![ಎಂಎಸ್ ಧೋನಿ](http://media.assettype.com/kannadaprabha%2Fimport%2F2023%2F6%2F1%2Foriginal%2FMS-Dhoni.jpg?w=480&auto=format%2Ccompress&fit=max)
ಮುಂಬೈ: ಭಾರತದ ಮಾಜಿ ನಾಯಕ ಹಾಗೂ ಇತ್ತೀಚೆಗಷ್ಟೇ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಗುರುವಾರ ಮುಂಬೈನ ಪ್ರಸಿದ್ಧ ಆಸ್ಪತ್ರೆಯಲ್ಲಿ ಎಡ ಮೊಣಕಾಲಿನ ಚಿಕಿತ್ಸೆಗೆ ಒಳಗಾಗಿದ್ದಾರೆ.
ಬಿಸಿಸಿಐ ವೈದ್ಯಕೀಯ ಸಮಿತಿಯ ಸದಸ್ಯರೂ ಆಗಿರುವ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ ಅವರು ಧೋನಿ ಅವರಿಗೆ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಅವರು ಆರೋಗ್ಯವಾಗಿದ್ದು, ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಇನ್ನು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5ನೇ ಐಪಿಎಲ್ ಪ್ರಶಸ್ತಿ ಗೆಲ್ಲಲು ನೇತೃತ್ವವಹಿಸಿದ್ದ ಧೋನಿ ಐಪಿಎಲ್ ಫೈನಲ್ ಪಂದ್ಯದ ನಂತರ ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸಿದ್ದರು. ಐಪಿಎಲ್ ಉದ್ದಕ್ಕೂ ಧೋನಿ ಎಡ ಮೊಣಕಾಲಿನ ನೋವಿನೊಂದಿಗೆ ಆಡಿದ್ದರು. ಅವರ ವಿಕೆಟ್ ಕೀಪಿಂಗ್ ಕೌಶಲ್ಯ ಅತ್ಯುತ್ತಮವಾಗಿದ್ದರೆ, ಅವರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಈ ನೋವು ಪರಿಣಾಮಬೀರಿತ್ತು. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ವಿಕೆಟ್ ನಡುವೆ ಓಡಲು ಅವರಿಗೆ ಕಷ್ಟವಾಗುತ್ತಿತ್ತು.
ಇನ್ನು ಹಾಲಿ ಐಪಿಎಲ್ ಟೂರ್ನಿ ಬಳಿಕ ನಿವೃತ್ತಿ ಘೋಷಣೆ ಮಾಡುವ ಕುರಿತು ಭಾರಿ ಚರ್ಚೆ ನಡೆದಿತ್ತು. ಆದರೆ ಧೋನಿ ಈ ಕುರಿತು ಚರ್ಚೆಗಳಿಗೆ ತೆರೆ ಎಳೆದಿದ್ದು, ಇನ್ನೂ ಒಂದಷ್ಟು ದಿನ ಕ್ರಿಕೆಟ್ ನಲ್ಲಿ ತೊಡಗಿಕೊಳ್ಳುವ ಭರವಸೆ ನೀಡಿದ್ದಾರೆ.
ಇದೇ ವಿಚಾರವಾಗಿ ಮಾಹಿತಿ ನೀಡಿರುವ ಸಿಎಸ್ ಕೆ ಆಡಳಿತ ಮಂಡಳಿ ಕೂಡ, ಧೋನಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮುಂದಿನ ಐಪಿಎಲ್‌ಗೆ ಆಡಲು ಫಿಟ್ ಆಗಲು ಅವರಿಗೆ ಸಾಕಷ್ಟು ಸಮಯವಿದೆ ಎಂದು ಹೇಳುವ ಮೂಲಕ ಮುಂದಿನ ಐಪಿಎಲ್ ಟೂರ್ನಿಗೂ ಧೋನಿ ಲಭ್ಯತೆ ಕುರಿತು ಸ್ಪಷ್ಟತೆ ನೀಡಿದೆ.
ಮಹೇಂದ್ರ ಸಿಂಗ್ ಧೋನಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
Advertisement