ಕ್ರಿಕೆಟ್: ಭಾರತ-ದಕ್ಷಿಣ ಆಫ್ರಿಕಾ 5ನೇ ಟಿ20 ಪಂದ್ಯ ಮಳೆಯಿಂದ ರದ್ದು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಭಾರತ-ದಕ್ಷಿಣ ಆಫ್ರಿಕಾ ನಡುವಿನ  5ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ.
ಪಂದ್ಯ ರದ್ದು
ಪಂದ್ಯ ರದ್ದು

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಭಾರತ-ದಕ್ಷಿಣ ಆಫ್ರಿಕಾ ನಡುವಿನ  5ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಣ ಪಂದ್ಯವು ಮಳೆಯ ಕಾರಣ ರದ್ದಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಆ ಮೂಲಕ ಐದು ಪಂದ್ಯಗಳ ಟಿ20 ಸರಣಿ 2-2ರಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದಂತಾಗಿದೆ.

ಟಾಸ್​ಗೂ ಮುನ್ನ ಮಳೆಯಾಗಿದ್ದರಿಂದ ಪಂದ್ಯವು ವಿಳಂಬವಾಗಿ ಶುರುವಾಗಿತ್ತು. ಅದರಂತೆ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಲುಂಗಿ ಎನ್​ಗಿಡಿ ಎಸೆದ 2ನೇ ಓವರ್​ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ (15) ಕ್ಲೀನ್ ಬೌಲ್ಡ್ ಆಗಿ ಹೊರನಡೆದರೆ, ಎನ್​ಗಿಡಿ ಎಸೆದ 4ನೇ ಓವರ್​ನ 2ನೇ ಎಸೆತದಲ್ಲಿ ಋತುರಾಜ್ ಗಾಯಕ್ವಾಡ್ (10) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಮತ್ತೆ ಮಳೆ ಸುರಿಯಲಾರಂಭಿಸಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಇದಾಗ್ಯೂ ಪಂದ್ಯವನ್ನು ಮುಂದುವರೆಸಲು ಬಯಸಿದರೂ ಮಳೆ ಬಿಡುವ ಸಾಧ್ಯತೆಗಳಿರಲಿಲ್ಲ. ಈ ಬಗ್ಗೆ ಚರ್ಚಿಸಿದ ಅಂಪೈರ್‌ಗಳಾದ ಅನಿಲ್ ಚೌಧರಿ ಮತ್ತು ಕೆಎನ್ ಅನಂತ ಪದ್ಮನಾಭನ್ 5 ಓವರ್‌ಗಳ ಪಂದ್ಯ ನಡೆಸುವ ಆಯ್ಕೆಗಳ ಬಗ್ಗೆ ಪರಿಶೀಲಿಸಿದರು. ಆದರೆ ನಿರಂತರವಾಗಿ ಮಳೆಯಾಗುತ್ತಿದ್ದರಿಂದ ಇದಕ್ಕೂ ಅವಕಾಶ ಇರಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದರು.

ಐಸಿಸಿ ನಿಮಯದ ಪ್ರಕಾರ ಮಳೆ ಬಂದರೆ ಕನಿಷ್ಠ 5 ಓವರ್​ಗಳ ಪಂದ್ಯ ನಡೆಯಬೇಕು. ಇದಕ್ಕಿಂತ ಕಡಿಮೆ ಓವರ್​ಗಳ ಪಂದ್ಯ ನಡೆಸಲಾಗುವುದಿಲ್ಲ. ಅಂದರೆ ಇಲ್ಲಿ ಒಂದು ತಂಡವು 5 ಓವರ್​ಗಳನ್ನು ಆಡಲೇಬೇಕು. ಇದಾಗ್ಯೂ ಸೂಪರ್ ಓವರ್​ ಮೂಲಕ ಸರಣಿ ಫಲಿತಾಂಶವನ್ನು ನಿರ್ಧರಿಸಲಾಗುವುದಿಲ್ಲ.

ಇನ್ನು ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಪಂದ್ಯಕ್ಕೆ ಮೀಸಲು ದಿನ ನೀಡದ ಕಾರಣ ಪಂದ್ಯ ನಾಳೆ ನಡೆಯುವುದಿಲ್ಲ. ಬದಲಾಗಿ ಸರಣಿಯನ್ನು ಸಮಬಲದೊಂದಿಗೆ ಅಂತ್ಯಗೊಳಿಸಲಾಗಿದೆ. ಅಂದರೆ ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 2-2 ಸಮಬಲ ಸಾಧಿಸಿದ್ದು, ಅದರಂತೆ ಉಭಯ ತಂಡಗಳನ್ನು ಸರಣಿ ವಿಜೇತರೆಂದು ಘೋಷಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com