ರನೌಟ್‌ ಆದ ಬಳಿಕ ಅಜಿಂಕ್ಯ ರಹಾನೆ ವರ್ತನೆಗೆ ಫ್ಯಾನ್ಸ್ ಫಿದಾ, ಫೋಟೋ ವೈರಲ್!

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಅಡಿಲೇಡ್‌ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರನೌಟ್‌ ಮಾಡಿಸಿದ್ದ ಅಜಿಂಕ್ಯ ರಹಾನೆ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದರು.
ರಹಾನೆ-ಜಡೇಜಾ
ರಹಾನೆ-ಜಡೇಜಾ

ಮೆಲ್ಬೋರ್ನ್‌: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಅಡಿಲೇಡ್‌ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರನೌಟ್‌ ಮಾಡಿಸಿದ್ದ ಅಜಿಂಕ್ಯ ರಹಾನೆ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದರು. ಆದರೆ, ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ತಾನೇ ರನೌಟ್‌ ಆದರೂ ರವೀಂದ್ರ ಜಡೇಜಾ ಅವರ ಬಳಿ ತೆರಳಿ ಸನ್ನೆ ಮಾಡುವ ಮೂಲಕ ಬೆಂಬಲಿಸಿ ಅಭಿಮಾನಿಗಳ ಹೃದಯ ಗೆದ್ದರು. 

ಮೊದಲನೇ ಟೆಸ್ಟ್ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ್ದ ಅಜಿಂಕ್ಯ ರಹಾನೆಗೆ, ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಸಾಕಷ್ಟು ಒತ್ತಡ ಇತ್ತು. ಅದರಂತೆ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ್ದ ರಹಾನೆ, ಬ್ಯಾಟಿಂಗ್‌ನಲ್ಲಿಯೂ ಮಿಂಚಿದರು. ಟೆಸ್ಟ್ ವೃತ್ತಿ ಬದುಕಿನ 12ನೇ ಶತಕ ಪೂರೈಸಿದರು. 223 ಎಸೆತಗಳನ್ನು ಎದುರಿಸಿದ್ದ ಅವರು 112 ರನ್‌ ಗಳಿಸಿ ರನೌಟ್‌ ಆದರು.

ಅಜೇಯ 104 ರನ್‌ಗಳೊಂದಿಗೆ ಮೂರನೇ ದಿನ ಬ್ಯಾಟಿಂಗ್‌ ಇಳಿದ ಅಜಿಂಕ್ಯಾ ರಹಾನೆ ಎರಡನೇ ದಿನದ ಲಯವನ್ನು ಮುಂದುವರಿಸಿದ್ದರು. ಆದರೆ, 49 ರನ್‌ ಗಳಿಸಿ ಆಡುತ್ತಿದ್ದ ರವೀಂದ್ರ ಜಡೇಜಾ, ನೇಥನ್‌ ಲಯಾನ್‌ ಎಸೆತದಲ್ಲಿ ಆಫ್‌ ಸೈಡ್‌ ಚೆಂಡನ್ನು ಹೊಡೆದರು. ಈ ವೇಳೆ ತ್ವರಿತವಾಗಿ ಸಿಂಗಲ್‌ ಪಡೆದು ಅರ್ಧಶತಕ ಪೂರೈಸುವಂತೆ ಜಡೇಜಾಗೆ ರಹಾನೆ ಪ್ರೇರೇಪಿಸಿದರು. ಆದರೆ ತಾನು ಕ್ರೀಸ್‌ಗೆ ತಲುಪದೆ ಕೂದಲೆಳೆಯ ಅಂತರದಲ್ಲಿ ರನೌಟ್‌ ಆದರು.

ಈ ವೇಳೆ ಜಡೇಜಾ ಕೂಡ ಕಷ್ಟದ ರನ್‌ಗೆ ಓಡಲು ನಿರಾಕರಿಸಲಿಲ್ಲ. ಆದರೂ, ಅಜಿಂಕ್ಯ ರಹಾನೆ ಎಡಗೈ ಬ್ಯಾಟ್ಸ್‌ಮನ್‌ ರವೀಂದ್ರ ಜಡೇಜಾ ಅವರನ್ನು ಬೆಂಬಲಿಸಿದರು. ಹಂಗಾಮಿ ನಾಯಕನ ಕ್ರೀಡಾ ಸ್ಪೂರ್ತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಟೊ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ.

ರನ್‌ ಓಡುವ ವೇಳೆ ಅಜಿಂಕ್ಯ ರಹಾನೆ ಬ್ಯಾಟ್‌ ಕ್ರೀಸ್‌ ಲೈನ್‌ ಮೇಲಿತ್ತು. ಈ ಕಾರಣದಿಂದಾಗಿ ಬೇಲ್ಸ್ ಕೆಳಗೆ ತಳ್ಳಿದ್ದ ಟಿಮ್‌ ಪೇಯ್ನ್‌ಗೂ ರನೌಟ್‌ ಬಗ್ಗೆ ವಿಶ್ವಾಸವಿರಲಿಲ್ಲ. ಹಾಗಾಗಿ, ರಹಾನೆ ಸುರಕ್ಷಿತರಾಗಿದ್ದಾರೆಂದೇ ಎಲ್ಲರೂ ಭಾವಿಸಿದ್ದರು. ಆದರೆ, ಥರ್ಡ್ ಅಂಪೈರ್‌ ಮೂಲಕ ರೀಪ್ಲೇನಲ್ಲಿ ರಹಾನೆ ಬ್ಯಾಟ್‌ ಲೈನ್‌ ಮೇಲಿರುವುದು ಸ್ಪಷ್ಟವಾಗಿತ್ತು. ಆದರೂ ಬಲಗೈ ಬ್ಯಾಟ್ಸ್‌ಮನ್‌ ಔಟ್‌ ಎಂದು ಘೋಷಿಸಲಾಯಿತು.

ಅಂಗಳದ ದೊಡ್ಡ ಪರದೆಯಲ್ಲಿ ರನೌಟ್‌ ಎಂದು ಘೋಷಣೆಯಾಗುತ್ತಿದ್ದಂತೆ ರಹಾನೆ, ಜಡೇಜಾ ಬಳಿ ತೆರಳಿ ಅವರನ್ನು ಸ್ಪರ್ಶಿಸಿ ಬೆಂಬಲಿಸಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ರಹಾನೆ ಈ ಮನೋಭಾವಕ್ಕೆ ಅಭಿಮಾನಿಗಳು ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com