ, ಯಜುವೇಂದ್ರ ಚಾಹಲ್‌, ಮೊಹಮ್ಮದ್‌ ಸಿರಾಜ್‌.
ಕೊಲ್ಕತಾ ನೈಟ್‌ ರೈಡರ್ಸ್‌:
ಕ್ರಿಸ್‌ ಲೀನ್‌, ಸುನೀಲ್‌ ನರೇನ್‌, ರಾಬಿನ್‌ ಉತ್ತಪ್ಪ, ನಿತೀಶ್‌ ರಾಣಾ, ಶುಭಮನ್ ಗಿಲ್‌, ದಿನೇಶ್ ಕಾರ್ತಿಕ್‌ (ನಾಯಕ, ವಿ.ಕೀ), ಆ್ಯಂಡ್ರೆ ರಸೆಲ್‌, ಪಿಯೂಷ್‌ ಚಾವ್ಲಾ, ಕುಲ್ದೀಪ್‌ ಯಾದವ್‌, ಪ್ರಸಿದ್ಧ್ ಕೃಷ್ಣ, ಹ್ಯಾರಿ ಗರ್ನಿ.
ಸಮಯ: ನಾಳೆ ರಾತ್ರಿ 08:00   
ಸ್ಥಳ: ಈಡೆನ್‌ ಗಾರ್ಡನ್ಸ್, ಕೊಲ್ಕತಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com