ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಣ ವಿಶ್ವಕಪ್ ಫೈನಲ್ ಪಂದ್ಯ 'ಟೈ ಎಂದ ವೀರೂಗೆ ಮೈಕಲ್ ವಾನ್ ಹೇಳಿದ್ದೇನು?

ಕ್ರಿಕೆಟ್ ಇತಿಹಾಸದಲ್ಲೇ ಎರಡು ಬಾರಿ ಟೈ ಕಂಡ ಐಸಿಸಿ ವಿಶ್ವಕಪ್ 2019 ಫೈನಲ್ ಪಂದ್ಯ ಟೈ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದು, ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಕ್ರಿಕೆಟ್ ಇತಿಹಾಸದಲ್ಲೇ ಎರಡು ಬಾರಿ ಟೈ ಕಂಡ ಐಸಿಸಿ ವಿಶ್ವಕಪ್ 2019 ಫೈನಲ್ ಪಂದ್ಯ ಟೈ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದು, ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ರೋಚಕತೆಯಿಂದ ಕೂಡಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟೈ ಎಂದು ಘೋಷಿಸಿದ್ದಾರೆ. ಫೈನಲ್ ನ 50 ಓವರ್ ಪಂದ್ಯ ಟೈ ಆದ ಹಿನ್ನಲೆಯಲ್ಲಿ ಸೂಪರ್ ಓವರ್ ನೀಡಲಾಗಿತ್ತು. ಈ ವೇಳೆಯೂ ಉಭಯ ತಂಡಗಳು ತಲಾ 15 ರನ್ ಗಳಿಸಿದ್ದರಿಂದ ಅದೂ ಕೂಡ ಟೈ ಆಗಿತ್ತು. ಆದರೆ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಗಿಂತ ಹೆಚ್ಚು ಬೌಂಡರಿ ಭಾರಿಸಿದೆ ಎಂದು ಹೇಳಿ ಆ ತಂಡಕ್ಕೆ ಚಾಂಪಿಯನ್ ಪಟ್ಟ ಕಟ್ಟಲಾಗಿತ್ತು.
ಇದು ಕ್ರಿಕೆಟ್ ಪ್ರೇಮಿಗಳ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ದು, ಅಂಪೈರ್ ಗಳ ಎಡವಟ್ಟಿನಿಂದಾಗಿ ಕಿವೀಸ್ ಪಡೆಗೆ ಚಾಂಪಿಯನ್ ಪಟ್ಟ ಕೈ ತಪ್ಪಿತು. ಹೀಗಾಗಿ ಉಭಯ ತಂಡಗಳನ್ನೂ ಜಂಟಿ ಚಾಂಪಿಯನ್ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದರು. ಈ ಚರ್ಚೆ ಚಾಲ್ತಿಯಲ್ಲಿರುವಂತೆಯೇ ಈ ಚರ್ಚೆಗೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪ್ರವೇಶ ಮಾಡಿದ್ದು, ವಿಶ್ವಕಪ್ ಫೈನಲ್ ಪಂದ್ಯ ಟೈ ಎಂದು ಟ್ವೀಟ್ ಮಾಡಿದ್ದಾರೆ.
'ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತದಲ್ಲೂ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದೆ. ಫೈನಲ್ ಪಂದ್ಯದ ಬಳಿಕ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಫೈನಲ್ ಪಂದ್ಯ ಟೈ ಆದರೂ ಅವರ ಕ್ರೀಡಾ ಸ್ಪೂರ್ತಿ ಮತ್ತು ತಾಳ್ಮೆಯನ್ನು ಮೆಚ್ಚಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅವರು, ನಾನೂ ಕೂಡ ವೀರೂ ಪ್ರತಿಪಾದನೆಯನ್ನು ಒಪ್ಪುತ್ತೇನೆ, ಕೇನ್ ವಿಲಿಯಮ್ಸನ್ ತಮ್ಮ ಅದ್ಭುತ ಕ್ರೀಡಾ ಸ್ಪೂರ್ತಿ ಮೂಲಕ ಕ್ರಿಕೆಟ್ ನ ಉತ್ತಮ ರಾಯಭಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಫೈನಲ್ ಪಂದ್ಯ ಟೈ ಅಲ್ಲ ಎಂದು ವಾನ್ ಟ್ವೀಟ್ ಮಾಡಿದ್ದಾರೆ.
ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಕಿವೀಸ್ ತಂಡವನ್ನು ಮಣಿಸಿ ಇಂಗ್ಲೆಂಡ್ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿ ಸಂಭ್ರಮಿಸಿತ್ತು. ಎರಡೂ ತಂಡಗಳು 50 ಓವರ್ ಗಳಲ್ಲಿ 241 ರನ್ ಬಾರಿಸಿದ್ದವು. ಇದಾದ ಬಳಿಕ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ ನಲ್ಲೂ ಎರಡೂ ತಂಡಗಳು 15-15 ರನ್ ಬಾರಿಸಿದ್ದವು. ಐಸಿಸಿ ನಿಯಮದಂತೆ ಸೂಪರ್ ಓವರ್ ಟೈ ಆಗಿದ್ದರಿಂದ, ಇಂಗ್ಲೆಂಡ್ 50 ಓವರ್ ಗಳಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿತ್ತು. ನ್ಯೂಜಿಲೆಂಡ್ 16 ಬೌಂಡರಿ ಬಾರಿಸಿದರೆ, ಇಂಗ್ಲೆಂಡ್ 24 ಬಾರಿ ಚೆಂಡಿಗೆ ಬೌಂಡರಿ ಗೆರೆಯ ದರ್ಶನವನ್ನು ಮಾಡಿಸಿತ್ತು. ಈ ಅಂಕಿ ಅಂಶಗಳ ಆಧಾರದ ಮೇಲೆ ಮಾರ್ಗನ್ ಪಡೆ ಜಯ ಸಾಧಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com