ರೋ'ಹಿಟ್', ರಾಹುಲ್ ಭರ್ಜರಿ ಜೊತೆಯಾಟ, ಪಂತ್ ಆರ್ಭಟ, ವಿಂಡೀಸ್ ಗೆ ಬೃಹತ್ ಗುರಿ!

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು ದಾಖಲೆಯ ಮೊತ್ತವನ್ನು ಗುರಿಯಾಗಿ ನೀಡಿದೆ.
ಭಾರತದ ಬ್ಯಾಟಿಂಗ್
ಭಾರತದ ಬ್ಯಾಟಿಂಗ್

ವಿಶಾಖಪಟ್ಟಣಂ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು ದಾಖಲೆಯ ಮೊತ್ತವನ್ನು ಗುರಿಯಾಗಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ (159 ರನ್) ಮತ್ತು ಕೆಎಲ್ ರಾಹುಲ್ (102 ರನ್) ಭರ್ಜರಿ ಆರಂಭ ಒದಗಿಸಿದರು. ಆರಂಭದಿಂದಲೂ ವಿಂಡೀಸ್ ಬೌಲರ್ ಗಳ ಮೇಲೆ ಮುಗಿಬಿದ್ದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ದ್ವಿಶತಕದ ಜೊತೆಯಾಟ ನೀಡಿದರು. ಬಳಿಕ ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು.

ಆರಂಭದಿಂದಲೂ ವಿಂಡೀಸ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ರೋಹಿತ್ ಶರ್ಮಾ ಕೇವಲ 107 ಎಸೆತಗಳಲ್ಲಿ ಶತಕ ಸಿಡಿಸಿದರು. ಅವರ ಈ ಶತಕದಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಗಳು ಸೇರಿವೆ.  ಇನ್ನು ರೋಹಿತ್ ಶರ್ಮಾ ತಮ್ಮ ಈ ಶತಕದ ಮೂಲಕ ಹಾಲಿ ಕ್ರಿಕೆಟ್ ವರ್ಷದಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು ಏಳಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ 2019ರಲ್ಲಿ ಭಾರತದ ಪರ ಗರಿಷ್ಠ ಶತಕ ಗಳಿಸಿದ ಆಟಗಾರ ಎಂಬ ಕೀರ್ತಿಗೆ ರೋಹಿತ್ ಭಾಜನರಾಗಿದ್ದಾರೆ. 

ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ ಶತಕ ಸಿಡಿಸಿದರು. 104 ಎಸೆತಗಳಲ್ಲಿ ರಾಹುಲ್ 3 ಸಿಕ್ಸರ್ ಮತ್ತು 8 ಬೌಂಡರ್ ಗಳ ನೆರವಿನಿಂದ 102 ರನ್ ಸಿಡಿಸಿ ಔಟ್ ಆದರು. ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ ಗೋಲ್ಡನ್ ಡಕೌಟ್ ಆಗುವುದರೊಂದಿಗೆ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಈ ಹಂತದಲ್ಲಿ ರೋಹಿತ್ ಶರ್ಮಾ ಜೊತೆಯಾದ ಶ್ರೇಯಸ್ ಅಯ್ಯರ್ ನಿಧಾನವಾಗಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಇದೇ ಹಂತದಲ್ಲಿ 159 ರನ್ ಗಳಿಸಿದ್ದ ರೋಹಿತ್ ಶರ್ಮಾ ಕಾಟ್ರೆಲ್ ಬೌಲಿಂಗ್ ನಲ್ಲಿ ಶಾಯ್ ಹೋಪ್ ಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 16 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಗಳ ನೆರವಿನಿಂದ ಪಂತ್ 309 ರನ್ ಗಳಿಸಿ ಕೀಮೋ ಪಾಲ್ ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಶ್ರೇಯಸ್ ಅಯ್ಯರ್ ಕೂಡ 32 ಎಸೆತಗಳಲ್ಲಿ 53 ರನ್ ಸಿಡಿಸಿ ಕಾಟ್ರೆಲ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಆವರ ಈ ಭರ್ಜರಿ ಇನ್ನಿಂಗ್ಸ್ ನಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು.

ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 388 ರನ್ ಗಳ ಗುರಿ ನೀಡಿದೆ. ವಿಂಡೀಸ್ ಪರ ಶೆಲ್ಡನ ಕಾಟ್ರೆಲ್ 2 ವಿಕೆಟ್ ಪಡೆದರೆ, ಕೀಮೋ ಪಾಲ್, ಜೋಸೆಫ್ ಮತ್ತು ಕೀರನ್ ಪೊಲಾರ್ಡ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com