ಕಿವೀಸ್ ವಿರುದ್ಧ ದುಬಾರಿ ಬೌಲಿಂಗ್: ಕೆಟ್ಟ ದಾಖಲೆ ಬರೆದ ಶಿವಂ ದುಬೆ

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ಗೆದ್ದು ಭಾರತ ತಂಡ ಸರಣಿ ಕ್ಲೀನ್ ಸ್ವೀಪ್ ಮಾಡಿದೆಯಾದರೂ, ಇದೇ ಪಂದ್ಯದಲ್ಲಿ ಭಾರತದ ಪ್ರಮುಖ ಬೌಲರ್ ಶಿವಂ ದುಬೆ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ಗೆದ್ದು ಭಾರತ ತಂಡ ಸರಣಿ ಕ್ಲೀನ್ ಸ್ವೀಪ್ ಮಾಡಿದೆಯಾದರೂ, ಇದೇ ಪಂದ್ಯದಲ್ಲಿ ಭಾರತದ ಪ್ರಮುಖ ಬೌಲರ್ ಶಿವಂ ದುಬೆ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಮೌಂಟ್ ಮಾಂಗನುಯಿಯಲ್ಲಿ ನಿನ್ನೆ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡದ ಆಲ್‍ರೌಂಡರ್ ಶಿವಂ ದುಬೆ ಕೆಟ್ಟ ದಾಖಲೆಗೆ ಗುರಿಯಾಗಿದ್ದಾರೆ. ನ್ಯೂಜಿಲೆಂಡ್ ಇನ್ನಿಂಗ್ಸ್ ನ 10ನೇ ಓವರಿನಲ್ಲಿ ಬೌಲಿಂಗ್ ಮಾಡಿದ ಶಿವಂ ದುಬೆ ಕ್ರಮವಾಗಿ 6, 6, 4, 1, ನೋಬಾಲ್ + 4, 6 ಹಾಗೂ 6 ಸೇರಿ ಒಟ್ಟು 34 ರನ್ ನೀಡಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಶಿವಂ ದುಬೆ ಎರಡನೇ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಒಂದೇ ಓವರ್ ನಲ್ಲಿ ದುಬಾರಿ ರನ್ ನೀಡಿದ ಭಾರತದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಶಿವಂ ದುಬೆಗೂ ಮೊದಲು ಸ್ಟುವರ್ಟ್ ಬಿನ್ನಿ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 32 ರನ್ ನೀಡಿದ್ದರು. ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದ ಬೌಲರ್‍ಗಳ ಪಟ್ಟಿಯಲ್ಲಿ ಇಂಗ್ಲೆಂಡ್‍ನ ಸ್ಟುವರ್ಟ್ ಬ್ರಾಡ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 2007ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ 36 ರನ್ ನೀಡಿದ್ದರು. ಅಂದು ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ಇದು ಈ ವರೆಗಿನ ಕಳಪೆ ಬೌಲಿಂಗ್ ಆಗಿದೆ.

ಇನ್ನು ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಎಜತುಲ್ಲಾ ದೌಲತ್ ಜೈ ಇಂಗ್ಲೆಂಡ್ ವಿರುದ್ಧ 2012ರಲ್ಲಿ ನಡೆದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 32 ರನ್ ನೀಡಿದ್ದರು. ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ ಇಂಗ್ಲೆಂಡ್ ವಿರುದ್ಧ 2012ರಲ್ಲಿ 32ರನ್ ನೀಡಿದ್ದರೆ, ಭಾರತದ ಸ್ಟುವರ್ಟ್ ಬಿನ್ನಿ ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ 32 ರನ್ ನೀಡಿದ್ದರು. ಹಾಗೂ ಮ್ಯಾಕ್ಸ್ ಒ’ಡೌಡ್ ಜಿಂಬಾಬ್ವೆ ಸ್ಕಾಟ್ಲೆಂಡ್ ವಿರುದ್ಧ 2019ರಲ್ಲಿ 32 ರನ್ ನೀಡಿದ್ದರು. 

 ಇನ್ನು ಶಿವಂ ದುಬೆ ಅವರ ಕಳಪೆ ಬೌಲಿಂಗ್ ಪ್ರದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದು, ಟ್ವೀಟಿಗರು ದುಬೆ ವಿರುದ್ಧ ಕಿಡಿಕಾರುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com