ಟಿ-20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಕ್ರಿಕೆಟ್​​ ಶಿಶು ಆಫ್ಘಾನಿಸ್ತಾನ!

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿರುವ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ.
ಆಫ್ಘಾನಿಸ್ತಾನ ಜಯಭೇರಿ
ಆಫ್ಘಾನಿಸ್ತಾನ ಜಯಭೇರಿ
ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿರುವ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ. 
ಐರ್ಲೆಂಡ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ 20 ಓವರ್ ನಲ್ಲಿ ಬರೋಬ್ಬರಿ 278 ರನ್ ಸಿಡಿಸಿ ಈ ಮಾದರಿಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ತಂಡ ಎಂಬ ಸಾಧನೆ ಮಾಡಿದೆ. ಈ ಹಿಂದೆ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ 20 ಓವರ್​ಗೆ 263 ರನ್ ಬಾರಿಸಿದ್ದು, ಈವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಆದರೆ, ಸದ್ಯ ಅಫ್ಘನ್ನರು ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ಭರ್ಜರಿ ಜೊತೆಯಾಟ ಪ್ರದರ್ಶಿಸಿತು. ಹಜರತ್ಹುಲ್ಲಾ ಝಾಝೈ ಸಂಪೂರ್ಣ 20 ಓವರ್ ವರೆಗೂ ಆಡಿ ಚೆಂಡನ್ನು ಮೈದಾನದ ಮೂಲೆಮೂಲೆಗೆ ಅಟ್ಟಿದರು. ಹಜರತ್ಹುಲ್ಲಾ  ಕೇವಲ 62 ಎಸೆತಗಳಲ್ಲಿ 11 ಬೌಂಡರಿ ಹಾಗೂ 16 ಸಿಕ್ಸ್​​ನೊಂದಿಗೆ ಅಜೇಯ 162 ರನ್ ಸಿಡಿಸಿದರು. ಈ ಮೂಲಕ ಹಜರತ್ಹುಲ್ಲಾ ಅವರು ಟಿ-20 ಕ್ರಿಕೆಟ್​​ನಲ್ಲಿ ಗರಿಷ್ಠ ರನ್ ಕಲೆಹಾಕಿದ 2ನೇ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೆ ಭಾಜನರಾದರು. ಜೊತೆಗೆ ವೇಗವಾಗಿ ಶತಕ ಗಳಿಸಿದ(42 ಎಸೆತಗಳಲ್ಲಿ) 3ನೇ ಬ್ಯಾಟ್ಸಮನ್​​ ಆಗಿದ್ದಾರೆ.
ಮೊದಲ ವಿಕೆಟ್ ಗೆ ಹಜರತ್ಹುಲ್ಲಾ ಅವರು ಉಸ್ಮಾನ್ ಘನಿ(73 ರನ್) ಜೊತೆಗೂಡಿ 236 ರನ್​​ಗಳ ದಾಖಲೆಯ ಜೊತೆಯಾಟ ಆಡಿದರು. ಈ ಮೂಲಕ ತಂಡ 3 ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್​ಗೆ 278 ರನ್ ಬಾರಿಸಿತು. 279 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಐರ್ಲೆಂಡ್ ತಂಡ ಹೋರಾಟ ನಡೆಸಿತಾದರು 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 194 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕ ಪಾಲ್ ಸ್ಟಿರ್ಲಿಂಗ್​ ಏಕಾಂಗಿ ಹೋರಾಟ ನಡೆಸಿ 91 ರನ್ ಸಿಡಿಸಿದರು. ಪರಿಣಾಮ 84 ರನ್​ಗಳ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಅಫ್ಘಾನಿಸ್ತಾನ 2-0 ಮುನ್ನಡೆ ಸಾಧಿಸಿ ಸರಣಿ ವಶ ಪಡಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com