ಕನ್ನಡಿಗ ರಾಹುಲ್ ಆಕರ್ಷಕ ಶತಕ: ಕಿವೀಸ್‌ಗೆ 297 ರನ್ ಗುರಿ ನೀಡಿದ ಕೊಹ್ಲಿ ಪಡೆ

ಆರಂಭಿಕ ಆಘಾತದ ನಡುವೆಯೂ ಕನ್ನಡಿಗ ಕೆ.ಎಲ್ ರಾಹುಲ್ (112 ರನ್, 113 ಎಸೆತಗಳು) ವೃತ್ತಿ ಜೀವನದ ನಾಲ್ಕನೇ ಶತಕ ಹಾಗೂ ಶ್ರೇಯಸ್ ಅಯ್ಯರ್ (62 ರನ್, 63 ಎಸೆತಗಳು) ಅವರ ಅರ್ಧಶತಕದ ಬಲದಿಂದ ಭಾರತ ತಂಡ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್

ಮೌಂಟ್‌ಮೌಂಗಾನುಯಿ: ಆರಂಭಿಕ ಆಘಾತದ ನಡುವೆಯೂ ಕನ್ನಡಿಗ ಕೆ.ಎಲ್ ರಾಹುಲ್ (112 ರನ್, 113 ಎಸೆತಗಳು) ವೃತ್ತಿ ಜೀವನದ ನಾಲ್ಕನೇ ಶತಕ ಹಾಗೂ ಶ್ರೇಯಸ್ ಅಯ್ಯರ್ (62 ರನ್, 63 ಎಸೆತಗಳು) ಅವರ ಅರ್ಧಶತಕದ ಬಲದಿಂದ ಭಾರತ ತಂಡ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ನಿಗದಿತ 50 ಓವರ್‌ಗಳಿಗೆ ಏಳು ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದ್ದು, ಕಿವೀಸ್‌ಗೆ 297 ರನ್ ಗುರಿ ನೀಡಿದೆ. ತಂಡದ ಮೊತ್ತ ಕೇವಲ 8 ರನ್ ಗಳಾಗಿದ್ದಾಗಲೇ ಕಿವೀಸ್ ಪಡೆ ಆರಂಭಿಕ ಆಘಾತ ನೀಡಿತು. 1 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ಜೇಮೀಸನ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಕೂಡ ಕೇವಲ 9 ರನ್ ಗಳಿಸಿ ಬೆನೆಟ್ ಗೆ ವಿಕೆಟ್ ಒಪ್ಪಿಸಿದರು.

ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಈ ಹಂತದಲ್ಲಿ ಪೃಥ್ವಿ ಶಾ ಜೊತೆಗೂಡಿದ ಶ್ರೇಯಶ್ ಅಯ್ಯರ್ ತಂಡವನ್ನು ಆಘಾತದಿಂದ ಮೇಲೆತ್ತುವ ಕಾರ್ಯ ಮಾಡಿದರು. ಈ ಜೋಡಿ 30 ರನ್ ಗಳ ಜೊತೆಯಾಟವಾಡಿತು. ಇನ್ನೇನು ಈ ಜೋಡಿ ಗಟ್ಟಿಯಾಗಿ ಕ್ರೀಸ್ ಗೆ ಅಂಟಿಕೊಳ್ಳುತ್ತದೆ ಎನ್ನುವಾಗಲೇ 40 ರನ್ ಗಳಿಸಿ ಅರ್ಧಶತಕದತ್ತ ದಾಪುಗಾಲಿರಿಸಿದ್ದ ಪೃಥ್ವಿ ಶಾ ರನೌಟ್ ಗೆ ಬಲಿಯಾದರು. ಬಳಿಕ ಅಯ್ಯರ್ ಜೊತೆಗೂಡಿದ ಕನ್ನಡಿಗ ಕೆಎಲ್ ರಾಹುಲ್ ಅಕ್ಷರಶಃ ಕಿವೀಸ್ ಬೌಲರ್ ಗಳನ್ನು ಕಾಡಿದರು. ಈ ಜೋಡಿ ಶತಕದ ಜೊತೆಯಾಟ ಆಡಿದ್ದು ಮಾತ್ರವಲ್ಲದೇ ಶ್ರೇಯಸ್ ಅಯ್ಯರ್ ಅರ್ಧಶತಕವನ್ನೂ ಸಿಡಿಸಿದರು. 31ನೇ ಓವರ್ ನಲ್ಲಿ 62 ರನ್ ಗಳಿಸಿದ್ದ ಅಯ್ಯರ್ ನೀಶಮ್ ಗೆ ವಿಕೆಟ್ ಒಪ್ಪಿಸಿದರು.

ಕನ್ನಡಿಗರ ಜುಗಲ್ ಬಂದಿ
ಬಳಿಕ ಕ್ರೀಸ್ ಗೆ ಬಂದ ಮತ್ತೋರ್ವ ಕನ್ನಡಿಗ ಮನೀಶ್ ಪಾಂಡೆ, ಕೆಎಲ್ ರಾಹುಲ್ ಜೊತೆಗೂಡ ಭಾರತದ ಇನ್ನಿಂಗ್ಸ್ ಗೆ ವೇಗ ತಂದಿತ್ತರು. ಈ ಜೋಡಿ ಕೂಡ ಶತಕ ಜೊತೆಯಾಟವಾಡಿತು. ಇದೇ ಸಂದರ್ಭದಲ್ಲಿ ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿದರು. ಕೇವಲ 113 ಎಸೆತಗಳಲ್ಲಿ ರಾಹುಲ್ 9 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಗಳ ಮೂಲಕ 112 ರನ್ ಸಿಡಿಸಿದರು. ಆ ಮೂಲಕ ವೃತ್ತಿ ಜೀವನದ ನಾಲ್ಕನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದರು. ಆ ಬಳಿಕ ಬೆನೆತ್ ಬೌಲಿಂಗ್ ನಲ್ಲಿ ರಾಹುಲ್ ನಿರ್ಗಮಿಸಿದರೆ, ಅದೇ ಓವರ್ ನಲ್ಲೇ 42 ರನ್ ಗಳಿಸಿದ್ದ ಮನೀಶ್ ಪಾಂಡೇ ಕೂಡ ಔಟಾದರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿ, ಕಿವೀಸ್ ಗೆ ಗೆಲ್ಲಲು 297 ರನ್ ಗಳ ಗುರಿ ನೀಡಿದೆ.

ಕಿವೀಸ್ ಪರ ಬೆನೆತ್ 4 ವಿಕೆಟ್ ಪಡೆದು ಮಿಂಚಿದರೆ, ಜೆಮೀಸನ್ ಮತ್ತು ನೀಶಮ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com