ಅಚ್ಚರಿ: ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಬಳಿ ಧೋನಿ ಮಾಡಿದ್ದ ಸಾಲ ತೀರಿಸಿದ ಅಭಿಮಾನಿಗಳು..! ಎಷ್ಟು ಗೊತ್ತಾ?

ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿಕೊಂಡಿದ್ದ ಸಾಲವನ್ನು ಅವರ ಅಭಿಮಾನಿಗಳು ತೀರಿಸಿದ ಘಟನೆ ಬೆಳಕಿಗೆ ಬಂದಿದೆ.
ಎಂಎಸ್ ಧೋನಿ
ಎಂಎಸ್ ಧೋನಿ

ಚೆನ್ನೈ: ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿಕೊಂಡಿದ್ದ ಸಾಲವನ್ನು ಅವರ ಅಭಿಮಾನಿಗಳು ತೀರಿಸಿದ ಘಟನೆ ಬೆಳಕಿಗೆ ಬಂದಿದೆ.

ಅರೇ ಇದೇನಿದು... ಅಂತಾರಾಷ್ಟ್ರೀಯ ಕ್ರಿಕೆಟ್ ಇತ್ತೀಚೆಗಷ್ಟೇ ನಿವೃತ್ತಿಯಾಧ ಧೋನಿ ಸಾಲ ಮಾಡಿಕೊಂಡಿದ್ದಾರಾ..? ಆ ಸಾಲವನ್ನು ತೀರಿಸಲಾಗದೇ ಅಭಿಮಾನಿಗಳು ತೀರಿಸಿದ್ದಾರೆಯೇ? ಧೋನಿಗೆ ಇಂತಹ ದುಃಸ್ಥಿತಿ ಬಂದಿತೇ ಎಂಬ ಪ್ರಶ್ನೆ ನಿಮ್ಮ ತಲೆಯೊಳಗೆ ಹುಟ್ಟಿರಬಹುದು. ಆದರೆ ಇದು ನಿಜ.. ಸ್ವತಃ  ಜಾರ್ಖಂಡ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಮಾಹಿತಿ ನೀಡಿದ್ದು, ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿರುವ ದಾಖಲಾತಿಗಳ ಅನ್ವಯ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿ 1800 ರೂ ಸಾಲವಿದೆ. ಜಾರ್ಖಂಡ್ ರಾಜ್ಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಉಲ್ಲೇಖವಿದ್ದು, ಧೋನಿ ಹೆಸರಿನಲ್ಲಿ  1800 ರೂ ಸುಸ್ತಿ ಬಾಕಿ ಇದೆಯಂತೆ. ಆದರೆ ಅಧಿಕಾರಿಗಳು ಯಾವ ಕಾರಣಕ್ಕೆ ಸಾಲವಿದೆ ಎಂದು ಹೇಳಲು ನಿರಾಕರಿಸಿದ್ದಾರೆ.

ಈ ಬಗ್ಗೆ JSCA ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಇದೆಲ್ಲ ಶುದ್ದ ಸುಳ್ಳು ಎಂದಿದ್ದಾರೆ. ಅಂದಹಾಗೆ ಧೋನಿ ಕೂಡಾ JSCA ಸದಸ್ಯರಾಗಿದ್ದಾರೆ. 1800 ರುಪಾಯಿ ಬಾಕಿ ಧೋನಿಗೆ ಯಾವ ಲೆಕ್ಕವೂ ಅಲ್ಲ. ಆದರೆ JSCA ರಿಪೋರ್ಟ್ ಬಳಿಕ ಇದಕ್ಕೆ ಮತ್ತಷ್ಟು ತೂಕ ಬಂದಂತಾಗಿದೆ ಎಂದು ಹೇಳಿದ್ದಾರೆ.

ಸಾಲ ತೀರಿಸಿದ ಅಭಿಮಾನಿಗಳು
ಅತ್ತ ಧೋನಿ ಸಾಲದ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಅವರ ಅಭಿಮಾನಿಗಳು JSCA ವಿರುದ್ಧ ಕಿಡಿಕಾರಿದ್ದು, ಧೋನಿ ಹೆಸರಿನಲ್ಲಿರುವ 1800 ರೂಗಳ ಸಾಲವನ್ನು ಅಭಿಮಾನಿಗಳೇ ತೀರಿಸಿದ್ದಾರೆ. ಈ ಕುರಿತ 1800 ರೂಗಳ ಡಿಡಿಯನ್ನು ಅಭಿಮಾನಿಗಳು JSCAಗೆ ತಲುಪಿಸಿದ್ದಾರೆ. ಈ ಬಗ್ಗೆ  ಮಾಹಿತಿ ನೀಡಿರುವ ಸಾಲ ತೀರಿಸಿದ ಜಮ್ಶೆಡ್ಪುರದ ಮಾಜಿ ಕ್ರಿಕೆಟಿಗರ ಸಂಘದ ವಕ್ತಾರ ಶೇಶನಾಥ ಪಾಠಕ್ ಅವರು, ಸಾಲದ ಕುರಿತು ಮಾಹಿತಿ ತಿಳಿಯುತ್ತಲೇ ನಾವು ಹಣ ಸಂಗ್ರಹಣೆಗೆ ಮುಂದಾದವು. ನಮ್ಮ ಈ ಅಭಿಯಾನಕ್ಕೆ ಶಾಲಾಮಕ್ಕಳೂ ಕೂಡ ಕೈ ಜೋಡಿಸಿದ್ದರು. ಈ ದೇಶಕ್ಕಾಗಿ ಧೋನಿ ಮಾಡಿದ ಸೇವೆ  ಎಲ್ಲರಿಗೂ ತಿಳಿದಿದೆ. ಭಾರತಕ್ಕಾಗಿ ಸಾಕಷ್ಟು ಕಪ್ ಗಳನ್ನು ತಂದಿದ್ದಾರೆ. ದೇಶ ವಿದೇಶಗಳಲ್ಲಿ ಭಾರತದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಆದರೆ ಇಂತಹ ಕ್ಷುಲ್ಲಕ ವಿಚಾರಗಳಲ್ಲಿ ಅವರ ಹೆಸರು ಎಳೆದು ತರುವುದು ಕ್ರಿಕೆಟ್ ಮಂಡಳಿಗೆ ಶೋಭೆ ತರುವುದಿಲ್ಲ. ಹೀಗಾಗಿ ಅವರಿಗಾಗಿ ನಾವು ಈ ಚಿಕ್ಕ ಕೆಲಸವನ್ನು  ಮಾಡೋಣ ಎಂದೆನಿಸಿತು. ಹೀಗಾಗಿ ಡಿಡಿ ಮೂಲಕ 1800 ರೂಗಳನ್ನು ನಾವೇ ಸಂಗ್ರಹಿಸಿ ನೀಡಿದ್ದೇವೆ. ಆದರೆ ನಾವು ನೀಡಿದ ಹಣಕ್ಕೆ ಮಂಡಳಿ ರೆಸಿಪ್ಟ್ ಕೂಡ ನೀಡಿಲ್ಲ ಎಂದು ಪಾಠಕ್ ಹೇಳಿದ್ದಾರೆ. 

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ವರ್ಷದಲ್ಲಿ ನೂರಾರು ಕೋಟಿ ರುಪಾಯಿ ಸಂಪಾದಿಸುತ್ತಾರೆ. 2013ರಲ್ಲಿ ಧೋನಿ ಅತಿಹೆಚ್ಚು ಸಂಪಾದನೆ ಮಾಡುವ ಕ್ರಿಕೆಟಿಗ ಎನಿಸಿಕೊಂಡಿದ್ದರು. ಒಂದು ವರದಿಯ ಪ್ರಕಾರ ಧೋನಿ ವರ್ಷದಲ್ಲಿ 192 ಕೋಟಿ ರುಪಾಯಿಗೂ ಅಧಿಕ ಸಂಪಾದನೆ  ಮಾಡಿದ್ದಾರೆ. ರಾಂಚಿಯ ಸಣ್ಣ ಹಳ್ಳಿಯಿಂದ ಬಂದ ಧೋನಿ ಇಂದು ವಿಶ್ವಕ್ರಿಕೆಟ್ ಕಂಡ ದಿಗ್ಗಜ ನಾಯಕನಾಗಿ ಬೆಳೆದು ನಿಂತಿದ್ದಾರೆ. ಕ್ರಿಕೆಟ್ ಹಾಗೂ ಜಾಹೀರಾತಿನ ಮೂಲಕ ಧೋನಿ ಕೋಟಿ ಕೋಟಿ ಸಂಪಾದಿಸುತ್ತಾರೆ. ಅವರ ವ್ಯವಹಾರ ಸಾವಿರಾರು ಕೋಟಿ ರುಪಾಯಿ ಲೆಕ್ಕದಲ್ಲಿದೆ. 13ನೇ ಆವೃತ್ತಿಯ ಐಪಿಎಲ್  ಟೂರ್ನಿಗೆ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ ಸಜ್ಜಾಗಿದ್ದು, 4ನೇ ಕಪ್‌ ಮೇಲೆ ಕಣ್ಣಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com