ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್‌ನ ಪಂದ್ಯಗಳು ಈಗಾಗಲೇ ಪ್ರಾರಂಭವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಕ್ರಿಕೆಟ್ ಲೋಕದ ಅತಿ ಹೆಚ್ಚು ವೀಕ್ಷಣೆಗಾರರನ್ನು ಕಬಳಿಸುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಭಾನುವಾರ ಮೆಲ್ಬರ್ನ್'ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಅ.24, 2021 ರಂದು ಟಿ20 ವಿಶ್ವಕಪ್ ನಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗಿದ್ದವು.
ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಭಾರತವನ್ನು ಸೋಲಿಸಿದ್ದ ಪಾಕಿಸ್ತಾನ ಸಂಭ್ರಮಿಸಿತ್ತು. ಆ ಸೋಲಿನ ಸೇಡಿಗಾಗಿ ಟೀಂ ಇಂಡಿಯಾ ಕಾಯುತ್ತಿತ್ತು. ಇದೀಗ ಹೊಸ ಉತ್ಸಾಹ, ಹೊಸ ಯೋಜನೆ, ತಂತ್ರಗಾರಿಕೆಯೊಂದಿಗೆ ಭಾರತ ಸಜ್ಜಾಗಿದೆ.
ಈ ಹಿಂದೆ ಮಳೆಯಿಂದಾಗಿ ಭಾರತ-ಪಾಕ್ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ, ಮೆಲ್ಬೋರ್ನ್ನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇದೀಗ ಕಡಿಮೆ ಆಗಿದ್ದು, ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ 100 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಸಿತ್ತು.
ಫೆಸಿಫಿಕ್ ಮಹಾಸಾಗರದಲ್ಲಿ ಲಾ ನಿನಾ ಶೀತ ಗಾಳಿ ಬೀಸುತ್ತಿದ್ದು, ಇದರಿಂದ ಆಸ್ಟ್ರೇಲಿಯಾದ ಬಹುತೇಕ ಕಡೆ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಮುಖ್ಯವಾಗಿ ಬ್ರಿಸ್ಬೇನ್, ಸಿಡ್ನಿ ಮತ್ತು ಮೆಲ್ಬೋರ್ನ್ ಭಾಗದಲ್ಲಿ ಹೆಚ್ಚಿನ ವರ್ಷಧಾರೆಯಾಗಲಿದೆ ಎನ್ನಲಾಗಿತ್ತು.
ಅಕ್ಟೋಬರ್ 23 ರಂದು ಮೆಲ್ಬೋರ್ನ್ ಭಾಗದಲ್ಲಿ ಶೇ.80 ರಷ್ಟು ಮಳೆಯಾಗಲಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಡೆಯುವುದು ಅನುಮಾನ ಎಂದು ಹವಾಮಾನ ತಜ್ಞರು ತಿಳಿಸಿದ್ದರು. ಅಲ್ಲದೆ ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾದ ಹವಾಮಾನ ಇಲಾಖೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿತ್ತು.
ಇದೀಗ ಮೆಲ್ಬರ್ನ್ ನಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಶನಿವಾರದ ಆಸ್ಟ್ರೇಲಿಯಾ ಕಾಲಮಾನ ಮಧ್ಯಾಹ್ನ 3 ಗಂಟೆಯ ವರೆಗೆ ಮೆಲ್ಬೋರ್ನ್ನಲ್ಲಿ ಮಳೆ ಸುರಿದಿಲ್ಲ. ಭಾನುವಾರ ಕೂಡ ಮಳೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಯಂ ಹೊರಗಡೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಣ ಕದನಕ್ಕೆ ಮಳೆ ಅಡ್ಡಿಯಾದರೆ ಪಂದ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಒಂದು ವೇಳೆ ಪಂದ್ಯ ನಡೆಸಲು ಅವಕಾಶವಿದ್ದರೆ ಭಾರತೀಯ ಕಾಲಮಾನ ಸಂಜೆ 4.30 ತನಕ ಕಾದು ನೋಡಬಹುದು.
ಇದರ ನಡುವೆ ಮಳೆ ನಿಂತರೆ ಓವರ್ ಕಡಿತದೊಂದಿಗೆ ಪಂದ್ಯವನ್ನು ಶುರು ಮಾಡಬಹುದು. ಇನ್ನು ಪಂದ್ಯ ನಡೆಸಲು ಕಟ್ ಆಫ್ ಟೈಮ್ ನಿಗದಿಪಡಿಸಿದ ಬಳಿಕ ಮಳೆ ನಿಂತರೆ ಉಭಯ ತಂಡಗಳಿಗೂ ತಲಾ 5 ಓವರ್ಗಳ ಪಂದ್ಯವನ್ನು ನಡೆಸಬಹುದು. ಒಂದು ವೇಳೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಯಾವುದೇ ಮೀಸಲು ದಿನ ಇರುವುದಿಲ್ಲ.
Advertisement