ODI ವಿಶ್ವಕಪ್ 2023: ಗೆಲುವಿನ ದಡ ಸೇರಿಸಿದ ಕೊಹ್ಲಿ, ರಾಹುಲ್; ಆಸೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ

ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದೆ.
ವಿರಾಟ್ ಕೊಹ್ಲಿ-ಕೆಎಲ್ ರಾಹುಲ್
ವಿರಾಟ್ ಕೊಹ್ಲಿ-ಕೆಎಲ್ ರಾಹುಲ್

ಚೆನ್ನೈ: ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದೆ.

ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾವನ್ನು ಭಾರತ 199 ರನ್ ಗಳಿಗೆ ಆಲೌಟ್ ಮಾಡಿತು. ಆಸೀಸ್ ನೀಡಿದ 200 ರನ್ ಗಳ ಸುಲಭ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗ ಮೊದಲ ಆಘಾತ ಎದುರಾಗಿತ್ತು. ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾದರು. 

ನಂತರ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಜೋಡಿ 167 ರನ್ ಗಳ ಜೊತೆಯಾಟ ನೀಡಿತು. ವಿರಾಟ್ ಕೊಹ್ಲಿ 85 ರನ್ ಗಳಿಸಿ ಔಟಾದರೆ ಕೆಎಲ್ ರಾಹುಲ್ ಅಜೇಯ 97 ರನ್ ಬಾರಿಸಿ ತಂಡಕ್ಕೆ ಗೆಲುವಿನ ಸಿಹಿ ತಂದುಕೊಟ್ಟರು. ಇನ್ನು ಹಾರ್ದಿಕ್ ಪಾಂಡ್ಯ ಅಜೇಯ 11 ರನ್ ಬಾರಿಸಿದ್ದಾರೆ. ಭಾರತ 41.2 ಓವರ್ ನಲ್ಲಿ 201 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 199 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ರವೀಂದ್ರ ಜಡೇಜಾ ಗರಿಷ್ಠ 3 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಒಬ್ಬ ಬ್ಯಾಟ್ಸ್‌ಮನ್ ಕೂಡ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇದರ ನಂತರ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸನ್ನು ನೀಡಿದರು. ಬುಮ್ರಾ ಮಿಚೆಲ್ ಮಾರ್ಷ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಇಲ್ಲಿಂದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅಧಿಕಾರ ವಹಿಸಿಕೊಂಡರು. ಇವರಿಬ್ಬರು ಅರ್ಧಶತಕದ ಜೊತೆಯಾಟವಾಡಿದರು.

ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವಾರ್ನರ್ 41 ರನ್‌ ಗಳಿಸಿದ್ದಾಗ ಕುಲದೀಪ್ ಯಾದವ್‌ಗೆ ಬಲಿಯಾದರು. ಅವರ ನಂತರ, ಸ್ಟೀವ್ ಸ್ಮಿತ್ ಅವರನ್ನು ಜಡೇಜಾ 46 ರನ್‌ಗಳಿಗೆ ಔಟ್ ಮಾಡಿದರು. ಆನಂತರ, ಲಬುಸ್ಚಾಗ್ನೆ 27 ರನ್‌ ಗಳಿಸಿದ್ದಾಗ ರವೀಂದ್ರ ಜಡೇಜಾ ಅವರ ಎಸೆತದಲ್ಲಿ ಹೊರನಡೆದರು. ಅಲೆಕ್ಸ್ ಕ್ಯಾರಿಯನ್ನೂ ಜಡೇಜಾ ಖಾತೆ ತೆರೆಯದೆ ವಾಪಸ್ ಕಳುಹಿಸಿದರು.

ಕುಲದೀಪ್ ಯಾದವ್ ಮತ್ತೊಮ್ಮೆ ತಮ್ಮ ಕೆಲಸವನ್ನು ಮಾಡಿದರು. 15 ರನ್ ಗಳಿಸಿದ್ದ ಮ್ಯಾಕ್ಸ್ ವೆಲ್ ರನ್ನು ಔಟ್ ಮಾಡಿದರು. ಇದಾದ ನಂತರ ಅಶ್ವಿನ್ 8 ರನ್ ಬಾರಿಸಿದ್ದ ಕ್ಯಾಮರಾನ್ ಗ್ರೀನ್ ಅವರನ್ನು ಔಟ್ ಮಾಡಿದರು.  ಒಟ್ಟಾರೆ ಆಸ್ಟ್ರೇಲಿಯಾ 49.3 ಓವರ್ ನಲ್ಲಿ 199ಕ್ಕೆ ಆಲೌಟ್ ಆಯಿತು. ಭಾರತದ ಪರ ಜಡೇಜಾ ಗರಿಷ್ಠ 3 ವಿಕೆಟ್ ಪಡೆದರು. ಕುಲದೀಪ್ 2 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com