ಟಿ20 ವಿಶ್ವಕಪ್: ಆಗ ಹಸ್ಸಿ, ಈಗ ವೇಡ್; ಪಾಕ್ ಕೈಯಿಂದ ಗೆಲುವು ಕಸಿದ ಆಸಿಸ್ ಎಡಗೈ ಬ್ಯಾಟ್ಸಮನ್ ಗಳು!
ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನಕ್ಕೆ ಆಸಿಸ್ ಎಡಗೈ ಬ್ಯಾಟ್ಸಮನ್ ಗಳು ಸಿಂಹಸ್ವಪ್ನವೇ ಸರಿ.. ಈ ಹಿಂದೆ 2010ರಲ್ಲಿ ಮೈಕ್ ಹಸ್ಸಿ ಪಾಕ್ ಕೈಯಿಂದ ಗೆಲುವು ಕಸಿದಿದ್ದರು. ಇದೀಗ ಮತ್ತೆ ಅದೇ ಇತಿಹಾಸ ಪುನಾರಾವರ್ತನೆಯಾಗಿದ್ದು, ಗೆಲ್ಲುವ ಉತ್ಸಾಹದಲ್ಲಿದ್ದ ಪಾಕ್ ನಿಂದ ಮ್ಯಾಥ್ಯೂವೇಡ್ ಹ್ಯಾಟ್ರಿಕ್ ಸಿಕ್ಸ್ ಮೂಲಕ ಗೆಲುವು ಕಸಿದಿದ್ದಾರೆ.
ನಿನ್ನೆ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್ ಗಳಲ್ಲಿ ಬರೊಬ್ಬರಿ 176ರನ್ ಗಳಿಸಿ ಆಸ್ಟ್ರೇಲಿಯಾಗೆ ಗೆಲ್ಲಲು 177ರನ್ ಗಳ ಬೃಹತ್ ಗುರಿಯನ್ನು ನೀಡಿತು. ಆದರೆ ಈ ಬೃಹತ್ ಸವಾಲನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತದ ಹೊರತಾಗಿಯೂ ಡೇವಿಡ್ ವಾರ್ನರ್ (48ರನ್), ಮಾರ್ಕಸ್ ಸ್ಟಾಯಿನಿಸ್ (ಅಜೇಯ 40ರನ್) ಮತ್ತು ಮ್ಯಾಥ್ಯೂ ವೇಡ್ (ಅಜೇಯ 41 ರನ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಇನ್ನೂ ಆರು ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು.
ಈ ಪಂದ್ಯದಲ್ಲಿ ಪ್ರಮುಖವಾಗಿ ಪಾಕಿಸ್ತಾನದ ಕೈಯಿಂದ ಗೆಲುವು ಕಸಿದಿದ್ದು, ಆಸಿಸ್ ಎಡಗೈ ಬ್ಯಾಟ್ಸಮನ್ ಮ್ಯಾಥ್ಯೂವೇಡ್ ಎಂಬುದರಲ್ಲಿ ಸಂಶಯವೇ ಇಲ್ಲ. ಕೇವಲ 17 ಎಸೆತಗಳನ್ನು ಎದುರಿಸಿದ ವೇಡ್, 2 ಬೌಂಡರಿ ಮತ್ತು 4 ಸಿಕ್ಸರ್ ಗಳ ನೆರವಿನಿಂದ 41 ಸಿಡಿಸಿ ಆಸಿಸ್ ಗೆ ಗೆಲುವು ತಂದುಕೊಟ್ಟರು. ಅದರಲ್ಲೂ ಪ್ರಮುಖವಾಗಿ ಭಾರತದ ವಿರುದ್ಧದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದ ಪಾಕ್ ವೇಗಿ ಶಾಹೀನ್ ಅಫ್ರಿದಿ ಎಸೆದ 19ನೇ ಓವರ್ ನಲ್ಲಿ ವೇಡ್ ರನ್ ಗಳ ಭೇಟೆಯನ್ನೇ ಆಡಿದರು. ಅಫ್ರಿದಿ ಎಸೆದ ಆರು ಎಸೆತಗಳಲ್ಲಿ ಮೂರು ಸಿಕ್ಸರ್ ಸಹಿತ ಬರೊಬ್ಬರಿ 23 ರನ್ ಹರಿದುಬಂದಿತ್ತು. ಇದು ಪಾಕಿಸ್ತಾನ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಆಗ ಹಸ್ಸಿ, ಈಗ ವೇಡ್
ಇನ್ನು ಈ ಹಿಂದೆ 2010ರಲ್ಲೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತ ಪ್ರವೇಶಿಸಿದ್ದ ಪಾಕಿಸ್ತಾನ ತಂಡಕ್ಕೆ ಆಗ ಇದೇ ಆಸಿಸ್ ತಂಡದ ಡೇವಿಡ್ ವಾರ್ನರ್ ಕಂಟಕವಾಗಿ ಪರಿಣಮಿಸಿದ್ದರು. ಅಂದು ವಾರ್ನರ್ ಕೇವಲ 24 ಎಸೆತಗಳಲ್ಲಿ ಅಜೇಯ 60ರನ್ ಸಿಡಿ ಪಾಕಿಸ್ತಾನದಿಂದ ಗೆಲುವು ಕಸಿದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ