ಕಳಚಿತು ಅಜೇಯ ಕೊಂಡಿ: ಪಾಕಿಸ್ತಾನದ ಸರ್ವಾಂಗೀಣ ಹೋರಾಟಕ್ಕೆ ತಲೆಬಾಗಿದ ಭಾರತ, ಪಾಕ್ ಗೆ ಐತಿಹಾಸಿಕ ಜಯ

ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಎಂದೇ ಕರೆಯಲಾಗುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನದ ಆಲ್ರೌಂಡ್ ಆಟಕ್ಕೆ ಭಾರತ ಸೋಲೊಪ್ಪಿಕೊಂಡಿದೆ.
ಪಾಕಿಸ್ತಾನಕ್ಕೆ ಜಯ
ಪಾಕಿಸ್ತಾನಕ್ಕೆ ಜಯ

ದುಬೈ: ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಎಂದೇ ಕರೆಯಲಾಗುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನದ ಆಲ್ರೌಂಡ್ ಆಟಕ್ಕೆ ಭಾರತ ಸೋಲೊಪ್ಪಿಕೊಂಡಿದೆ.

ಆ ಮೂಲಕ ಭಾರತದ ಗರಿಮೆಯಲ್ಲಿದ್ದ 'ಅಜೇಯ' ಎಂಬ ಕೊಂಡಿ ಕಳಚಿ ಬಿದ್ದಿದೆ. ನಿನ್ನೆ ದುಬೈ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 12 ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ವಿರಾಟ್ ಕೊಹ್ಸಿ ಏಕಾಂಗಿ ಹೋರಾಟದಿಂದ ಸವಾಲಿನ ರನ್ ಪೇರಿಸಿತು. ನಾಯಕ ವಿರಾಟ್ ಕೊಹ್ಲಿ (57 ರನ್) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪಾಕಿಸ್ತಾನಕ್ಕೆ ಶಾಹೀನ್ ಅಫ್ರಿದಿ 2 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಮರ್ಮಾಘಾತ ನೀಡಿದರು. ಬಳಿಕ ಬ್ಯಾಟಿಂಗ್ ನಲ್ಲಿ ನಾಯಕ ಬಾಬರ್ ಅಜಂ ಮತ್ತು ರಿಜ್ವಾನ್ ಅಜೇಯ ಆಟವಾಡಿ ತಂಡಕ್ಕೆ ಐತಿಹಾಸಿಕ ಜಯ ತಂದು ಕೊಟ್ಟರು.

ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ನಾಯಕ ಬಾಬರ್ ಅಜಂ ಮತ್ತು ಆರಂಭಿಕ ಆಟಗಾರ ರಿಜ್ವಾನ್ ರ ಅಜೇಯ ಆಟದ ನೆರವಿನಿಂದ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಐಸಿಸಿ ವಿಶ್ವಕಪ್‌ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತಾದರೂ ದುಬೈಯಲ್ಲಿ ನಡೆದ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮರುಕಳಿಸಲು ವಿರಾಟ್ ಕೊಹ್ಲಿ ಬಳಗಕ್ಕೆ ಸಾಧ್ಯವಾಗಲಿಲ್ಲ. 

2007ರಲ್ಲಿ ಆರಂಭವಾದ ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತ ಮತ್ತು ಫೈನಲ್ ನಲ್ಲಿ ಪಾಕಿಸ್ತಾನವನ್ನು ಭಾರತ ಮಣಿಸಿತ್ತು. ಬಳಿಕ 2012, 2014, 2016 ಪಾಕಿಸ್ತಾನವನ್ನು ಮಣಿಸಿತ್ತು. ಆದರೆ ಇದೇ ಅಜೇಯ ಓಟ 2021ರಲ್ಲಿ ಸಾಧ್ಯವಾಗಲಿಲ್ಲ.  ಭಾರತ ನೀಡಿದ್ದ 152 ರನ್ ಗಳ ಸವಾಲಿನ ಗುರಿಯನ್ನು ಪಾಕಿಸ್ತಾನ ಯಾವುದೇ ಒತ್ತಡಕ್ಕೆ ಒಳಗಾಗದೇ ಯಶಸ್ವಿಯಾಗಿ ತಲುಪಿ ಐತಿಹಾಸಿಕ ಗೆಲುವು ದಾಖಲಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com