ಟಿ20 ವಿಶ್ವಕಪ್: ನಾಳೆ ಭಾರತ-ಪಾಕಿಸ್ತಾನ ಪಂದ್ಯ, ಗೆಲ್ಲೋರು ಯಾರು? ಅಂಕಿ-ಅಂಶ ಏನು ಹೇಳುತ್ತಿವೆ?

ಟಿ20 ವಿಶ್ವಕಪ್ ಟೂರ್ನಿಯ ಅಸಲಿ ಆಟ ಆರಂಭವಾಗಲಿದ್ದು ಸೂಪರ್ 12 ಪಂದ್ಯಗಳು ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ಟಿ20 ವಿಶ್ವಕಪ್ ಟೂರ್ನಿಯ ಅಸಲಿ ಆಟ ಆರಂಭವಾಗಲಿದ್ದು ಸೂಪರ್ 12 ಪಂದ್ಯಗಳು ಆರಂಭವಾಗಿದೆ.

ಈ ಟೂರ್ನಿಯ ಮೊದಲ ಹೈ ವೋಲ್ಟೇಜ್ ಪಂದ್ಯವೆಂದೇ ಕರೆಯಲಾಗುತ್ತಿರುವ ಭಾರತ-ಪಾಕಿಸ್ತಾನ ಪಂದ್ಯ ನಾಳೆ ಸಂಜೆ 7.30ಕ್ಕೆ ಆರಂಭವಾಗಲಿದೆ. ಎರಡು ವರ್ಷಗಳ ನಂತರ ಸಾಂಪ್ರದಾಯಿಕ ಎದುರಾಳಿ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿವೆ. ವಿಶ್ವಕಪ್‌ನಂತಹ ಪ್ರಮುಖ ವೇದಿಕೆಯಲ್ಲಿ ಭಾರತ ತಂಡ-ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆ ಹೊಂದಿದ್ದು, ಈ ಗೆಲುವಿನ ಓಟ ಮುಂದುವರಿಸಲು ಟೀಮ್ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಮತ್ತೊಂದು ಕಡೆ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಮೊದಲ ಗೆಲುವಿಗಾಗಿ ಹರಸಾಹಸ ಪಡಲಿದೆ.

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು ಕಳೆದ 2019ರ ಏಕದಿನ ವಿಶ್ವಕಪ್‌ನಲ್ಲಿ. ರೋಹಿತ್ ಶರ್ಮಾ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಭಾರತ ಆ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಅಂತೆಯೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಈ ವರೆಗೆ 5 ಬಾರಿ ಮುಖಾಮುಖಿಯಾಗಿದ್ದು ಭಾರತ 4ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ. ಹೀಗಾಗಿ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿಯೂ ಅಜೇಯ ಸಾಧನೆ ಮಾಡಿದೆ.

ಗೇಮ್ ಚೇಂಜಿಂಗ್ ಬ್ಯಾಟರ್ ಗಳು
ಭಾರತ

ಭಾರತ ತಂಡದ ಅತೀ ದೊಡ್ಡ ಶಕ್ತಿ ಎಂದರೆ ಅದು ಬಲಿಷ್ಠ ಬ್ಯಾಟಿಂಗ್ ಪಡೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಅಗ್ರ ಕ್ರಮಾಂಕದ ಬಲಿಷ್ಠ ಬ್ಯಾಟರ್ ಗಳಾಗಿದ್ದಾರೆ. ಮದ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ರಂತಹ ಆಟಗಾರರು ಸ್ಫೋಟಕ ಆಟವಾಡಿ ಪಂದ್ಯದ ದಿಕ್ಕನೇ ಬದಲಿಸುವ ತಾಕತ್ತು ಹೊಂದಿದ್ದಾರೆ. ಇನ್ನು ಕೆಳಕ್ರಮಾಂಕದಲ್ಲಿ ಆರ್ ಅಶ್ವಿನ್, ಅಕ್ಸರ್ ಪಟೇಲ್, ಮಹಮದ್ ಶಮಿ ಕೂಡ ಈ ಹಿಂದೆ ಬ್ಯಾಟ್ ನಿಂದಲೇ ಸದ್ದು ಮಾಡಿದ್ದರು. ಇನ್ನು ಬೌಲಿಂಗ್ ನಲ್ಲಿ ಆರ್ ಅಶ್ವಿನ್ ಟಿ20 ತಂಡಕ್ಕೆ ಮರಳಿರುವುದು ಆನೆಬಲ ಬಂದಂತಾಗಿದೆ. ಉಳಿದಂತೆ ಅನುಭವಿ ಬೌಲರ್ ಗಳಾದ ಮಹಮದ್ ಶಮಿ, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ, ದೀಪಕ್ ಚಹರ್ ಲಯದಲ್ಲಿರುವುದು ತಂಡಕ್ಕೆ ಉತ್ತಮ ಸಂಗತಿ. ಅಂತೆಯೇ ರವೀಂದ್ರ ಜಡೇಜಾ, ಆರ್ ಅಶ್ವಿನ್ ಸ್ಪಿನ್ ಜೋಡಿ ನೆರವಾಗುತ್ತದೆ.

ಪಾಕಿಸ್ತಾನ
ಭಾರತದಂತೆಯೇ ಪಾಕಿಸ್ತಾನ ಕೂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಅಗ್ರ ಕ್ರಮಾಂಕದಲ್ಲಿ ನಾಯಕ ಬಾಬರ್ ಅಜಮ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ ಉತ್ತಮ ರನ್ ಗಳಿಸಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ಶೊಯೆಬ್ ಮಲ್ಲಿಕ್, ಮಹಮದ್ ರಿಜ್ವಾನ್ ಸಮತೋಲಿತ ಆಟ ಪ್ರದರ್ಶಿಸಿದರೆ, ಆಲ್ ರೌಂಡರ್ ಇಮಾದ್ ವಾಸಿಂ, ಮಹಮದ್ ಹಫೀಜ್ ಸ್ಫೋಟಕ ಆಟದ ಮೂಲಕ ಪಂದ್ಯದ ಗತಿ ಬದಲಿಸಬಲ್ಲರು. ಕೆಳ ಕ್ರಮಾಂಕದಲ್ಲಿ ಶಾದಾಬ್ ಖಾನ್ ರನ್ ಗಳಿಕೆ ತಂಡಕ್ಕೆ ನೆರವಾಗಬಲ್ಲದು. ಇನ್ನು ಬೌಲಿಂಗ್ ನಲ್ಲಿ ಪಾಕಿಸ್ತಾನ ಇಬ್ಬರು ನುರಿತ ಬೌಲರ್ ಗಳನ್ನು ಇಟ್ಟುಕೊಂಡಿದ್ದು, ನಾಲ್ಕು ಮಂದಿ ಆಲ್ರೌಂಡರ್ ಗಳಿಗೆ ಮಣಿಹಾಕಲಾಗಿದೆ. 

ಬ್ಯಾಟಿಂಗ್ ನಲ್ಲಿ ಉಭಯ ತಂಡಗಳು ಸಮಾನವಾಗಿ ಕಂಡರೂ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಪಾಕಿಸ್ತಾನಕ್ಕಿಂತ ಭಾರತವೇ ಬಲಿಷ್ಠ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಹೀಗಾಗಿ ನಾಳಿನ ಪಂದ್ಯ ಗೆಲ್ಲುವಲ್ಲಿ ಭಾರತವೇ ಫೇವರಿಂಟ್ ಎಂದು ಹೇಳಬಹುದಾದರೂ, ಪಾಕಿಸ್ತಾನ ತಂಡ ಕೂಡ ನಾಳಿನ ಪಂದ್ಯಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿದೆ. ಹೀಗಾಗಿ ನಾಳಿನ ಪಂದ್ಯದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com