ವೀಡಿಯೊ: ಭಾರತದಲ್ಲಿನ ಬ್ರಿಟಿಷ್ ರಾಯಭಾರಿಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್

ಟೀಮ್ ಇಂಡಿಯಾದ ಕೋಚ್, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರಿಗೆ ಕನ್ನಡ ಕಲಿಸಿದ್ದಾರೆ. 
ರಾಹುಲ್ ದ್ರಾವಿಡ್ ಮತ್ತು ಬ್ರಿಟೀಷ್ ಹೈ ಕಮಿಷನರ್
ರಾಹುಲ್ ದ್ರಾವಿಡ್ ಮತ್ತು ಬ್ರಿಟೀಷ್ ಹೈ ಕಮಿಷನರ್

ನವದೆಹಲಿ: ಟೀಮ್ ಇಂಡಿಯಾದ ಕೋಚ್, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರಿಗೆ ಕನ್ನಡ ಕಲಿಸಿದ್ದಾರೆ. 

ಹೌದು.. ಈ ಬಗ್ಗೆ ಸ್ವತಃ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಟ್ವೀಟ್ ಮಾಡಿದ್ದು, ತಾವು ಕನ್ನಡದಲ್ಲಿ ಕೆಲ ಕ್ರಿಕೆಟ್ ಸಂಬಂಧಿ ಪದಗಳನ್ನು ಕಲಿಯುತ್ತಿರುವ ವೀಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಅಲ್ಲದೆ ಹೊಸ ಭಾಷೆ ಕಲಿಯುವ ತಮ್ಮ ಹುಮ್ಮಸ್ಸನ್ನು ನೋಡಿ ಕೋಚ್ ರಾಹುಲ್ ದ್ರಾವಿಡ್ ತಮಗೆ ಕನ್ನಡ ಕಲಿಸಿದ್ದಾರೆಂದು ಹೇಳಿಕೊಂಡಿದ್ದಾರೆ.

"ಇಂಗ್ಲೆಂಡ್ ಮತ್ತು ಭಾರತ ತಂಡಗಳು ಮ್ಯಾಚ್ ಆಡುತ್ತಿವೆ ಹಾಗೂ ನಾನು ಇಲ್ಲಿ ಭಾರತದ ಅತ್ಯುತ್ತಮ ಕ್ರಿಕೆಟ್ ಪದಗಳನ್ನು ಹುಡುಕುತ್ತಿದ್ದೇನೆ. ನಾವು ಬೆಂಗಳೂರಿಗೆ ಬಂದಿದ್ದೇವೆ ಹಾಗೂ ಕ್ರಿಕೆಟ್‍ನ ಅತ್ಯುತ್ತಮ ಆಟಗಾರರಲ್ಲೊಬ್ಬರಾದವರು ನನಗೆ ಮತ್ತು ನಿಮಗೆ ತಮ್ಮ ಕರ್ನಾಟಕ ರಾಜ್ಯದ ಭಾಷೆಯ ಒಂದು ಪದವನ್ನು ಕಲಿಸುತ್ತಾರೆ ಎಂದು ಅಲೆಕ್ಸ್ ವೀಡಿಯೋದಲ್ಲಿ ಹೇಳಿದಾಗ ರಾಹುಲ್ ಅವರಿಗೆ ʼಬೇಗ ಓಡಿʼ ಎಂಬ ಕನ್ನಡ ಪದವನ್ನು ಕಲಿಸುತ್ತಾರೆ.

ಆಗ ಅಲೆಕ್ಸ್ ಅವರು ʼಒನ್ ರನ್ʼ ಎಂದು ಹೇಳುತ್ತಾರೆ. ಆಗ ಇಬ್ಬರೂ ನಕ್ಕು ನಂತರ ಕೈಕುಲುಕುತ್ತಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಚರ್ಚೆಯಾಗುತ್ತಿದೆ. 1 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ ಹಾಗೂ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಅಲೆಕ್ಸ್ ಅವರು ಇನ್ನೊಂದು ವೀಡಿಯೋ ಪೋಸ್ಟ್ ಮಾಡಿ ಇಂಗ್ಲೆಂಡ್‍ನ ಕ್ರಿಕೆಟ್ ಅಭಿಮಾನಿಗಳಿಗೆ "ಸ್ವಲ್ಪ ಕ್ರಿಕೆಟ್ ಹಿಂದಿ ಹಾಗೂ ತಮಿಳು" ಕಲಿಸುವ ಪ್ರಯತ್ನ ನಡೆಸಿದ್ದರು. ಅಲ್ಲದೆ ಕಳೆದ ವಾರವಷ್ಟೇ ಅವರು ದೋಸೆ ತಿನ್ನುತ್ತಿರುವ ವೀಡಿಯೋ ಪೋಸ್ಟ್ ಮಾಡಿ "ಟ್ವಿಟ್ಟರ್ ನ ಶೇ92ರಷ್ಟು ಮಂದಿ ಹೇಳಿದ್ದು ಸರಿ, ಕೈಯ್ಯಲ್ಲಿಯೇ ತಿಂದರೆ ರುಚಿ ಅದ್ಭುತ, ಮಸಾಲೆ ದೋಸೆ, ಬೊಂಬಾಟ್ ಗುರು, ಏಕ್ ದಮ್ ಮಸ್ತ್,' ಎಂದು ಟ್ವೀಟ್ ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com