ಮುಂಬೈ: ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಪುರುಷರ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಎಡಗೈ ದಾಂಡಿಗ ಶಿಖರ್ ಧವನ್ ಗೆ ತಂಡದ ಸಾರಥ್ಯ ನೀಡಲಾಗಿದೆ.
ಹೌದು.. ಮುಂಬರುವ ಜುಲೈ ತಿಂಗಳಲ್ಲಿ ಆಯೋಜನೆಯಾಗಿರುವ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡವನ್ನು ಪ್ರಕಟಿಸಿದ್ದು, ನಾಯಕ ಕೊಹ್ಲಿ ಮತ್ತು ಇತರೆ ಹಿರಿಯ ಆಟಾಗರರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಶಿಖರ್ ಧವನ್ ಗೆ ತಂಡದ ನಾಯಕತ್ವ ನೀಡಲಾಗಿದೆ. ಅಂತೆಯೇ ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಲಂಕಾ ಪ್ರವಾಸಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಕಳೆದ ಎರಡು ಐಪಿಎಲ್ ಋತುಗಳಲ್ಲಿ ಅಬ್ಬರಿಸಿದ್ದ ಯುವ ಬ್ಯಾಟ್ಸ್‌ಮನ್‌ಗಳಾದ ದೇವದತ್ತ್ ಪಡಿಕ್ಕಲ್ ಮತ್ತು ರಿತುರಾಜ್ ಗೈಕ್ವಾಡ್ ತಂಡ ಸೇರಿಕೊಂಡಿದ್ದಾರೆ. ಮುಖ್ಯವಾಗಿ ಐಪಿಎಲ್‌ನಲ್ಲಿ ತಮ್ಮ ಸಾಧನೆ ತೋರಿದ್ದ ಎಡಗೈ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಮೂಲಕ ರಾಣಾ ಲಂಕಾ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದಂತಾಗುತ್ತದೆ.
ಉಳಿದಂತೆ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದ ಎಡಗೈ ವೇಗದ ಬೌಲರ್ ಚೇತನ್ ಸಕರಿಯಾ ತಂಡಕ್ಕೆ ಆಯ್ಕೆಯಾಗಿದ್ದು, ಆಲ್‌ರೌಂಡರ್ ಕೃಷ್ಣಪ್ಪ ಗೌತಮ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ನವದೀಪ್ ಸೈನಿ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ.
13 ಜುಲೈನಿಂದ ಪ್ರವಾಸ ಆರಂಭ
ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಆತಿಥೇಯ ರಾಷ್ಟ್ರದ ವಿರುದ್ಧ 3 ಏಕದಿನ ಮತ್ತು 3 ಟಿ 20 ಪಂದ್ಯಗಳ ಸರಣಿಯನ್ನು ಆಡಲಿದೆ. ಏಕದಿನ ಪಂದ್ಯಗಳು ಜುಲೈ 13 ರಿಂದ ಪ್ರಾರಂಭವಾಗಲಿದ್ದು, ಟಿ 20 ಸರಣಿ ಜುಲೈ 21 ರಿಂದ ಪ್ರಾರಂಭವಾಗಲಿದೆ. ಏಕದಿನ ಪಂದ್ಯಗಳು ಜುಲೈ 13, 16 ಮತ್ತು 18 ರಂದು ನಡೆಯಲಿದೆ. ಟಿ 20 ಪಂದ್ಯಗಳು ಜುಲೈ 21, 23 ಮತ್ತು 25 ರಂದು ನಡೆಯಲಿದೆ. ಕೊರೊನಾ ವೈರಸ್ ದೃಷ್ಟಿಯಿಂದ, ಎಲ್ಲಾ ಪಂದ್ಯಗಳನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು.
ತಂಡ ಇಂತಿದೆ:
ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್ ಪಡಿಕ್ಕಲ್, ರುತುರಾಜ್ ಗೈಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಎಸ್ ಸ್ಯಾಮ್ಸನ್ (ವಿಕೆಟ್ ಕೀಪರ್), ಯಜ್ವೇಂದ್ರ ಚಹಲ್, ರಾಹುಲ್ ಚಹರ್ , ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವ್ದೀಪ್ ಸೈನಿ, ಚೇತನ್ ಸಕರಿಯಾ
ನೆಟ್ ಬೌಲರ್
ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್
ಒಂದೇ ಸಮಯದಲ್ಲಿ 2 ದೇಶಗಳ ವಿರುದ್ಧ ಸೆಣಸಾಟ
ಅಂದಹಾಗೆ ಟೀಂ ಇಂಡಿಯಾ ಇದೇ ಜೂನ್ 18 ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲ್ಲಿದ್ದು, ಬಳಿಕ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳಲ್ಲಿದೆ. ಇಂಗ್ಲೆಂಡ್ ನಲ್ಲಿ ಭಾರತ ತಂಡ ಆಗಸ್ಚ್ 4ರಿಂದ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಗಳನ್ನು ಆಡಲಿದೆ. ಅರೆ ಇದೇನಿದು ಜುಲೈನಲ್ಲಿ ಒಂದೆಡೆ ಇಂಗ್ಲೆಂಡ್ ಪ್ರವಾಸ ಮತ್ತೊಂದೆಡೆ ಶ್ರೀಲಂಕಾ ಪ್ರವಾಸ. ಇದು ಹೇಗೆ ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವಂತೆಯೇ ಇತ್ತ ಟೀಂ ಇಂಡಿಯಾದ ಮತ್ತೊಂದು ತಂಡ ಲಂಕಾ ಪ್ರವಾಸದಲ್ಲಿ ಪಾಲ್ಗೊಳ್ಳಲಿದೆ. ಈ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಘಟನೆ!
ಇನ್ನು ಒಂದೇ ಸಮಯದಲ್ಲಿ ಒಂದು ತಂಡ ಎರಡು ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯಾಗಿದೆ.
Advertisement