ಐಸಿಸಿ ವಿಶ್ವಕಪ್ 2023: 31 ವರ್ಷಗಳ ಆಸ್ಟ್ರೇಲಿಯಾದ ಜಯದ ದಾಖಲೆಗೆ ಬ್ರೇಕ್ ಹಾಕಿದ ಭಾರತ

ಐಸಿಸಿ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ 31 ವರ್ಷಗಳಿಂದ ಆರಂಭಿಕ ಪಂದ್ಯಗಳ ಜಯದ ದಾಖಲೆ ಹೊಂದಿದ್ದ ಪ್ರಬಲ ಆಸ್ಟ್ರೇಲಿಯಾಗೆ ಭಾರತ ತಂಡ ಆಘಾತ ನೀಡಿದ್ದು, ದಾಖಲೆಗೆ ಬ್ರೇಕ್ ಹಾಕಿದೆ.
ಭಾರತಕ್ಕೆ ಜಯ
ಭಾರತಕ್ಕೆ ಜಯ

ಚೆನ್ನೈ: ಐಸಿಸಿ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ 31 ವರ್ಷಗಳಿಂದ ಆರಂಭಿಕ ಪಂದ್ಯಗಳ ಜಯದ ದಾಖಲೆ ಹೊಂದಿದ್ದ ಪ್ರಬಲ ಆಸ್ಟ್ರೇಲಿಯಾಗೆ ಭಾರತ ತಂಡ ಆಘಾತ ನೀಡಿದ್ದು, ದಾಖಲೆಗೆ ಬ್ರೇಕ್ ಹಾಕಿದೆ.

ಹೌದು.. ನಿನ್ನೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಹಾಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಚ್ರೇಲಿಯಾ ತಂಡ 199ರನ್ ಗಳಿಗೆ ಆಲೌಟ್ ಆಗಿತ್ತು. 200ರನ್ ಗಳ ಗುರಿ ಪಡೆದ ಭಾರತ ತಂಡದ ಕೇವಲ 2 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ  ಕೆಎಲ್ ರಾಹುಲ್ (ಅಜೇಯ 97 ರನ್) ಮತ್ತು ವಿರಾಟ್ ಕೊಹ್ಲಿ (85ರನ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 41.2 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 201ರನ್ ಕಲೆ ಹಾಕಿ 6 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತು. 

ಆ ಮೂಲಕ ಕಳೆದ 31 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಗೆಲ್ಲುತ್ತಾ ಸಾಗಿದ್ದ ಆಸ್ಚ್ರೇಲಿಯಾದ ಗೆಲುವಿನ ಓಟಕ್ಕೆ ಭಾರತ ತಂಡ ಬ್ರೇಕ್ ಹಾಕಿದೆ. ಆ ಮೂಲಕ 1992 ರ ನಂತರ ಮೊದಲ ಬಾರಿಗೆ ತನ್ನ ಆರಂಭಿಕ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೋತಿದೆ. 1992 ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 37 ರನ್‌ಗಳಿಂದ ಚತುರ್ವಾರ್ಷಿಕ ಪಂದ್ಯದಲ್ಲಿ ಕೊನೆಯ ಬಾರಿ ಆಸಿಸ್ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ಸೋತಿತ್ತು. 

ಬಳಿಕ ನಡೆದ 1996 ರ ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಕಳೆದುಕೊಂಡಿತ್ತು. ಆದರೆ ಅಂದು ರಾಜಕೀಯ ಉದ್ವಿಗ್ನತೆಯ ಕಾರಣ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ದೇಶಗಳು ಕೊಲಂಬೊಗೆ ಪ್ರಯಾಣಿಸದಿರಲು ನಿರ್ಧರಿಸಿದ್ದವು. ಹೀಗಾಗಿ ಆಸ್ಚ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗಿತ್ತು. ಆ ಬಳಿಕ ನಡೆದ 2003ರ ವಿಶ್ವಕಪ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಜಯಿಸಿತ್ತು. ಅಂತೆಯೇ 2007 ವಿಶ್ವಕಪ್ ಟೂರ್ನಿಯ ಸ್ಕಾಟ್ಲೆಂಡ್ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ, 2011ರ ಜಿಂಬಾಬ್ವೆ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ, 2015ರ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮತ್ತು 2019ರ ವಿಶ್ವಕಪ್ ಟೂರ್ನಿಯ ಆಫ್ಘಾನಿಸ್ತಾನದ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಭೇರಿ ಭಾರಿಸಿತ್ತು.

ಆದರೆ ಇದೀಗ ಭಾರತದ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ತನ್ನ ಗೆಲುವಿನ ನಾಗಾಲೋಟವನ್ನು ಸ್ಥಗಿತಗೊಳಿಸಿದೆ.

Australia's opening match in WC this century:
2003 - Won vs PAK
2007 - Won vs SCO
2011 - Won vs ZIM
2015 - Won vs ENG
2019 - Won vs AFG
2023 - Lost vs IND*

ಚೆನ್ನೈನಲ್ಲಿ 36 ವರ್ಷಗಳ ಚೆನ್ನೈ ಮೈದಾನದ ಗೆಲುವಿನ ಓಟಕ್ಕೂ ಭಾರತ ಬ್ರೇಕ್
ಅಂತೆಯೇ ವಿಶ್ವಕಪ್ ಟೂರ್ನಿ ಭಾರತದಲ್ಲಿ ಆಡಿದಾಗಲೆಲ್ಲಾ ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಆಸ್ಚ್ರೇಲಿಯಾ ಎಂದಿಗೂ ಸೋಲೇ ಕಂಡಿರಲಿಲ್ಲ. ಆದರೆ ನಿನ್ನೆಯ ಭಾರತ ತಂಡದ ವಿರುದ್ಧದ ಸೋಲು ಈ ಜೈತ್ರ ಯಾತ್ರೆಗೂ ಬ್ರೇಕ್ ಹಾಕಿದೆ. 1987ರ ಬಳಿಕ 1996ರವರೆಗೆ ಚೆನ್ನೈ ನಲ್ಲಿ ನಡೆದ ಎಲ್ಲ ವಿಶ್ವಕಪ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತ್ತು. ಆದರೆ ನಿನ್ನೆ ಈ ಗೆಲುವಿನ ಸರಪಳಿ ಕಳಚಿದಂತಾಗಿದೆ. ಅಂತೆಯೇ ನಿನ್ನೆ ಸೋಲು ಸೇರಿದಂತೆ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಆಡಿದ ಒಟ್ಟಾರೆ 19 ವಿಶ್ವಕಪ್ ಪಂದ್ಯಗಳ ಪೈಕಿ 4ರಲ್ಲಿ ಮಾತ್ರ ಸೋತಿದೆ.

Australia at Chennai in ODI World Cup
Won vs India, 1987
Won vs Zimbabwe, 1987
Won vs New Zealand, 1996
Lost vs India, 2023*

2007ರ ಬಳಿಕ ಭಾರತ ಅಜೇಯ
ಇದೇ ರೀತಿಯ ದಾಖಲೆಯನ್ನು ಭಾರತ ತಂಡ ಕೂಡ ಹೊಂದಿದ್ದು, 2007ರ ಬಳಿಕ ನಡೆದ ವಿಶ್ವಕಪ್ ಟೂರ್ನಿಗಳ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸೋಲೇ ಕಂಡಿಲ್ಲ. 2003ರ ವಿಶ್ವಕಪ್ ಟೂರ್ನಿಯ ತನ್ನ ಪಂದ್ಯದಲ್ಲಿ ಭಾರತ ತಂಡ ನೆದರ್ಲೆಂಡ್ ತಂಡವನ್ನು ಸೋಲಿಸಿತ್ತು. ಬಳಿಕ 2007ರ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿತ್ತು. ಆ ಬಳಿಕ ಮತ್ತೆ 2011ರ ವಿಶ್ವಕಪ್ ನಲ್ಲಿ ಮತ್ತದೇ ಬಾಂಗ್ಲಾದೇಶದ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿತ್ತು. ಬಳಿಕ 2015ರ ವಿಶ್ವಕಪ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಶುಭಾರಂಭ ಮಾಡಿತ್ತು. 2019ರ ವಿಶ್ವಕಪ್ ನಲ್ಲೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಶುಭಾರಂಭ ಮಾಡಿತ್ತು. ಇದೀಗ ಆಸ್ಚ್ರೇಲಿಯಾ ತಂಡವನ್ನು ತನ್ನ ಮೊದಲ ಪಂದ್ಯದಲ್ಲಿ ಸೋಲಿಸಿ ಈ ಬಾರಿಯೂ ಶುಭಾರಂಭ ಮಾಡಿದೆ.

India in WC opening match in this century:
2003 - Won vs NETH
2007 - Lost vs BAN
2011 - Won vs BAN
2015 - Won vs PAK
2019 - Won vs SA
2023 - Won vs AUS*

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com