ವಿರಾಟ್ ಕೊಹ್ಲಿ ಗುಣಗಾನ ಮಾಡಿದ ದೀಪಕ್‌ ಚಾಹರ್‌

ಅಜೇಯ ಅರ್ಧ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾದ ನಾಯಕ ವಿರಾಟ್ ಕೊಹ್ಲಿ ಅವರನ್ನು ಯುವ ವೇಗಿ ದೀಪಕ್‌ ಚಾಹರ್‌ ಗುಣಗಾನ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೊಹಾಲಿ: ಅಜೇಯ ಅರ್ಧ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾದ ನಾಯಕ ವಿರಾಟ್ ಕೊಹ್ಲಿ ಅವರನ್ನು ಯುವ ವೇಗಿ ದೀಪಕ್‌ ಚಾಹರ್‌ ಗುಣಗಾನ ಮಾಡಿದ್ದಾರೆ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತ್ತು. ಇದಕ್ಕೆ ಉತ್ತರ ನೀಡಿದ ಭಾರತ ತಂಡ, ನಾಯಕ ವಿರಾಟ್‌ ಕೊಹ್ಲಿ ಅವರ ಅಜೇಯ 72 ರನ್‌ಗಳ ನೆರವಿನಿಂದ ಮೂರು ವಿಕೆಟ್‌ ಕಳೆದುಕೊಂಡು 151 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಆ ಮೂಲಕ ಮೂರು ಪಂದ್ಯಗಳ ಚುಟುಕು ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.

ಪಂದ್ಯದ ಬಳಿಕ ಮಾತನಾಡಿದ ದೀಪಕ್ ಚಹರ್ ತಮ್ಮ ತಂಡದ ಪ್ರದರ್ಶನದ ಕುರಿತು ಮಾತನಾಡಿದರು. ಯಾವುದೇ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪಾತ್ರವಹಿಸಿದರೆ ನಮ್ಮ ಆತ್ಮ ವಿಶ್ವಾಸ ಇಮ್ಮಡಿಯಾಗುತ್ತದೆ. ಈ ಸಾಮರ್ಥ್ಯ ಐಪಿಎಲ್ ನಿಂದಲೇ ಬಂದಿತ್ತು. ಐಪಿಎಲ್ ಸಾಕಷ್ಟು ನೆರವು ನೀಡಿತು ಎಂದು ಹೇಳಿದರು. ಇದೇ ವೇಳೆ ಟಿ20ನ ವಿಶ್ವಕಪ್ ಕುರಿತು ಮಾತನಾಡಿದ ಚಹರ್, ವಿಶ್ವಕಪ್ ಟೂರ್ನಿಗೆ ಇನ್ನೂ ಒಂದು ವರ್ಷ ಮಾತ್ರ ಬಾಕಿ ಇದೆ. ಹೀಗಾಗಿ ನಾವು ಆಡುವ ಪ್ರತೀಯೊಂದು ಪಂದ್ಯವನ್ನೂ ಕೊನೆಯ ಪಂದ್ಯ ಎಂಬಂತೆ ಆಡಬೇಕು ಎಂದು ಹೇಳಿದರು.

ಇನ್ನು ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ನಾಯಕ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ಚಹರ್, ಕೊಹ್ಲಿ ಮುಂದಿನ ಹಂತದ ಆಟಗಾರ. ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ ಕೊಹ್ಲಿ ಹೇಗೆ ಇಷ್ಟೊಂದು ರನ್ ಗಳಿಸಿದರು ಎಂದು. ಪ್ರತೀ ಪಂದ್ಯದಲ್ಲೂ ಸ್ಥಿರತೆ ಕಾಪಾಡಿಕೊಳ್ಳುವುದು ಯಾವುದೇ ಆಟಗಾರನಿಗೂ ಕಷ್ಟ ಸಾಧ್ಯ. ಆದರೆ ಅದು ಕೊಹ್ಲಿಗೆ ಕರಗತವಾಗಿದೆ ಎಂದು ಹೇಳಿದರು.

ಇನ್ನು ನಿನ್ನೆಯ ಪಂದ್ಯದಲ್ಲಿ ದೀಪಕ್ ಚಹರ್ 22 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು. ಅಮೋಘ ಬ್ಯಾಟಿಂಗ್‌ ಮಾಡಿದ ನಾಯಕ ವಿರಾಟ್‌ ಕೊಹ್ಲಿ 52 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 72 ರನ್‌ ಸಿಡಿಸಿದರು. ಆ ಮೂಲಕ ಟಿ-20 ಕ್ರಿಕೆಟ್‌ನಲ್ಲಿ 2,441 ರನ್‌ ಪೂರೈಸಿದರು.  ಅಲ್ಲದೇ, ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ಭಾಜನರಾಗುವ ಮೂಲಕ ಸಹ ಆಟಗಾರ ರೋಹಿತ್‌ ಶರ್ಮಾ(2,434 ರನ್‌) ಅವರ ದಾಖಲೆ ಹಿಂದಿಕ್ಕಿದರು. ಜತೆಗೆ, ಟೆಸ್ಟ್‌, ಏಕದಿನ ಹಾಗೂ ಟಿ-20 ಮೂರೂ ಮಾದರಿಯಲ್ಲಿ ಶೇ. 50 ರಷ್ಟು ಸರಾಸರಿ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com