ಚೆನ್ನೈ: ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವರ್ಸಸ್ ಭಾರತ ಪಂದ್ಯ ಸಾಕಷ್ಟು ವಿಚಾರಗಳಿಂದಾಗಿ ಸುದ್ದಿಯಾಗುತ್ತಿದ್ದು, ಇದೀಗ ಕ್ರಿಕೆಟಿಗರ ಸ್ನಾನದ ವಿಚಾರಕ್ಕಾಗಿಯೂ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಹೌದು.. ಆಸ್ಟ್ರೇಲಿಯಾ ನೀಡಿದ್ದ 200ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಮರ್ಮಾಘಾತ ಎದುರಿಸಿತ್ತು. ಆದರೆ ಬಳಿಕ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ 6 ವಿಕೆಟ್ ಗಳ ಅಂತರದಲ್ಲಿ ಪಂದ್ಯ ಗೆದ್ದು ಬೀಗಿತ್ತು.
ಆದರೆ ಚೇಸಿಂಗ್ ವೇಳೆ ಟೀಂ ಇಂಡಿಯಾದ ಕೆಎಲ್ ರಾಹುಲ್ ಸ್ನಾನ ಮಾಡಲು ತೆರಳಿ ಬೇಗನೆ ವಿಕೆಟ್ ಬಿದ್ದಿದ್ದರಿಂದ ಅರ್ಧಕ್ಕೇ ತಮ್ಮ ಸ್ನಾನವನ್ನು ಮೊಟಕುಗೊಳಿಸಿ ಪ್ಯಾಡ್ ಕಟ್ಟಿಕೊಂಡು ಕ್ರೀಡಾಂಗಣಕ್ಕೆ ಇಳಿದಿದ್ದರಂತೆ. ಈ ವಿಚಾರವನ್ನು ಸ್ವತಃ ಕೆಎಲ್ ರಾಹುಲ್ ಅವರೇ ಪಂದ್ಯದ ಬಳಿಕ ತಿಳಿಸಿದ್ದಾರೆ.
ಸ್ನಾನ ಮುಗಿಸಿ ಮೈದಾನಕ್ಕೆ ಓಡಿ ಬಂದ ರಾಹುಲ್
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೊದಲು ಬೌಲಿಂಗ್ ನಡೆಸಿದ ಭಾರತ ಘಾತಕ ಬೌಲಿಂಗ್ ನಡೆಸಿ ಕಮಿನ್ಸ್ ಪಡೆಯನ್ನು 199ಕ್ಕೆ ಕಟ್ಟಿ ಹಾಕಿತ್ತು. ಸಣ್ಣ ಮೊತ್ತವನ್ನು ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್ಗಳು ಬೆನ್ನಟ್ಟಬಹುದು ಎಂದು ಯೋಚಿಸಿ ರಾಹುಲ್ ಸ್ನಾನ ಮಾಡಿ ವಿಶ್ರಾಂತಿ ಪಡೆಯವ ಯೋಜನೆಯಲ್ಲಿದ್ದರಂತೆ. ಆದರೆ ಅವರು ಬಾತ್ ರೂಮ್ನಿಂದ ಹೊರ ಬರುತ್ತಿದ್ದಂತೆ 2 ರನ್ಗೆ ತಂಡದ ಮೂರು ವಿಕೆಟ್ ಉರುಳಿ ಹೋಗಿತ್ತು. ಇದರಿಂದ ಗಾಬರಿಯಾದ ರಾಹುಲ್ ಸರಿಯಾಗಿ ದೇಹದ ಒದ್ದೆಯನ್ನು ಒರೆಸಿಕೊಳ್ಳದೆ ತರಾತುರಿಯಲ್ಲಿ ಪ್ಯಾಟ್ ಮತ್ತು ಗ್ಲೌಸ್ ಕಟ್ಟಿಕೊಂಡು ಮೈದಾನಕ್ಕೆ ಓಡಿ ಬಂದೆ ಎಂದು ಹೇಳಿದ್ದಾರೆ.
1983ರಲ್ಲಿ ಕಪಿಲ್ ದೇವ್ ಗೂ ಎದುರಾಗಿತ್ತು ಈ ಪರಿಸ್ಥಿತಿ
ಇದೇ ರೀತಿಯ ಸಂಕಟ ಅಂದು ಕಪಿಲ್ ದೇವ್ಗೂ ಎದುರಾಗಿತ್ತು. ಅದು ಜಿಂಬಾಬ್ವೆ ವಿರುದ್ಧದ ಲೀಗ್ ಪಂದ್ಯ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡೊಡನೆ ಕಪಿಲ್‌ದೇವ್ ಬಾತ್‌ರೂಮ್‌ಗೆ ತೆರಳಿದ್ದರು. ಫ್ರೆಶ್ ಆಗಿ ಬ್ಯಾಟಿಂಗಿಗೆ ಇಳಿಯುವುದು ಅವರ ಉದ್ದೇಶವಾಗಿತ್ತು. ಆದರೆ ಜಿಂಬಾಬ್ವೆ ಘಾತಕ ಬೌಲಿಂಗ್ ದಾಳಿ ನಡೆಸಿದ ಪರಿಣಾಮ ತಂಡದ ಮೊತ್ತ 9 ರನ್ ಆಗುವಷ್ಟರಲ್ಲಿ ಗಾವಸ್ಕರ್, ಶ್ರೀಕಾಂತ್, ಮೊಹಿಂದರ್ ಮತ್ತು ಸಂದೀಪ್ ಪಾಟೀಲ್ ವಿಕೆಟ್ ಉರುಳಿತ್ತು.
ಈ ವೇಳೆ ಒತ್ತಡಕ್ಕೊಳಗಾದ ಆಟಗಾರರೆಲ್ಲ ಸೀದಾ ಬಾತ್‌ರೂಮ್ ಕಡೆ ಹೆಜ್ಜೆ ಹಾಕಿದ್ದರು. ಹೊರಗಿನಿಂದಲೇ ಕಪಿಲ್‌ಗೆ ವಿಷಯ ತಿಳಿಸಿದ್ದರು. ಕಪಿಲ್ ಅರ್ಧಕ್ಕೆ ಸ್ನಾನ ಮುಗಿಸಿ ಪ್ಯಾಡ್ ಕಟ್ಟಿ ಅಂಗಳಕ್ಕಿಳಿದರು. ಭಾರತದ 5 ವಿಕೆಟ್ 17 ರನ್ನಿಗೆ ಬಿದ್ದಾಗ ಕಪಿಲ್ ಸುಂಟರಗಾಳಿಯಂಥ ಬ್ಯಾಟಿಂಗ್ ನಡೆಸ ಅಜೇಯ 175 ರನ್ ಬಾರಿಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಇದು ಭಾರತೀಯ ಏಕದಿನ ಚರಿತ್ರೆಯ ಮೊದಲ ಶತಕವಾದರೆ, ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು. ಇತ್ತೀಚೆಗೆ ತೆರೆಕಂಡ 83 ಎನ್ನುವ ಏಕದಿನ ವಿಶ್ವಕಪ್ ಜಯಭೇರಿಯನ್ನು ಆಧರಿಸಿದ ಹಿಂದಿ ಚಿತ್ರದಲ್ಲಿ ಈ ಘಟನೆಯನ್ನೂ ತೋರಿಸಲಾಗಿದೆ.
ಕಪಿಲ್ ಅವರಂತೆ ರಾಹುಲ್ ಕೂಡ ನಿನ್ನೆ ಜವಾಬ್ದಾರಿಯುತ ಬ್ಯಾಟಿಂಗ್ ನಡಸಿ ಅಜೇಯ 97 ರನ್ಗಳ ಕೊಡುಗೆ ನೀಡಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟರು. ಒಟ್ಟಾರೆ ತರಾತುರಿಯಲ್ಲಿ ಕ್ರೀಸ್ಗೆ ಬಂದ ಉಭಯ ಆಟಗಾರರು ಕೂಡ ಪಂದ್ಯವನ್ನು ಗೆಲ್ಲಿಸಿದ್ದು ವಿಶ್ವಕಪ್ನ ಸ್ಮರಣೀಯ ಘಟನೆಯ ಪುಟ ಸೇರಿದೆ.
Advertisement