ಮಹಿಳಾ ಟಿ20 ವಿಶ್ವಕಪ್: ಅಜೇಯ ಭಾರತದ ವನಿತೆಯರಿಗೆ ಫೈನಲ್ ಕನಸು

ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಅಂತಿಮ ಘಟ್ಟ ತಲುಪಿದ್ದು, ಸಿಡ್ನಿಯಲ್ಲಿ ನಾಳೆ ಸೆಮಿಫೈನಲ್ಸ್  ಪಂದ್ಯಗಳು ನಡೆಯಲಿವೆ.
ಭಾರತ ವನಿತೆಯರ ತಂಡ
ಭಾರತ ವನಿತೆಯರ ತಂಡ

ಸಿಡ್ನಿ: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಅಂತಿಮ ಘಟ್ಟ ತಲುಪಿದ್ದು, ಸಿಡ್ನಿಯಲ್ಲಿ ನಾಳೆ ಸೆಮಿಫೈನಲ್ಸ್  ಪಂದ್ಯಗಳು ನಡೆಯಲಿವೆ.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದರೆ, ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಎದುರಾಗುತ್ತಿವೆ. ಎ ಗುಂಪಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಅಜೇಯ ದಾಖಲೆ ಹೊಂದಿರುವ ಹರ್ಮನ್ ಪ್ರೀತ್ ಕೌರ್ ಬಳಗ 8 ಅಂಕಗಳೊಂದಿಗೆ ಅಗ್ರಸ್ಥಾನದೊಂದಿಗೆ ಉಪಾಂತ್ಯ ತಲುಪಿದರೆ, ಇಷ್ಟೇ ಪಂದ್ಯ ಗಳಿಂದ ಆಸ್ಟ್ರೇಲಿಯಾ 6 ಅಂಕ ಕಲೆಹಾಕಿ ನಾಲ್ಕರ ಘಟ್ಟ ಪ್ರವೇಶಿಸಿದೆ. ಅತ್ತ ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ತಂಡ ನಾಲ್ಕು ಪಂದ್ಯಗಳಲ್ಲಿ 7 ಅಂಕದೊಂದಿಗೆ ಮೊದಲ ಸ್ಥಾನದೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೇರಿದರೆ, ಇಂಗ್ಲೆಂಡ್ 6 ಅಂಕಗಳೊಂದಿಗೆ ಉಪಾಂತ್ಯಕ್ಕೇರಿದೆ.

ಲೀಗ್ ಹಂತದ ನಾಲ್ಕು ಪಂದ್ಯಗಳಲ್ಲಿಯೂ ಭಾರತೀಯ ವನಿತೆಯರು ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಬೌಲರ್‍ಗಳ ಅಮೋಘ ಪ್ರದರ್ಶನದಿಂದಲೇ ಭಾರತ ತಂಡ  ಅಜೇಯ ದಾಖಲೆ ಹೊಂದಿದೆ. ಪೂನಮ್ ಯಾದವ್ ಮತ್ತು ಶೀಖಾ ಪಾಂಡೆ ಉತ್ತಮ ಪ್ರದರ್ಶನ ನೀಡಿದ್ದು, ಕ್ರಮವಾಗಿ 9 ಮತ್ತು 7 ವಿಕೆಟ್ ಕಬಳಿಸಿದ್ದಾರೆ. ಆದರೆ ಬ್ಯಾಟಿಂಗ್ ನಲ್ಲಿ ಇದುವರೆಗೂ ಸ್ಥಿರ ಪ್ರದರ್ಶನ ಕಂಡು ಬಂದಿಲ್ಲದಿರುವುದು ಆತಂಕದ ವಿಷಯ. ಇದರ ನಡುವೆಯೂ ಶೆಫಾಲಿ ವರ್ಮಾ ಅಮೋಘ ಶ್ರೇಷ್ಠ ಲಯದಲ್ಲಿದ್ದು, ಟೂರ್ನಿಯಲ್ಲೇ ಮೂರನೇ ಅಧಿತ್ಯಕ ರನ್ ಗೆಟರ್ ಎನಿಸಿದ್ದಾರೆ. ನಾಲ್ಕು ಪಂದ್ಯಗಳಿಂದ ಶೆಫಾಲಿ 161 ರನ್ ಗಳಿಸಿದ್ದಾರೆ.

ಸಿಡ್ನಿಯಲ್ಲಿ ಗುರುವಾರ ನಡೆಯಲಿರುವ ಸೆಮಿಫೈನಲ್ಸ್  ಪಂದ್ಯಗಳಿಗೆ ಮಳೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ.ಇಲ್ಲಿನ ಹವಾಮಾನ ಇಲಾಖೆ ಕನಿಷ್ಠ 5.15ಎಂಎಂ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಹಿಂದಿನ ಎರಡು ದಿನಗಳ ಕಾಲ ಇಲ್ಲಿ ಸುರಿದ ಮಳೆಯಿಂದಾಗಿ ಬಿ ಗುಂಪಿನ ಎರಡು ಪಂದ್ಯಗಳು ರದ್ದಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಸೆಮಿಫೈನಲ್ಸ್  ಪಂದ್ಯಗಳ ಮೇಲೆ ವರುಣನ ಅವಕೃಪೆ ಬಿದ್ದಿದೆ. ಒಂದು ವೇಳೆ  ಮಳೆಯಿಂದ ಪಂದ್ಯಗಳಿಗೆ ಅಡ್ಡಿಯಾದರೆ ತಲಾ 10 ಓವರ್ ಗಳಿಗೆ ಕಡಿತಗೊಳಿಸಲಾಗುತ್ತದೆ. ಮೊದಲ ಪಂದ್ಯ ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಬೇಕಿದ್ದು, ದ್ವಿತೀಯ ಪಂದ್ಯ ರಾತ್ರಿ 10 ಗಂಟೆಯೊಳಗೆ ಪೂರ್ಣಗೊಳ್ಳಬೇಕಿದೆ.

ಒಂದು ವೇಳೆ ಸೆಮಿಫೈನಲ್ಸ್  ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಗ್ರೂಪ್ ಹಂತದಲ್ಲಿ ಅಗ್ರಸ್ಥಾನ ಪಡೆದಿರುವ ತಂಡಗಳು ಫೈನಲ್ ಗೆ ನೇರ ಅರ್ಹತೆ ಹೊಂದಲಿವೆ. ಪ್ರಸ್ತುತ ಎ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿರುವ ಭಾರತ ಮತ್ತು ಬಿ ಗುಂಪಿನಲ್ಲಿ ಮೊದಲ ಸ್ಥಾನ ಹೊಂದಿರುವ ದಕ್ಷಿಣ ಆಫ್ರಿಕಾ ಫೈನಲ್ ಗೆ ಅರ್ಹತೆ ಹೊಂದುವ ಅವಕಾಶ ಹೊಂದಿವೆ. ಒಂದು ವೇಳೆ ಭಾನುವಾರ ನಿಗದಿಯಾಗಿರುವ ಫೈನಲ್ ಪಂದ್ಯ ಕೂಡ ಮಳೆಯಿಂದಾಗಿ ರದ್ದಾದರೆ ಸೋಮವಾರ ಮೀಸಲು ದಿನ ಕಾಯ್ದಿರಿಸಲಾಗಿದೆ. ಆದರೆ ಎಂಸಿಜಿ ಕ್ರೀಡಾಂಗಣ ಸುತ್ತಮುತ್ತ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂಗ್ಲೆಂಡ್ ಸಂಭಾವ್ಯ ತಂಡ: ಹೇದರ್ ನೈಟ್(ನಾಯಕಿ), ಅನ್ಯ ಶ್ರುಬ್ ಸೋಲ್, ಡೇನಿಯಲ್ ವೇಟ್, ತಮಿ ಬೀಮಾಂಟ್, ಕೇಥೆರಿನ್ ಬ್ರುಂಟ್, ಅಮಿ ಎಲೆನ್ ಜೋನ್ಸ್  (ವಿಕೆಟ್ ಕೀಪರ್  ), ನತಾಲೀ ಕ್ಸೇವಿಯರ್, ಫ್ರಾನ್ ವಿಲ್ಸನ್, ಸೋಫೀ ಎಕ್ಲೆಸ್ಟೋನ್ ಸರಾ ಗ್ಲೆನ್, ಮ್ಯಾಡಿ ವಿಲ್ಲೀರ್ಷ್.

ಭಾರತ ಸಂಭಾವ್ಯ ತಂಡ: ಹರ್ಮನ್ ಪ್ರೀತ್ ಕೌರ್  (ನಾಯಕಿ), ಸ್ಮೃತಿ   ಮಂಧಾನ, ಶೀಖಾ ಪಾಂಡೆ, ಪೂನಮ್ ಯಾದವ್, ರಾಜೇಶ್ವರಿ ಗಾಯಕ್ವಾಡ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ಜೇಮಿಮಾ ರೋಡ್ರಿಗಸ್, ತಾನಿಯಾ ಭಾಟಿಯಾ(ವಿಕೆಟ್ ಕೀರ್ಪ), ರಾಧಾ ಯಾದವ್, ಶೆಫಾಲಿ ವರ್ಮಾ.

ಮಾರ್ಚ್ 5 (ಮೊದಲ ಸೆಮಿಫೈನಲ್)
ಭಾರತ - ಇಂಗ್ಲೆಂಡ್ (ಪಂದ್ಯ ಆರಂಭ-ಬೆಳಗ್ಗೆ 9.30ಕ್ಕೆ)

ಮಾರ್ಚ್ 5 (ದ್ವಿತೀಯ ಸೆಮಿಫೈನಲ್)
ಆಸ್ಟ್ರೇಲಿಯಾ -ದಕ್ಷಿಣ ಆಫ್ರಿಕಾ (ಪಂದ್ಯ ಆರಂಭ-ಮಧ್ಯಾಹ್ನ 1.30ಕ್ಕೆ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com