
ಕರಾಚಿ: ಹಾಲಿ ಕ್ರಿಕೆಟಿಗರ ಪೈಕಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಪೀಳಿಗೆಯ ಲೆಜೆಂಡ್ ಆಟಗಾರ ಎನ್ನಬಹುದು ಎಂದು ಪಾಕಿಸ್ತಾನದ ಕ್ರಿಕೆಟ್ ದಂತಕಥೆ ಮೊಯಿನ್ ಖಾನ್ ಹೇಳಿದ್ದಾರೆ.
ಜಿಸ್ಪೋರ್ಟ್ಸ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮೋಯಿನ್ ಖಾನ್, ಪ್ರಸ್ತುತ ಪೀಳಿಗೆಯ ಕ್ರಿಕೆಟಿಗರಲ್ಲಿ ಲೆಜೆಂಡ್ ಆಟಗಾರ ಎನಿಸಿಕೊಳ್ಳುವ ಗುಣ ಮತ್ತು ಸಾಮರ್ಥ್ಯ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮಾತ್ರವಿದೆ. ಕೊಹ್ಲಿ ಇನ್ನೂ ಸಾಕಷ್ಟು ದಾಖಲೆಗಳನ್ನು ಪುಡಿಗಟ್ಟಿ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿ ಮುಂದಿನ ಪೀಳಿಗೆಯ ಆಟಗಾರರಿಗೆ ಲೆಜೆಂಡ್ ಆಟಗಾರರಾಗಿ ಉಳಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳ ಪಾಕಿಸ್ತಾನ ತಂಡದ ನಿರ್ವಹಣೆ ಕುರಿತು ಟೀಕಿಸಿದ ಮೋಯಿನ್ ಖಾನ್, ಈಗಿನ ಪಾಕ್ ತಂಡದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಮಸ್ಯೆ ಎಲ್ಲ ತಂಡಗಳಿಗೂ ಇರುತ್ತವೆ. ಆದರೆ ಹಾಲಿ ಪಾಕಿಸ್ತಾನ ತಂಡದಲ್ಲಿ 80-90ರ ದಶಕದಲ್ಲಿದ್ದಂತೆ ಹೇಳಿಕೊಳ್ಳುವಂತ ಮ್ಯಾಚ್ ಫಿನಿಶರ್ ಗಳು, ಪಂದ್ಯ ಗೆಲ್ಲಿಸಿಕೊಡಬಲ್ಲ ವಿನ್ನರ್ ಗಳ ಕೊರತೆ ಇದೆ ಎಂದು ಹೇಳಿದರು. ಅಂತೆಯೇ ತಾವು ಪಾಕ್ ತಂಡದ ಆಯ್ಕೆಗಾರರಾಗಿದ್ದಾಗಲೂ ಪಾಕಿಸ್ತಾನ ತಂಡ ಭಾರತದ ವಿರುದ್ಧ ವೈಫಲ್ಯವನ್ನು ಅನುಭವಿಸಿತ್ತು. ಅದಕ್ಕೆ ಕಾರಣ ಎಂಎಸ್ ಧೋನಿಯಂತಹ ಮ್ಯಾಚ್ ಫಿನಿಶರ್ ಗಳು. ನಿಜಕ್ಕೂ ಧೋನಿಯನ್ನು ನಾನು ಶ್ಲಾಘಿಸಲೇಬೇಕು. ಭಾರತ ಕ್ರಿಕೆಟ್ ತಂಡದ ವರ್ಚಸ್ಸನ್ನೇ ಬದಲಿಸಿ ಬಿಟ್ಟರು ಎಂದು ಹೇಳಿದರು.
ಇದೇ ವೇಳೆ ಪಾಕ್ ತಂಡದ ಕೋಚ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ವಿರುದ್ಧ ಕಿಡಿಕಾರಿದ ಮೋಯಿನ್ ಖಾನ್, ಒಂದು ಜವಾಬ್ದಾರಿಯಿಂದ ಮತ್ತೊಂದು ಜವಾಬ್ದಾರಿ ಭಿನ್ನವಾಗಿರುತ್ತದೆ. ಯಾವುದೇ ಕ್ರಿಕೆಟ್ ಆಡುವ ದೇಶದಲ್ಲೂ ಇಂತಹ ಪ್ರಯೋಗ ಯಶಸ್ವಿಯಾಗಿಲ್ಲ. ಹೀಗಿದ್ದೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಪಾಯವನ್ನು ತನ್ನ ಮೇಲೆಳೆದುಕೊಂಡಿದೆ. ಇಂತಹ ಪರಿಸ್ಛಿತಿಯಲ್ಲಿ ಆಟಗಾರರ ಮನಃಸ್ಥಿತಿ ಹೇಗಿರುತ್ತದೆ ಎಂಬುದನ್ನು ನೀವೇ ಊಹೆ ಮಾಡಬಹುದು. 2015ರಲ್ಲಿ ನಜಂಸೇಠಿ ಅವರು ಪಿಸಿಪಿ ಅಧ್ಯಕ್ಷರಾಗಿದ್ದರು. ಆಗ ಅವರಿಗೆ ಕೋಚ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನವನ್ನೂ ನೀಡುವ ಪ್ರಸ್ತಾಪ ಬಂದಾಗ ಅವರು ಅದನ್ನು ನಯವಾಗಿ ತಿರಸ್ಕರಿಸಿದ್ದರು. ಅಲ್ಲದೆ ಇಂತಹ ಪ್ರಯೋಗ ಫಲಿಸುವುದಿಲ್ಲ ಎಂದು ಹೇಳಿದ್ದರು. ಓರ್ವ ವ್ಯಕ್ತಿಗೆ ಇದು ತುಂಬಾ ಒತ್ತಡದ ವಿಚಾರವಾಗಿರುತ್ತದೆ ಎಂದು ಮೋಯಿನ್ ಖಾನ್ ಕಿಡಿಕಾರಿದ್ದಾರೆ.
ಅಲ್ಲದೆ ಮಿಸ್ಬಾ ಉಲ್ ಹಕ್ ಅವರಿಗೆ ಈ ಕುರಿತು ಶೀಘ್ರ ಜ್ಞಾನೋದಯವಾದರೂ ಅಚ್ಚರಿ ಇಲ್ಲ ಎಂದು ಮೋಯಿನ್ ಖಾನ್ ಹೇಳಿದ್ದಾರೆ. ದಶಕಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡಿದ್ದ ಮೋಯಿನ್ ಖಾನ್ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರು.
Advertisement